ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮ ಮತ್ತು ಪ್ರಮುಖ ದೇವಾಲಯಗಳಲ್ಲಿ ವಿಜಯದಶಮಿ ಶೂರ ಸಂಹಾರ ಉತ್ಸವಗಳು ನವರಾತ್ರಿ ಹಬ್ಬ ಪೂರ್ಣಗೊಳ್ಳುವರಗೂ ಜರುಗುತ್ತದೆ. ದೇವಿಗೆ ಪ್ರತಿ ದಿನ ವಿನೂತನ ಮತ್ತು ವಿಶೇಷ ಪೂಜಾ ಅಲಂಕಾರ ನಡೆಯುತ್ತಿದ್ದು, ಪ್ರತಿನಿತ್ಯ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಧನ್ಯತೆ ಮೆರೆಯುತ್ತಾರೆ.
ಪಟ್ಟಣದ ಗೌರೀಶ್ವರ ಹಾಗೂ ಭೂ ವರಹಾಸ್ವಾಮಿ ಆಲಯದಲ್ಲೂ ಒಂಭತ್ತು ದಿನಗಳ ಕಾಲ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಸಂಜೆ ನಡೆಯುವ ವಿಶೇಷ ದೈವಿಕ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡು, ದೇವರ ಅಲಂಕಾರಗಳನ್ನು ಕಣ್ತುಂಬಿಕೊಳ್ಳುತ್ತಾರೆ.
ಬನ್ನಿ ಮಂಟಪಕ್ಕೆ ಮೆರವಣಿಗೆ: ವಿಜಯದಶಮಿ ದಿನ ಗೌರೀಶ್ವರ ದೇವಳದಿಂದ ಬಳೆಪೇಟೆ ಬನ್ನಿ ಮಂಟಪದ ತನಕ ಜಗನ್ಮಾತೆಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ. ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರು ಅರ್ಚನೆ ಮತ್ತು ಮಹಾ ಮಂಗಳಾರತಿ ನೆರವೇರಿಸುವ ವಾಡಿಕೆ ಇದೆ. ಪಂಚಲಿಂಗೇಶ್ವರ ಮಂದಿರದಲ್ಲೂ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಅರ್ಚಕ ಚಂದ್ರಮೌಳಿ ಹೇಳಿದರು.
ನವರಾತ್ರಿ ಆರಂಭದಿಂದಲೇ ತಾಯಿ ದುರ್ಗೆಯ 9 ರೂಪಗಳನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಚಾಮುಂಡಿ ತನ್ನ ಸಂಗಡಿಗರೊಂದಿಗೆ ಭೂಮಿಗೆ ಬಂದು ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇದ್ದು, ಎಂಟನೇ ದಿನದಂದು ಭಕ್ತರು ಮಾತೆ ಮಹಾಗೌರಿಗೆ ಫಲ ಪುಷ್ಪ ಸಮರ್ಪಿಸಿ ಕುಟುಂಬದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ ಎಂದು ಭಕ್ತರು ನಂಬಿದ್ದಾರೆ.
ಶರದ್ ನವರಾತ್ರಿ ಅ. 3 ರಿಂದ ಪ್ರಾರಂಭವಾಗಿ ಅ. 12ಕ್ಕೆ ಸಂಪನ್ನಗೊಳ್ಳುತ್ತದೆ. ಈ ದಿನಗಳಲ್ಲಿ ದೇವಿಯ ವಿವಿಧ ರೂಪಗಳನ್ನು ಬಣ್ಣದ ರೂಪದಲ್ಲಿ ಅರ್ಚಿಸಲಾಗುತ್ತದೆ. ಕಿತ್ತಳೆ, ಬಿಳಿ, ಕೆಂಪು, ನೀಲಿ, ಹಳದಿ ಮತ್ತು ಹಸಿರು ವರ್ಣದ ಉಡುಪು ಧರಿಸಿ ಸ್ತ್ರೀಯರು ಜಗನ್ಮಾತೆ ಪೂಜಿಸುವ ಟ್ರೆಂಡ್ ಈಚೆಗೆ ಮುನ್ನಲೆಗೆ ಬಂದಿದೆ. ದುರ್ಗಾದೇವಿಯ ಒಂಭತ್ತು ಅವತಾರಗಳಾದ ಚಂದ್ರಘಂಟಾ, ಕೂಸ್ಮಾಂಡಾ, ಶೈಲಪುತ್ರಿ, ಬ್ರಹ್ಮಚಾರಿಣಿ, ಕಾಳರಾತ್ರಿ, ಮಹಾಗೌರಿ ಹಾಗೂ ಸಿದ್ಧಿರಾತ್ರಿ ಎಂದು ಚಿತ್ತೈಸಿ ಪೂಜಿಸುತ್ತಾರೆ ಸ ಎಂದು ಬೆಟ್ಟದ ಆಗಮಿಕ ರವಿಕುಮಾರ್ ಹೇಳಿದರು.
ಹೊನ್ನೂರು ಗ್ರಾಮದ ಪುರಾತನ ಚಾಮುಂಡಿ ಮಂದಿರದಲ್ಲಿ ದೇವಿಗೆ ಬಗೆಬಗೆ ಹೂ ಹಾರಗಳ ಸಿಂಗಾರ ದಿನವಿಢಿ ನಡೆಯುತ್ತಿದೆ. ಅಂತಿಮ ದಿನ ಸಾವಿರಾರು ಮಹಿಳಾ ಭಕ್ತರು ಶ್ರದ್ದಾ ಭಕ್ತಿಗಳಿಂದ ಶರನ್ನವರಾತ್ರಿ ಅರ್ಚನೆಗಳನ್ನು ನೆರವೇರಿಸಿ ಭಕ್ತಿ ಸಮರ್ಪಿಸುತ್ತಾರೆ. ಈ ವೇಳೆ ಮಹಾ ಮಂಗಳಾರತಿ,
ಅನ್ನ ಸಂತರ್ಪಣೆ ಮತ್ತು ಪ್ರಸಾದ ವಿನಿಮಯ ಕಾರ್ಯಗಳು ಸಾಂಗವಾಗಿ ನಡೆಯುತ್ತವೆ. ‘ಅಂದು ದುರ್ಗಾ ದೇವಿ ಮಹಿಷಾಸುರನನ್ನು ವಧಿಸುತ್ತಾಳೆ. ಅಂದೇ ವಿಜಯದಶಮಿ ಆರಂಭವಾಯಿತು’’ ಎಂದು ಸ್ಥಳ ಪುರಾಣಗಳು ತಿಳಿಸುತ್ತವೆ,
ಕೊನೆಯ ದಿನ ಹೊನ್ನೂರು ಗ್ರಾಮದಲ್ಲಿ ಚಾಮುಂಡೇಶ್ವರಿ, ವೀರಭದ್ರಸ್ವಾಮಿ, ಬಸವೇಶ್ವರ ಮತ್ತು ಮಂಟೇಸ್ವಾಮಿ ದೇವಾಲಯದಿಂದ ದಸರಾ ಮೆರವಣಿಗೆ ಹೊರಡಲಿದೆ. ಅಂದು ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬರುವ ಸಾವಿರಾರು ಭಕ್ತರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಒಲುಮೆಯಿಂದ ಪಾಲ್ಗೊಂಡು ಹರಕೆ ತೀರಿಸುತ್ತಾರೆ ಎಂದು ಗ್ರಾಮಸ್ಥರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.