
ಯಳಂದೂರು ಪಟ್ಟಣದಲ್ಲಿ ಬುಧವಾರ ತಹಶೀಲ್ದಾರ್ ಎಸ್.ಎನ್.ನಯನ ಬಾರ್ ಮತ್ತು ಹೋಟೆಲ್ ಗಳಿಗೆ ಭೇಟಿ ಧಿಡೀರ್ ಭೇಟಿ ನೀಡಿ ಆಹಾರ ಗುಣಮಟ್ಟ ಪರಿಶೀಲಿಸಿದರು.
ಯಳಂದೂರು: ಪಟ್ಟಣದ ವಿವಿಧ ಬೇಕರಿಗಳು, ಫಾಸ್ಟ್‌ಫುಡ್, ಹೋಟೆಲ್, ರೆಸ್ಟೋರಂಟ್‌ಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿದ ತಹಶೀಲ್ದಾರ್ ಎಸ್.ಎನ್. ನಯನಾ ಮತ್ತು ಅಧಿಕಾರಿಗಳ ತಂಡದ ಸದಸ್ಯರು ತಿಂಡಿ ತಿನಿಸುಗಳ ಗುಣಟಮಟ್ಟ ಹಾಗೂ ಸ್ವಚ್ಛತೆ ಪರಿಶೀಲಿಸಿದರು.
ಶುದ್ಧ ನೀರು ಬಳಸಬೇಕು. ಗುಣಮಟ್ಟದ ಎಣ್ಣೆ ಬಳಕೆ ಮಾಡಬೇಕು. ಕಳಪೆ ಪ್ಲಾಸ್ಟಿಕ್ ಬಳಸಬಾರದು, ಫಾಸ್ಟ್‌ಫುಡ್‌ಗಳಲ್ಲಿ ರುಚಿ ಹೆಚ್ಚಿಸುವ ರಾಸಾಯನಿಕ ಬಳಕೆ, ಶುಚಿ ರುಚಿ ಕಳೆದುಕೊಂಡ ತಟ್ಟೆಗಳಲ್ಲಿ ತಿಂಡಿ ನೀಡುವುದನ್ನು ಪರಿಶೀಲಿಸಿದರು. ದರ್ಶನಿಗಳು ಹೋಟೆಲ್‌ಗಳಲ್ಲಿ ಬಳಸಲಾಗುವ ತರಕಾರಿ, ಆಹಾರ ತಯಾರಿಸುವ ಸ್ಥಳದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು.
‘ಕೆಲವು ಹೋಟೆಲ್‌ಗಳಲ್ಲಿ ಬಳಕೆಯಾಗುತ್ತಿದ್ದ ಕಳಪೆ ಪ್ಲಾಸ್ಟಿಕ್ ಚೀಲ ವಶಕ್ಕೆ ಪಡೆಯಲಾಗಿದೆ. ಗೋಬಿ ಮಂಚೂರಿ, ಚಾಟ್ಸ್ ಅಂಗಡಿ, ಹೋಟಲ್, ಮಾಂಸ ಮತ್ತು ಮೀನು ಆಹಾರ ಮಾರಾಟ ದಾಸ್ತಾನು ಸ್ಥಳದಲ್ಲಿ ಅಶುಚಿತ್ವ ಕಂಡುಬಂದಿದ್ದು, ಆಹಾರ ತಯಾರಿಯಲ್ಲಿ ಬಳಕೆ ಮಾಡುತ್ತಿದ್ದ ಕೆಲವೊಂದು ನಿಷೇಧಿತ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲಿಸಿ ರಾಸಾಯನಿಕ ಕಂಡುಬಂದರೆ ಲೈಸನ್ಸ್ ರದ್ದುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.
‘ರುಚಿ ಹೆಚ್ಚಿಸಲು ನಿಷೇಧಿತ ರಾಸಾಯಕ ಬಳಸಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಹಾರದ ಗುಣಮಟ್ಟ ಹಾಗೂ ಪ್ರಮಾಣವನ್ನು ಕಾಯ್ದುಕೊಳ್ಳಬೇಕು. ಬಾಲಕರನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು, ಪ್ಲಾಸ್ಟಿಲ್ ಬಳಕೆಗೆ ಅಂಕುಶ ಹಾಕಬೇಕು. ಪಟ್ಟಣ ಪಂಚಾಯಿತಿಯಿಂದ ಪರವಾನಗಿ ನವೀಕರಿಸಿಕೊಳ್ಳಬೇಕು’ ಎಂದು ಸೂಚಿಸಿದರು.
ತಾಲ್ಲೂಕು ಕಚೇರಿ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.
ಅಮೆರಿಕಾ ಟೇಸ್ಟಿಂಗ್ ಪೌಡರ್ (ಅಜಿನೊಮೊಟೊ) ಪತ್ತೆ
‘ಕೆಲವು ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ತಿಂಡಿ ತಿನಿಸುಗಳಲ್ಲಿ ರುಚಿ ಹೆಚ್ಚಿಸುವ ಅಮೆರಿಕಾ ಟೇಸ್ಟಿಂಗ್ ಪೌಡರ್ ಬಳಸುವುದು ಪತ್ತೆಯಾಗಿದೆ. ಇದನ್ನು ಮಸಾಲೆ ಪದಾರ್ಥ ಹಾಗೂ ಚೈನೀಸ್ ಆಹಾರದಲ್ಲಿ ಬಳಕೆ ಮಾಡಲಾಗುತ್ತದೆ. ಇವು ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸುವ ಅಜಿನೊಮೊಟೊ (ಎಂಎಸ್ಸ್ಜಿ) ಎನ್ನಲಾಗಿದ್ದು ಪರಿಶೀಲನೆ ನಂತರ ಮಾಹಿತಿ ಲಭ್ಯವಾಗಲಿದೆ. ಭಾರತದಲ್ಲಿ ಇದರ ಬಳಕೆ ನಿಷೇಧಿಸಿದ್ದು ಇಂತಹ ಪೌಡರ್ ಡಬ್ಬವನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ. ಹೋಟೆಲ್‌ಗಳಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪಟ್ಟಣ ಪಂಚಾಯಿಯಿ ಆರೋಗ್ಯ ನಿರೀಕ್ಷಕ ರಾಘವೇಂದ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.