ಗುಂಡ್ಲುಪೇಟೆ: ಸಾಧಿಸುವ ಛಲವಿದ್ದರೆ ಎಂತಹ ಸವಾಲುಗಳನ್ನೂ ಎದುರಿಸಿಯೂ ಜಯಿಸಿ ಗುರಿ ಮುಟ್ಟಬಹುದು ಎಂಬುದಕ್ಕೆ ತಾಲ್ಲೂಕಿನ ಲಕ್ಕೂರು ಗ್ರಾಮದ ಉಮೇಶ್ ವಿಶ್ವಾರಾಧ್ಯ ಸಾಕ್ಷಿಯಾಗಿದ್ದಾರೆ.
ಹೈನೋದ್ಯಮದಲ್ಲಿ ಯಶಸ್ವಿಯಾಗಿ ಬದುಕು ಕಟ್ಟಿಕೊಂಡಿರುವ ಉಮೇಶ್ ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ. 120 ರಾಸುಗಳನ್ನು ಸಾಕಿರುವ ಉಮೇಶ್ ಪ್ರತಿದಿನ 150ಕ್ಕೂ ಹೆಚ್ಚು ಲೀಟರ್ ಹಾಲು ಕರೆಯುತ್ತಿದ್ದು ಪ್ರತಿ ತಿಂಗಳು ₹2.5 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಅನ್ಯರ ಜಮೀನು ಗುತ್ತಿಗೆ ಪಡೆದುಕೊಂಡು ನಾಲ್ಕು ಹಸುಗಳಿಂದ ಹೈನೋದ್ಯಮ ಆರಂಭಿಸಿದ ಉಮೇಶ್ ಮಾದರಿ ಹೈನುಗಾರಿಕೆಯಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.
ದಿನಚರಿ ಹೇಗೆ: ಪ್ರತಿದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಹಸುಗಳ ಮೈತೊಳೆದು ಹಾಲು ಕರೆದು 11 ಗಂಟೆಯವರೆಗೆ ಹಸುಗಳು ಮೆಲುಕು ಹಾಕಲು ಕಟ್ಟಲಾಗುತ್ತದೆ. ಬಳಿಕ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೇವು ಹಾಕಲಾಗುವುದು. ಹಾಲು ಕರೆಯಲು ಹಾಗೂ ಕೊಟ್ಟಿಗೆಯನ್ನು ಸ್ವಚ್ಛ ಮಾಡಲು ಯಂತ್ರಗಳನ್ನು ಬಳಕೆ ಮಾಡುವುದರಿಂದ ಮಾನವ ಶ್ರಮ ಹೆಚ್ಚು ಬೇಡುವುದಿಲ್ಲ ಎನ್ನುತ್ತಾರೆ ಉಮೇಶ್.
ಹಸುಗಳಿಗೆ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಪ್ರಾಥಮಿಕ ಚಿಕಿತ್ಸಾ ವಿಧಾನ ಕಲಿತಿದ್ದೇನೆ. ಕಾಯಿಲೆ ಗಂಭೀರವಾಗಿದ್ದರೆ ಪಶುವೈದ್ಯರನ್ನು ಕರೆಸಲಾಗುವುದು. ಕಳೆದೆರಡು ವರ್ಷಗಳಿಂದ ಹಸುಗಳಿಗೆ ರೋಗಗಳ ಬಾಧೆ ಕಾಡಿಲ್ಲ. ಸಣ್ಣ ಅನಾರೋಗ್ಯಕ್ಕೆ ಸ್ವಚಿಕಿತ್ಸಾ ವಿಧಾನ ಅನುಸರಿಸುತ್ತಿದ್ದೇನೆ ಎಂದು ಉಮೇಶ್ ತಿಳಿಸಿದರು.
ಮುಂದೆ ಹೆಚ್ಚಿನ ರಾಸುಗಳನ್ನು ಖರೀದಿಸಿ ಸಾಕುವ ಆಸೆ ಇದೆ. ಹೈನೋದ್ಯಮ ಕಾರ್ಯಕ್ಕೆ ಪತ್ನಿ ಬೆನ್ನೆಲುಬಾಗಿ ದುಡಿಯುತ್ತಿದ್ದಾರೆ. ಕುಟುಂಬದ ಪ್ರೇರಣೆಯಿಂದ ಹೈನುಗಾರಿಕೆಯಲ್ಲಿ ಯಶಸ್ಸು ದೊರೆತಿದೆ ಎನ್ನುತ್ತಾರೆ ಅವರು.
ಗ್ರಾಮದಲ್ಲಿ ಕೃಷಿ ಜಮೀನಿದ್ದರೂ ಹಲವರು ಪಟ್ಟಣಕ್ಕೆ ಬಿಡಿಗಾಸು ಸಂಪಾದಿಸಲು ವಲಸೆ ಹೋಗುತ್ತಿದ್ದಾರೆ. ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪಕಸುಬಾಗಿ ಮಾಡಿಕೊಂಡರೆ ಉತ್ತಮ ಆದಾಯ ಗಳಿಸಬಹುದು. ನಾಲ್ಕು ಹಸುಗಳನ್ನು ಕಟ್ಟಿದರೆ ಪ್ರತಿ ತಿಂಗಳು ₹ 25,000 ಆದಾಯ ಗಳಿಸಬಹುದು ಎಂದು ಸಲಹೆ ನೀಡುತ್ತಾರೆ ಅವರು.
ಯುವಕರು ಸ್ವಉದ್ಯೋಗದತ್ತ ಒಲವು ತೋರಿಸಬೇಕು, ಯಾವ ಕೆಲಸವನ್ನೂ ಆಗುವುದಿಲ್ಲ ಎಂದು ಹಿಂದೆ ಸರಿಯಬಾರದು. ಎಲ್ಲವೂ ಸಾಧ್ಯ ಎಂಬ ದೃಢ ಮನಸ್ಸಿನಿಂದ ಮುನ್ನುಗ್ಗಿದರೆ ಖಂಡಿತ ಯಶಸ್ಸು ದೊರೆಯುತ್ತದೆ. ಉದ್ಯಮ ಯಶಸ್ಸಿನಲ್ಲಿ ಧೈರ್ಯ, ದೃಢ ಮನಸ್ಸು ಹಾಗೂ ಬದ್ಧತೆಯ ಕೆಲಸ ಹೆಚ್ಚು ಮುಖ್ಯವಾಗುತ್ತದೆ ಎನ್ನುತ್ತಾರೆ ಉಮೇಶ್.
ಪ್ರತಿನಿತ್ಯ 150 ಲೀಟರ್ ಹಾಲು ಉತ್ಪಾದನೆ ಮಾಸಿಕ ₹2.50 ಲಕ್ಷ ಆದಾಯ ಬದುಕಿಗೆ ಆಧಾರವಾದ ಹೈನೋದ್ಯಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.