
ಯಳಂದೂರು: ‘ಕೆಲವು ವಂಶಾವಳಿ ಕಾಯಿಲೆಗಳನ್ನು ರಕ್ತ ಪರೀಕ್ಷೆಯಿಂದ ಕಂಡುಹಿಡಿಯಬಹುದು. ಹಾಡಿ ನಿವಾಸಿಗರು ತಪಾಸಣೆ ಮಾಡಿಸಿಕೊಂಡರೆ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು’ ಎಂದು ಆರ್‌ಎಫ್ಒ ನಾಗೇಂದ್ರನಾಯಕ್ ಹೇಳಿದರು.
ವನ್ಯಜೀವಿ ಸಪ್ತಾಹದ ಅಂಗವಾಗಿ ತಾಲ್ಲೂಕಿನ ಬಿಳಿಗಿರಿಬೆಟ್ಟದ ವಿವಿಧ ಹಾಡಿಗಳಲ್ಲಿ ಶುಕ್ರವಾರ ಸೋಲಿಗ ಸಮುದಾಯದ ಜನರಿಗೆ ಅರಣ್ಯ ಇಲಾಖೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
‘ಹಾಡಿ ಜನರು ಸಿಕೆಲ್‌ಸೆಲ್ ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ಸಣ್ಣಪುಟ್ಟ ಸಮಸ್ಯೆಗಳಿಗೂ ದೊಡ್ಡ ಆಸ್ಪತ್ರೆಗಳತ್ತ ತೆರಳುತ್ತಾರೆ. ಈ ದೆಸೆಯಲ್ಲಿ ಮಕ್ಕಳ , ವೃದ್ಧರು, ಮತ್ತು ಮಹಿಳೆಯರ ಬಗ್ಗೆ ಇಲಾಖೆ ಹೆಚ್ಚಿನ ಕಾಳಜಿ ವಹಿಸಿ ತಪಾಸಣೆ ನಡೆಸುತ್ತದೆ’ ಎಂದರು.
25ಕ್ಕೂ ಹೆಚ್ಚಿನ ಪೋಡುಗಳ ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡರು. ವೈದ್ಯರು ರಕ್ತದೊತ್ತಡ, ಹೃದಯ ಮತ್ತಿತರ ಪರೀಕ್ಷೆಗಳನ್ನು ಮಾಡಿದರು.
ಡಿಆರ್‌ಎಫ್ಒ ಕೃಷ್ಣಮೂರ್ತಿ ನಂಜೇಗೌಡ, ಮಾದಯ್ಯ, ಬಂಗಿ ಸಿದ್ದಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.