ADVERTISEMENT

ಯಳಂದೂರು | ಮಳೆ, ಚಳಿ, ಮಂಜಿನಾಟ: ಜನ ತತ್ತರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:49 IST
Last Updated 1 ಡಿಸೆಂಬರ್ 2025, 5:49 IST
ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಸ್ಥಳ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ಬೆಟ್ಟದಲ್ಲಿ ಭಾನುವಾರ ದೇವಳದ ಗೋಪುರ ಮಂಜಿನ ಚಿತ್ತಾರದಲ್ಲಿ ಆಕರ್ಷಕವಾಗಿ ಕಂಡಿತು.
ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಸ್ಥಳ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ಬೆಟ್ಟದಲ್ಲಿ ಭಾನುವಾರ ದೇವಳದ ಗೋಪುರ ಮಂಜಿನ ಚಿತ್ತಾರದಲ್ಲಿ ಆಕರ್ಷಕವಾಗಿ ಕಂಡಿತು.   

ಯಳಂದೂರು: ತಾಲ್ಲೂಕಿನಾದ್ಯಂತ ಭಾನುವಾರ ಮುಂಜಾನೆಯಿಂದಲೇ ತುಂತುರು ಮಳೆ, ಮಂಜಿನ ಚಲ್ಲಾಟ ಜನ ಜೀವನವನ್ನು ಕಾಡಿತು. ಕಚಗುಡಿ ಇಡುವ ಚಳಿಯ ಜೊತೆ ಶೀತಗಾಳಿ ನಡುಕ ತರಿಸಿತು. ರೈತರು, ಜಾನುವಾರು ಸಾಕಣೆದಾರರು ಮತ್ತು ಶ್ರಮಿಕರು ತರಗುಟ್ಟುವ ಚಳಿ ನಡುವೆ ದಿನದೂಡಿದರು. ಮಕ್ಕಳು ಬೆಚ್ಚನೆ ಉಡುಪು ತೊಟ್ಟು ಮನೆಗಳಲ್ಲಿ ಉಳಿದು ರಜಾ ದಿನವನ್ನು ಕಳೆದರು.

ಪ್ರವಾಸಿ ತಾಣಗಳಾದ ಬಿಳಿಗಿರಿಬೆಟ್ಟ, ಕೃಷ್ಣಯ್ಯನ ಆಣೆಕಟ್ಟೆ ಹಾಗೂ ವಿವಿಧ ದೇವಾಲಯಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಕುಸಿತವಾಗಿತ್ತು. ವಾರದ ಸಂತೆ ಮತ್ತು ಅಂಗಡಿ ಮುಂಗಟ್ಟೆಗಳಲ್ಲಿ ಕೊಳ್ಳುವವರ ಕೊರತೆ ಕಂಡುಬಂದಿತು, ಪೇಟೆ ಪಟ್ಟಣಗಳ ಹೋಟೆಲ್ಗಳಲ್ಲೂ ಗ್ರಾಹಕರ ಕೊರತೆಯಿಂದ ಭಣಗುಟ್ಟಿದವು.

ಪ್ರಸಿದ್ಧ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದಲೇ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಹಣ್ಣುಕಾಯಿ ಮಾರಾಟಗಾರರು ಮತ್ತು ಪೂಜಾ ಸಮಾಗ್ರಿ ಅಂಗಡಿಗಳಲ್ಲಿ ವ್ಯಾಪಾರ ಕಂಡುಬರಲಿಲ್ಲ. ‘ದಿನವಿಡಿ ತುಂತುರು ಮಳೆ ಹನಿಯಿತು. ಹಸಿರುಟ್ಟ ಪರಿಸರದಲ್ಲಿ ಮಂಜಿನ ಹೊದಿಕೆ ಆವರಿಸಿದ್ದು, ರಸ್ತೆಗಳಲ್ಲಿ ಸಂಚರಿಸುವವರಿಗೆ ಬೆಳಕಿನ ಕೊರತೆ ಕಾಡಿತು. ಸವಾರರು ವಾಹನ ಚಲಾಯಿಸಲು ಪರದಾಡಿದರು’ ಎಂದು ದೇವಳ ಪಾರುಪತ್ತೆಗಾರ ರಾಜು ಹೇಳಿದರು.

ADVERTISEMENT

ಜಿಲ್ಲಾ ಕೇಂದ್ರಗಳಿಗೆ ತೆರಳುವ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿಯಿತು. ದ್ವಿಚಕ್ರ ಸವಾರರ ಸಂಚಾರದಲ್ಲೂ ಇಳಿಕೆಯಾಗಿದೆ. ಹಾಗಾಗಿ, ವಡೆಗೆರೆ ಬಿದ್ದಾಂಜನೇಯ ದೇವಸ್ಥಾನ, ಪಟ್ಟಣದ ಬಳೆಮಂಟಪ ಹಾಗೂ ಗ್ರಾಮೀಣ ಭಾಗದ ಶ್ರದ್ಧಾ ಕೇಂದ್ರಗಳಲ್ಲೂ ಜನರ ಓಡಾಟಕ್ಕೆ ಬ್ರೇಕ್ ಬಿದ್ದಿತು ಎಂದು ಖಾಸಗಿ ಬಸ್ ಚಾಲಕ ನಾರಾಯಣಸ್ವಾಮಿ ತಿಳಿಸಿದರು.

ತುಂತುರು ಮಳೆ ನಡುವೆ ದಾಸರು ಭಕ್ತರ ಹರಕೆ ತೀರಿಸಲು ಕಾಯುತ್ತ ನಿಲ್ಲಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.