ಯಳಂದೂರು: ಯಳಂದೂರು ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ರಾತ್ರಿ ಗುಡುಗು ಮಿಂಚು, ಸಿಡಿಲಬ್ಬರದೊಂದಿಗೆ ಮಳೆ ಸುರಿಯಿತು. ಬಿರುಗಾಳಿ ಸಹಿತ ಸುರಿದ ಮಳೆಗೆ ಹಲವೆಡೆ ಮರ, ವಿದ್ಯುತ್ ಕಂಬಗಳು ಬುಡಸಮೇತ ಉರುಳಿವೆ. ಕೆಲವೆಡೆ ತೆಂಗು ಮತ್ತು ಅಡಿಕೆ ಮರಗಳು ನೆಲಕಚ್ಚಿವೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆಸ್ತೂರು ಸುತ್ತಮುತ್ತ ಅಪಾರ ಹಾನಿಯಾಗಿದ್ದು, ರಾತ್ರಿಪೂರ ವಿದ್ಯುತ್ ಕಡಿತವಾಗಿತ್ತು. ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಪರದಾಡಿದರು. ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿದ್ದು ಮುಂಜಾನೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಯಿತು.
‘ಯರಿಯೂರು ಸುತ್ತಮುತ್ತ ಹಲವು ತೆಂಗಿನ ಮರಗಳು ನೆಲಕ್ಕುರುಳಿವೆ. ಮದ್ದೂರು ಹಾಗೂ ಹೊನ್ನೂರು ಗ್ರಾಮದ ಸುತ್ತಮುತ್ತ 10 ಎಕರೆ ಬಾಳೆ, 2 ಎಕರೆ ಅಡಿಕೆ ಬೆಳೆಗೆ ಹಾನಿಯಾಗಿದೆ. ಸಮೀಕ್ಷಾ ಕಾರ್ಯ ನಡೆಯುತ್ತಿದ್ದು, ಇನ್ನಷ್ಟೇ ನಷ್ಟ ಅಂದಾಜಿಸಬೇಕಿದೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಮಾಹಿತಿ ನೀಡಿದರು.
ರಾತ್ರಿ ಬಿರುಗಾಳಿ ಸಹಿತ ದಿಢೀರ್ ಮಳೆ ಸುರಿಯಿತು. ರಸ್ತೆ ಬದಿಯ ಕಂಬಗಳು ಮತ್ತು ಮರಗಳೂ ಮುರಿದು ಬಿದ್ದವು. ಬಾಳೆ ಮತ್ತು ಅಡಿಕೆ ಮರಗಳು ಮುರಿದು ಹಾನಿಯಾಗಿದೆ. ಸಂಬಂಧಪಟಟ್ವರು ರೈತರಿಗೆ ನಷ್ಟ ಭರಿಸಬೇಕು ಎಂದು ಕೃಷಿಕ ಮಹಿಳೆಯರು ಒತ್ತಾಯಿಸಿದರು.
ಹೊನ್ನೂರು-ಮದ್ದೂರು ಸುತ್ತಮುತ್ತ ಬಾಳೆ, ಅಡಿಕೆ ಫಸಲು ಹಾಳಾಗಿದೆ. ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ರಾಜಸ್ವ ನಿರೀಕ್ಷಕ ಎಂ.ಎಸ್.ಯದುಗಿರಿ ಹೇಳಿದರು.
ವಿದ್ಯುತ್ ಸ್ಥಗಿತ, ಜನರ ಪರದಾಟ: ಕೆಸ್ತೂರು ಸುತ್ತಮುತ್ತ 8 ವಿದ್ಯುತ್ ಕಂಬಗಳು ನೆಲಕಚ್ಚಿವೆ. 2 ವಿದ್ಯುತ್ ಪರಿವರ್ತಕಗಳೂ ಧರಾಶಾಹಿಯಾಗಿದ್ದು, ವಿದ್ಯುತ್ ಕಡಿತವಾಗಿತ್ತು. ಗುರುವಾರ 15 ಸಿಬ್ಬಂದಿ ಮಧ್ಯಾಹ್ನದ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳಿಸಿದ್ದು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಸಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎಇಇ ನಿಂಗರಾಜು ತಿಳಿಸಿದರು.
ಸೋನೆ ಮಳೆ: ತಾಲ್ಲೂಕಿನ ಬಿಳಿಗಿರಿಬೆಟ್ಟ ಹಾಗೂ ಯಳಂದೂರು ಪಟ್ಟಣದ ಸುತ್ತಮುತ್ತ ಗುರುವಾರವೂ ಸೋನೆ ಮಳೆ ಸುರಿಯಿತು. ವೇಗವಾಗಿ ಬೀಸಿದ ಗಾಳಿಯಿಂದ ವಿದ್ಯುತ್ ಕಡಿತವಾಯಿತು, ಪರಿಣಾಮ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಯಿತು. ಸೆಸ್ಕ್ ಸಿಬ್ಬಂದಿ ಮುಂಜಾನೆಯಿಂದಲೇ ದುರಸ್ತಿ ಮಾಡಿ, ಸಕಾಲದಲ್ಲಿ ನೀರು ಪೂರೈಸಿದರು ಎಂದು ಬೆಟ್ಟದ ಮಾದೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.