ADVERTISEMENT

ಯಳಂದೂರು: ಗಂಗಾಧರೇಶ್ವರ ರಥೋತ್ಸವಕ್ಕೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:28 IST
Last Updated 17 ಫೆಬ್ರುವರಿ 2026, 2:28 IST
ಯಳಂದೂರು ತಾಲ್ಲೂಕು ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಮವಾರ ಗಿರಿ ಗಂಗಾಧರೇಶ್ವರನ ಶಿವರಾತ್ರಿ ರಥೋತ್ಸವ ಅದ್ದೂರಿಯಾಗಿ ಜರುಗಿತು
ಯಳಂದೂರು ತಾಲ್ಲೂಕು ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಮವಾರ ಗಿರಿ ಗಂಗಾಧರೇಶ್ವರನ ಶಿವರಾತ್ರಿ ರಥೋತ್ಸವ ಅದ್ದೂರಿಯಾಗಿ ಜರುಗಿತು   

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಶೀತ ಗಿರಿವಾಸ ಗಂಗಾಧರೇಶ್ವರಸ್ವಾಮಿ ಶಿವರಾತ್ರಿ ರಥೋತ್ಸವ ಸೋಮವಾರ ಭಕ್ತರ ಜಯಘೋಷಗಳ ನಡುವೆ ಅದ್ಧೂರಿಯಾಗಿ ಜರುಗಿತು.

ಭಕ್ತರು ಮುಂಜಾನೆಯಿಂದಲೇ ದೇಗುಲದ ಸುತ್ತ ಬಣ್ಣದ ರಂಗೂಲಿ ಇಟ್ಟು, ಕಾಡು ಹೂವು ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಆಗಮಿಕರು ಉದ್ಭವ ಗಂಗಾಧರೇಶ್ವರ ಲಿಂಗಕ್ಕೆ ಜಯಚಾಮರಾಜೇಂದ್ರ ಒಡೆಯರ್ ಅವರು ಅರ್ಪಿಸಿರುವ ಸ್ವರ್ಣ ಕೊಳಗವನ್ನು ಧಾರಣೆ ಮಾಡಿ, ಮಹಾ ಮಂಗಳಾರತಿ ನೆರವೇರಿಸಿದರು. ಈ ಸಮಯದಲ್ಲಿ ಸ್ಥಳೀಯರು ದೇವರ ದರ್ಶನ ಪಡೆದು ಪುನೀತರಾದರು.

ಗಂಗಾಧರೇಶ್ವರ ಸ್ವಾಮಿಗೆ ಉತ್ತರಾಯಣ ಶಿಶಿರ ಋತು ಮಾಘಮಾಸ ಕೃಷ್ಣ ಪಕ್ಷ ತ್ರಯೋದಶಿಯಂದು ಮಹಾ ಶಿವರಾತ್ರಿ ಪೂಜಾ ಕೈಂಕರ್ಯ ನೆರವೇರಿಸಲಾಗಿತ್ತು. ಸೋಮವಾರ ಮಾಘ ಮಾಸ ಕೃಷ್ಣ ಪಕ್ಷ ಚತುರ್ದಶಿಯಂದು ಬೆಳಿಗ್ಗೆ 10.37 ರಿಂದ 10.50ರ ನಡುವೆ ಶುಭ ಮೇಷ ಲಗ್ನದ ಕಟಕ ನಾವಾಂಶದಲ್ಲಿ ಸ್ವರ್ಣ ಕೊಳಗ ಧಾರಣೆ ಪೂರೈಸಲಾಯಿತು.

ADVERTISEMENT

ಈ ವೇಳೆ ಮಂಗಳವಾದ್ಯ ಮೊಳಗಿಸಿ ತೇರಿನ ಆರಂಭಕ್ಕೆ ಶುಭ ಸೂಚನೆ ನೀಡಿದರು. ಬಿಸಿಲು ಮುಗಿಲು ಮುಟ್ಟುವ ಮೊದಲೇ ಮಾಘ ಮಾಸ ಕೃಕ್ಷ್ಣ ಪಕ್ಷ ಚತುರ್ದಶಿ ಶುಭ ಮೇಷ ಲಗ್ನದ ಶುಭ ಕನ್ಯಾ ಬುಧ ನವಾಂಶದ ಶುಭ ಮುಹೂರ್ತದಲ್ಲಿ ಬೆಳಿಗ್ಗೆ 11 ರಿಂದ 11.13ರ ನಡುವೆ ಗಂಗಾಧೇರಶ್ವರ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಲಾಯಿತು.

ಸೋಲಿಗರು ಮತ್ತು ಬೆಟ್ಟದ ಗ್ರಾಮಸ್ಥರು ತೇರಿಗೆ ಪುಷ್ಪ ನಮನ ಸಲ್ಲಿಸುತ್ತಿದ್ದಂತೆ ದೇವಳದ ಸುತ್ತ ಭಕ್ತರು ತೇರನ್ನು ಎಳೆದು ಸಂಭ್ರಮಿಸಿದರು. ನಂತರ ಊದಿನಕಡ್ಡಿ ದೀಪ, ಧೂಪದ ಸುಗಂಧ ತುಂಬಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಗಂಗಾಧರೇಶ್ವರಿನಿಗೆ ಹೂ ಮಾಲೆ ಹಾಕಿ, ಹಣ್ಣುಕಾಯಿ ಪೂಜೆ ನೆರೆವೇರಿಸಿ, ಹರಕೆ ಸಲ್ಲಿಸಿದರು ಎಂದು ಅರ್ಚಕ ರಂಗಣ್ಣ ಹೇಳಿದರು.

ದೇಗುಲದಲ್ಲಿ ಭಕ್ತ ಸಂದಣಿ ನಡುವೆ ನಂದಿ ವಾಹನ ಉತ್ಸವ, ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ ಸಾವಿರಾರು ಭಕ್ತರು ವನ ಭೋಜನವನ್ನು ಸವಿದರು.

ಉತ್ಸವಕ್ಕೂ ಮೊದಲು ತಾಲ್ಲೂಕು ಕಚೇರಿಯಿಂದ ಸ್ವರ್ಣ ಕೊಳಗವನ್ನು ಮೆರವಣಿಗೆ ಮೂಲಕ ತರಲಾಯಿತು. ಸೋಲಿಗರು ತೇರುಕಟ್ಟುವ ದೈವ ಕಾಯಕ ಪೂರೈಸಿದರು. ನಾಯಕ ಜನಾಂಗದ ಸದಸ್ಯರು ಪ್ರಸಾದ ತಯಾರಿಸಿ ಊಟೋಪಚಾರ ವಿತರಣೆಯಲ್ಲಿ ನೆರವಾದರು.

ಶಾಸಕ ಎ.ಆರ್.ಕೃಷ್ಣಮೂರ್ತಿ, ವ್ವವಸ್ಥಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ, ತಹಶೀಲ್ದಾರ್ ಎಸ್.ಎನ್. ನಯನಾ, ದೇವಾಲಯ ಪಾರುಪತ್ತೆಗಾರ ರಾಜು, ಯಜಮಾನರಾದ ಶ್ರೀನಿವಾಸ, ನಾಗೇಶ್, ನಾಗೇಂದ್ರ, ಮುಖಂಡರಾದ ಪ್ರದೀಪಕುಮಾರ್, ಎಚ್.ಆರ್.ನಾಗರಾಜು, ಮಾದೇಗೌಡ, ಶಿವಣ್ಣ, ಜಡಯಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.