ADVERTISEMENT

ಕಡಿದು ಬಿದ್ದ ವಿದ್ಯುತ್‌ ತಂತಿ: ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 16:11 IST
Last Updated 8 ಜುಲೈ 2020, 16:11 IST
ಮನೋಜ್‌ಕುಮಾರ್‌
ಮನೋಜ್‌ಕುಮಾರ್‌   

ಚಾಮರಾಜನಗರ: ತಾಲ್ಲೂಕಿನ ಹರವೆ ಹೋಬಳಿಯ ಕೇತಹಳ್ಳಿ ಗ್ರಾಮದಲ್ಲಿ ಬುಧವಾರ ವಿದ್ಯುತ್‌ ತಂತಿ ಕಡಿದು ಬಿದ್ದ ಪರಿಣಾಮ, ವಿದ್ಯುತ್‌ ಪ‍್ರವಹಿಸಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಕೇತಹಳ್ಳಿಯ ನಿವಾಸಿ ಮಹೇಶ್‌ ಎಂಬುವವರ ಮಗ, 12 ವರ್ಷದ ಮನೋಜ್‌ ಕುಮಾರ್‌ ಮೃತಪಟ್ಟ ದುರ್ದೈವಿ.ಮಹೇಶ್‌ ಅವರಿಗೆ ಇಬ್ಬರು ಮಕ್ಕಳಿದ್ದು, ಮನೋಜ್‌ ಸಣ್ಣವನು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಾಲಕ ತಂದೆ–ತಾಯಿಯೊಂದಿಗೆ ಜಮೀನಿಗೆ ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ.

ADVERTISEMENT

‘ಬಾಲಕ ಅವರದೇ ಜಮೀನಿನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಜಮೀನಿನಲ್ಲಿ ಹಾದುಹೋಗಿದ್ದ ವಿದ್ಯುತ್‌ ತಂತಿ ಹುಡುಗನ ಮೇಲೆ ಬಿದ್ದಿದೆ’ ಎಂದು ಗ್ರಾಮಾಂತರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಲೋಹಿತ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸೆಸ್ಕ್‌ ವಿರುದ್ಧ ಆಕ್ರೋಶ: ಸುದ್ದಿ ತಿಳಿಯುತ್ತಲೇ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪೀಟರ್‌‌, ಕಿರಿಯ ಎಂಜಿನಿಯರ್ ಪ್ರವೀಣ್‌‌ ಸೇರಿದಂತೆ ಸ್ಥಳೀಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಸೆಸ್ಕ್‌ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ‘ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ನೀಡಿದ ದೂರುಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಮಾರ್ಗದ ವಿದ್ಯುತ್‌ ತಂತಿಗಳು ಜೋತಾಡುತ್ತಿದ್ದು, ಲೈನ್‌ಮ್ಯಾನ್‌, ಜೆಇ ಗಮನಕ್ಕೆ ತಂದರೂ, ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಕಸ್ಮಿಕವಾಗಿ ಘಟನೆ ನಡೆದಿದೆ. ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇವೆ’ ಎಂದು ಅಧಿಕಾರಿಗಳು ಗ್ರಾಮಸ್ಥರು ಹಾಗೂ ಬಾಲಕನ ಕುಟುಂಬಸ್ಥರನ್ನು ಮನವೊಲಿಸಲು ಯತ್ನಿಸಿದರು.

ಗರಿಷ್ಠ ₹5 ಲಕ್ಷ ಪರಿಹಾರಕ್ಕೆ ಅವಕಾಶ

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೆಸ್ಕ್‌ ಚಾಮರಾಜನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪೂರ್ಣಚಂದ್ರ ತೇಜಸ್ವಿ ಅವರು, ‘ಘಟನೆಯ ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮಸ್ಥರು ಹಾಗೂ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ.ಇಂತಹ ಘಟನೆಗಳಲ್ಲಿ ಸಂತ್ರಸ್ತರ ಕುಟುಂಬಕ್ಕೆ ಗರಿಷ್ಠ ₹ 5 ಲಕ್ಷದವರೆಗೆ ಪರಿಹಾರ ನೀಡುವುದಕ್ಕೆ ಅವಕಾಶವಿದೆ’ ಎಂದು ಹೇಳಿದರು.

‘ಸರ್ಕಾರದಿಂದ ನೇಮಕಗೊಂಡಿರುವ ವಿದ್ಯುತ್‌ ಪರಿವೀಕ್ಷಕರು ಘಟನೆಯ ಬಗ್ಗೆ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ನೀಡುತ್ತಾರೆ. ಸೆಸ್ಕ್‌ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಿದ್ದರೆ, ನಾವು ಅದನ್ನು ಪಾವತಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.