ADVERTISEMENT

ಯಳಂದೂರು: ರೈತರಿಗೆ 11 ಸಾವಿರ ಸಸಿ ವಿತರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 5:39 IST
Last Updated 10 ಜೂನ್ 2025, 5:39 IST
   

ಯಳಂದೂರು: ತಾಲ್ಲೂಕಿನಾದ್ಯಂತ ಹಸಿರು ಪರಿಸರ ಪಸರಿಸುವ ಉದ್ದೇಶದಿಂದ ಗುಂಬಳ್ಳಿ ಸಾಮಾಜಿಕ ಅರಣ್ಯ ವಲಯದಲ್ಲಿ ಸಾವಿರಾರು ಸಸಿಗಳನ್ನು ಬೆಳೆಸಲಾಗಿದ್ದು, ಸಸಿ ನೆಡುವ ಆಸಕ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ವಿಶೇಷವಾಗಿ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಗಿಡಗಳನ್ನು ಹಂಚಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಪ್ರಸಕ್ತ ವರ್ಷದಲ್ಲಿ ಮುಂಗಾರು ಆಶಾದಾಯಕವಾಗಿದ್ದು ಮೇನಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದ್ದು ಬೆಟ್ಟ ಗುಡ್ಡಗಳು, ಗ್ರಾಮೀಣ ಪ್ರದೇಶಗಳು ಹಸಿರು ಹೊದ್ದುಕೊಂಡಿದೆ. ಜೂನ್‌ನಲ್ಲಿ ಮತ್ತೆ ವರ್ಷಧಾರೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಸ್ತೆ, ಕಾಲೇಜು ಮೈದಾನ, ಸರ್ಕಾರಿ ಕಚೇರಿ ಸುತ್ತಮುತ್ತ ಗಿಡ ನೆಡಲು ಭೂಮಿ ಹದವಾಗಿದ್ದು ವಾತಾವರಣವೂ ಗಿಡಗಳ ಬೆಳವಣಿಗೆಗೆ ಪೂರಕವಾಗಿದೆ.

‘ಈ ವರ್ಷದ ಪರಿಸರ ದಿನದಂದು 30ಕ್ಕೂ ಹೆಚ್ಚಿನ ಶಾಲಾ-ಕಾಲೇಜುಗಳಿಗೆ ಸಾವಿರಾರು ಸಸಿಗಳನ್ನು ಉಚಿತವಾಗಿ ನೀಡಲಾಗಿದೆ. ತಾಲ್ಲೂಕನ್ನು ಹಸೀರೀಕರಣ ಮಾಡುವ ಉದ್ದೇಶದಿಂದ ಹತ್ತಾರು ತಳಿಯ ಸಸಿಗಳನ್ನು ಬೆಳೆಸಲಾಗಿದೆ. ಪಕ್ಷಿಗಳಿಗೆ ಹಣ್ಣುನೀಡುವ, ರಸ್ತೆಬದಿ ನೆರಳು ನೀಡುವ, ಬದುಗಳ ಸುತ್ತ ಅಂತರ್ಜಲ ಸೃಜಿಸುವ ವಿವಿಧ ತಳಿಯ ಸಸಿಗಳನ್ನು ಮುತುವರ್ಜಿ ವಹಿಸಿ ಬೆಳೆಸಲಾಗಿದೆ’ ಎಂದು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದರು.

ADVERTISEMENT

‘ಸಸಿಗಳನ್ನು ಬೆಳೆಸಲು ಅನುವಾ ಗುವಂತೆ ಸಾರ್ವಜನಿಕರು ಮತ್ತು ಸಾಗುವಳಿದಾರರಿಗೆ ಜಾಗೃತಿ ಮೂಡಿಸಲಾಗಿದೆ. ಮಿಯಾವಾಕಿ ಅರಣ್ಯ ಮಾದರಿಯಲ್ಲಿ ಸಸಿಗಳನ್ನು ನೆಟ್ಟು ಅರಣ್ಯ ಕೃಷಿ ಆಸಕ್ತರಿಗೆ ಸಸಿ ವಿತರಿಸುವ ಗುರಿಯನ್ನು ಇಲಾಖೆಗೆ ಇದೆ. ಹಲವು ವರ್ಷಗಳಿಂದ ಕಾಡು ಕೃಷಿ ಮಾಡಿದವರು ಜಮೀನುಗಳ ಸುತ್ತ ಗಿಡಗಳನ್ನು ನೆಟ್ಟು ಲಾಭ ಪಡೆದಿದ್ದಾರೆ. ರಸ್ತೆ ಬದಿಯಲ್ಲಿ ನೆಟ್ಟಿರುವ ಸಾವಿರಾರು ಸಸಿಗಳು ಹೂ ಅರಳಿಸಿ ನಿಸರ್ಗದ ಸೊಬಗನ್ನು ಹಿಮ್ಮಡಿಸಿದೆ’ ಎಂದು ವಲಯ ಅರಣ್ಯ ಅಧಿಕಾರಿ ಸಂಪತ್ ಕುಮಾರ್ ಹೇಳಿದರು.

ಪರಿಸರ ಪ್ರಿಯರಿಗೆ ಹಾಗೂ ಸಂಘ ಸಂಸ್ಥೆಗಳ ಸದಸ್ಯರಿಗೆ ಅರಳಿ, ನೇರಳೆ, ಹೊಂಗೆ, ನೆಲ್ಲಿ ಸೇರಿ ಹೂ ಬಿಡುವ ಸಸಿಗಳನ್ನು ನೀಡಲಾಗುತ್ತಿದೆ. ಪರಿಸರ ದಿನದ ಅಂಗವಾಗಿ ಶಿಕ್ಷಕರು ಮತ್ತು ಮಕ್ಕಳಿಗೆ ನೂರಾರು ಸಸಿಗಳನ್ನು ವಿತರಿಸಲಾಗಿದೆ. ಹಿಡುವಳಿಯ ಸುತ್ತಮುತ್ತಲ ಬದುಗಳಲ್ಲಿ ನೆಟ್ಟು ಅಭಿವೃದ್ಧಿ ಪಡಿಸುವವರಿಗೂ ಗಿಡಗಳನ್ನು ಆದ್ಯತೆ ಮೇಲೆ ನೀಡಲಾಗಿದೆ ಎನ್ನುತ್ತಾರೆ ಅವರು.

ವಿಶ್ವ ಪರಿಸರದ ದಿನದ ಅಂಗವಾಗಿ ಸರ್ಕಾರಿ ಕಚೇರಿಗಳ ಮುಂಭಾಗ ನೌಕರರು ಸಸಿ ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾದರೆ ಅರಣ್ಯ ಇಲಾಖೆ ಉಚಿತವಾಗಿ ಸಸಿಗಳನ್ನು ಒದಗಿಸುತ್ತದೆ ಎಂದು ಎಂದು ತಾಲ್ಲೂಕು ಘಟಕದ ಸಂಘದ ಅಮ್ಮನಪುರ ಮಹೇಶ್ ಹೇಳಿದರು.

‘ಅನ್ನದಾತರಿಗೆ 11 ಸಾವಿರ ಸಸಿ’

‘ವ್ಯವಸಾಯಗಾರರಿಗೆ ಕೆ.ಎ.ಪಿ.ವೈ (ಕೃಷಿ ಅರಣ್ಯ ಪ್ರೋತ್ಸಾಹಕ) ಯೋಜನೆಯಡಿ 11 ಸಾವಿರ ಸಸಿಗಳನ್ನು ಬೆಳೆಸಲಾಗಿದೆ. ಸಿಲ್ವರ್ ಓಕ್, ಮಹಾಗನಿ, ತೇಗ, ಹೆಬ್ಬೇವು, ನುಗ್ಗೆ, ಬಿದಿರು, ನೇರಳೆ, ನೆಲ್ಲಿ, ಬೇವು, ಬಾದಾಮಿ ಸಸಿಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. 6X9 ಇಂಚಿನ ಬ್ಯಾಗ್‌ನಲ್ಲಿರುವ ಸಸಿಗೆ ₹ 3 ಹಾಗೂ 8X12 ಇಂಚಿನ ಬ್ಯಾಗ್‌ನಲ್ಲಿರುವ ಸಸಿಗೆ ₹ 6 ದರ ನಿಗದಿಪಡಿಸಲಾಗಿದೆ. ನೆಟ್ಟ ಗಿಡಗಳನ್ನು ಪೋಷಿಸಿದ ಬೆಳೆಗಾರಿಗೆ ಜೀವಂತ ಸಸಿಗಳನ್ನು ಗುರುತಿಸಿ 3 ವರ್ಷಗಳಲ್ಲಿ ತಲಾ ಒಂದು ಗಿಡಕ್ಕೆ ₹ 125ರವರೆಗೆ ಸಹಾಯಧನ ನೀಡಲಾಗುತ್ತದೆ’ ಎಂದು ವಲಯ ಅರಣ್ಯ ಅಧಿಕಾರಿ ಸಂಪತ್ ಕುಮಾರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.