ADVERTISEMENT

ಯಳಂದೂರು: ರಾಸಾಯನಿಕ ಮುಕ್ತ ಕಪ್ಪು ಅಚ್ಚು ಬೆಲ್ಲಕ್ಕೆ ಹೆಚ್ಚಿದ ಬೇಡಿಕೆ

ರಾಸಾಯನಿಕ ಮುಕ್ತ ಬೆಲ್ಲ, ಕಾಕಂಬಿ ಉತ್ಪಾದನೆಯತ್ತ ರೈತರ ಚಿತ್ತ

ಎನ್.ಮಂಜುನಾಥಸ್ವಾಮಿ
Published 20 ಮೇ 2025, 7:18 IST
Last Updated 20 ಮೇ 2025, 7:18 IST
ಯಳಂದೂರು ತಾಲ್ಲೂಕಿನ ಗೂಳಿಪುರದ ಆಲೆಮನೆಯಲ್ಲಿ ಸಾವಯವ ಬೆಲ್ಲವನ್ನು ತಯಾರಿಸುತ್ತಿರುವ ಶ್ರಮಿಕರು
ಯಳಂದೂರು ತಾಲ್ಲೂಕಿನ ಗೂಳಿಪುರದ ಆಲೆಮನೆಯಲ್ಲಿ ಸಾವಯವ ಬೆಲ್ಲವನ್ನು ತಯಾರಿಸುತ್ತಿರುವ ಶ್ರಮಿಕರು    

ಯಳಂದೂರು: ತಾಲ್ಲೂಕಿನಲ್ಲಿ ಬಿಳಿಯ ಬೆಲ್ಲದ ಬದಲಾಗಿ ಕಪ್ಪುಬೆಲ್ಲ ಖರೀದಿಯತ್ತ ಗ್ರಾಹಕರು ಆಸಕ್ತಿ ತೋರುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಪ್ರತಿವರ್ಷ ಕಬ್ಬು ಬೆಳೆಗಾರರ ಸಂಖ್ಯೆ ಕುಸಿಯುತ್ತಿದ್ದು ಬೆಲ್ಲ ತಯಾರಿಸುವ ಆಲೆಮನೆಗಳ ಸಂಖ್ಯೆಯೂ ಕ್ಷೀಣವಾಗುತ್ತಿದೆ. ಇದರ ನಡುವೆಯೂ ಈಚೆಗೆ ಸಾರ್ವಜನಿಕರು ಕಪ್ಪು ಬೆಲ್ಲ ಕೊಳ್ಳುವತ್ತ ಚಿತ್ತ ಹರಿಸುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಮನೆಯ ಬಳಕೆಯಿಂದ ಹಿಡಿದು ಮದುವೆ, ಗೃಹಪ್ರವೇಶ ಸಹಿತ ಎಲ್ಲ ಸಮಾರಂಭಗಳಿಗೆ ಶುದ್ಧ ಬೆಲ್ಲಕ್ಕೆ ಮುಂಗಡ ನೀಡುತ್ತಿರುವುದು ಬೇಡಿಕೆ ಹೆಚ್ಚಾಗುವಂತೆ ಮಾಡಿದೆ.

‘ಒಂದು ವಾರದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಕಬ್ಬು ಪೂರೈಕೆ ಕಡಿಮೆಯಾಗಿದೆ. ಆಲೆಮನೆಗಳು ಬಿಸಿಲಿನ ಕೊರತೆಯಿಂದ ಬೆಲ್ಲದ ಉತ್ಪಾದನೆ ನಿಲ್ಲಿಸಿವೆ. ಉರುವಲಿಗೆ ಅನುಕೂಲ ಇರುವ ಆಲೆಮನೆಗಳು ಹೆಚ್ಚು ವೆಚ್ಚ ಬೇಡುವ ಬಿಳಿ ಬೆಲ್ಲದ ಬದಲಾಗಿ, ಕಡಿಮೆ ವೆಚ್ಚದಲ್ಲಿ ತಯಾರಾಗುವ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸುತ್ತಿದ್ದು, ಸ್ಥಳದಲ್ಲಿಯೇ ಮಾರಾಟವಾಗುತ್ತಿದೆ’ ಎನ್ನುತ್ತಾರೆ ಆಲೆಮನೆ ಮಾಲೀಕ ಗೂಳಿಪುರ ಸಿದ್ದಲಿಂಗಸ್ವಾಮಿ.

ADVERTISEMENT

‘1 ಸಾವಿರ ಬಿಳಿ ಬೆಲ್ಲ ಉತ್ಪಾದಿಸಲು 1 ಸಾವಿರ ಖರ್ಚು ತಗುಲುತ್ತದೆ. ಬೆಲ್ಲದ ಒಳಪು ಹೆಚ್ಚಿಸಲು ಸೋಡಿಯಂ ಬೈಕಾರ್ಬೊನೇಟ್, ಸೋಡಿಯಂ ಕಾರ್ಬೋನೇಟ್, ಅಂಟು ಹಾಗೂ ಸಂಸ್ಕರಿಸಿದ ಕೇಸರಿ, ಅಂಟು, ಬಣ್ಣ ಸೇರಿಸಲಾಗುತ್ತದೆ. ಇದರಿಂದ ಕೇಸರಿ ವರ್ಣಕ್ಕೆ ತಿರುಗುತ್ತದೆ. ಇದು ಬೆಲ್ಲ ಉತ್ಪಾದಕರಿಗೆ ಹೆಚ್ಚುವರಿ ವೆಚ್ಚವನ್ನು ಬೇಡುತ್ತದೆ’ ಎನ್ನುತ್ತಾರೆ ರೈತ ಅಂಬಳೆ ನಾಗೇಶ್.

ಸಾವಯವ ವಿಧಾನದಲ್ಲಿ ಬೆಲ್ಲದ ಶುದ್ಧೀಕರಣಕ್ಕೆ ಸೋಡ ಬಳಸಲಾಗುತ್ತದೆ. ಹೆಚ್ಚಿನ ಒಳಸುರಿ ಇರುವುದಿಲ್ಲ, ಗ್ರಾಮೀಣ ಪ್ರದೇಶ ಮತ್ತು ಪಟ್ಟಣ ಪ್ರದೇಶಗಳ ಬೇಡಿಕೆಗೆ ಸ್ಪಂದಿಸಬಹುದು. ಸಾಗಣೆ ವೆಚ್ಚವೂ ಇರುವುದಿಲ್ಲ. ಹಾಗಾಗಿ, ಮನೆ ಬಳಕೆಗೆ ಅಗತ್ಯ ಕಾಕಂಬಿ, ಬೆಲ್ಲವನ್ನು ಗ್ರಾಹಕರು ಸ್ಥಳದಲ್ಲಿ ಕೊಳ್ಳುವುದರಿಂದ ಕಪ್ಪು ಬೆಲ್ಲಕ್ಕೆ ಸದಾ ಬೇಡಿಕೆ ಇರಲಿದೆ ಎನ್ನುವರು.

ಗುಣಮಟ್ಟದ ಸಾವಯವ ಬೆಲ್ಲದ ಉತ್ಪನ್ನ ಕಡುಕಪ್ಪು ಇಲ್ಲವೇ ಕಂದು ಬಣ್ಣ ಇರಲಿದೆ. ಗ್ರಾಹಕರು ಪ್ರಾಮಾಣೀಕೃತ ಸಾವಯವ ಬೆಲ್ಲವನ್ನು ಖರೀದಿಸಬೇಕು. ಕೆಲವರು ಬೆಲ್ಲ ಕಪ್ಪು ಬಣ್ಣಕ್ಕೆ ತಿರುಗಲು, ಆಕರ್ಷಣೆ ಹೆಚ್ಚಿಸಲು ರಸಾಯನಿಕ ಬಳಸುತ್ತಾರೆ. ಇದರಿಂದ ಬೆಲ್ಲದ ಸಿಹಿ ಅಂಶದಲ್ಲಿ ವ್ಯತ್ಯಯವಾಗಲಿದೆ. ಹಾಗಾಗಿ, ಗ್ರಾಹಕರು ಸಾವಯವ ಬೆಲ್ಲ ಕೊಳ್ಳುವಾಗ ಎಚ್ಚರ ವಹಿಸಬೇಕು ಎನ್ನುತ್ತಾರೆ ಉತ್ಪಾದಕರು.

ಆಲೆಮೆನೆಗಳಲ್ಲಿ ಕಪ್ಪುಬೆಲ್ಲ 1 ಕೆ.ಜಿಗೆ ₹ 50 ಬೆಲೆ ಇರಲಿದೆ. ಆನ್‌ಲೈನ್‌ನಲ್ಲಿ ದರ ಹೆಚ್ಚಾಗಿರುತ್ತದೆ. ಆರೋಗ್ಯವರ್ಧಕ ಸಾವಯವ ಬೆಲ್ಲ ಹಾಗೂ ಕಾಕಂಬಿ ಕೊಳ್ಳುವವರು ಬೆಲ್ಲ ತಯಾರಿಕೆಯ ಪ್ರಕ್ರಿಯೆ, ಬೆಲ್ಲದ ರುಚಿ ಪರೀಕ್ಷಿಸಿ ಖರೀದಿಸಬೇಕು. ರೈತರು ಕಬ್ಬಿನ ಗದ್ದೆಯಿಂದ ಬೆಲ್ಲ ತಯಾರಾಗುವವರೆಗೂ ರಾಸಾಯನಿಕ ಮುಕ್ತ ಎಂಬುದನ್ನು ಖಾತ್ರಿಪಡಿಸಿದರೆ ಮಾತ್ರ ಗುಣಮಟ್ಟದ ಸಾವಯವ ಬೆಲ್ಲ ಗ್ರಾಹಕರಿಗೆ ದೊರೆಯಲಿದೆ ಎನ್ನುತ್ತಾರೆ ಪ್ರಗತಿಪರ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.