ADVERTISEMENT

ಯುವಕ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು

ಗುಂಡ್ಲುಪೇಟೆ: ಶಾಸಕರ ಕುಮ್ಮಕ್ಕಿನಿಂದ ಪೊಲೀಸರ ದೌರ್ಜನ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 16:06 IST
Last Updated 16 ಏಪ್ರಿಲ್ 2020, 16:06 IST

ಗುಂಡ್ಲುಪೇಟೆ: ಸ್ಥಳೀಯ ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌ ಅವರ ಕುಮ್ಮಕ್ಕಿನಿಂದ ಸರ್ಕಲ್‌ ಇನ್‌ಸ್ಪೆಕ್ಟರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ತಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ, ಸಬ್‌ ಇನ್‌ಸ್ಪೆಕ್ಟರ್‌ ತಮ್ಮಿಂದ ₹1ಲಕ್ಷ ತೆಗೆದುಕೊಂಡಿದ್ದಾರೆ ಎಂದು ಯುವಕರೊಬ್ಬರು ಫೇಸ್‌ಬುಕ್‌ ಲೈವ್‌ನಲ್ಲಿ ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.

ತಾಲ್ಲೂಕಿನ ಕಂದೇಗಾಲ ಗ್ರಾಮದ ಶಿವಮೂರ್ತಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ಬೆಳಿಗ್ಗೆ ಫೇಸ್‌ಬುಕ್‌ ಲೈವ್‌ನಲ್ಲಿ ಬಂದ ಶಿವಮೂರ್ತಿ, ‘ನಾನು ಸ್ನೇಹಿತನಿಗೆ ತಮಾಷೆ ಮಾಡಿ ಹಾಕಿದ್ದ ಫೇಸ್‌ಬುಕ್‌ ಪೋಸ್ಟ್‌ ಅನ್ನು ಶಾಸಕ ನಿರಂಜನ್‌ಕುಮಾರ್‌ ಅವರ ಬಗ್ಗೆ ಹಾಕಿದ್ದು ಎಂದು ಸುಳ್ಳು ಆರೋಪ ಹೊರಿಸಿ ನನ್ನ ವಿರುದ್ಧ ದೂರು ನೀಡಲಾಗಿದೆ. ಶಾಸಕರು ಕುಮ್ಮಕ್ಕಿನಿಂದಾಗಿ ಸರ್ಕಲ್‌ ಇನ್‌ಸ್ಪೆಕ್ಟರ್‌ಮಹಾದೇವಸ್ವಾಮಿ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಲತೇಶ್ ಕುಮಾರ್ ಅವರು ನನ್ನನ್ನು ಠಾಣೆಗೆ ಕರೆದು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಎಪಿಎಂಸಿಯಲ್ಲಿ ವ್ಯಾಪಾರ ಮಾಡುವ ನಾನು ರೈತರಿಗೆ ಕೊಡುವುದಕ್ಕಾಗಿ ಜೇಬಿನಲ್ಲಿ ₹1 ಲಕ್ಷ ಇಟ್ಟುಕೊಂಡಿದ್ದೆ. ಲತೇಶ್‌ ಕುಮಾರ್‌ ಅವರು ದುಡ್ಡನ್ನು ಕಸಿದುಕೊಂಡು ರೌಡಿ ಶೀಟರ್‌ ತೆರೆಯುವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದ್ದರು.

ADVERTISEMENT

‘ಯಾವುದೇ ತಪ್ಪು ಮಾಡದ ನನಗೆ ಅನ್ಯಾಯವಾಗಿದೆ. ರೈತರಿಗೆ ಕೊಡುವುದಕ್ಕೆ ನನ್ನ ಬಳಿ ದುಡ್ಡು ಇಲ್ಲ. ನಾನಿನ್ನು ಬದುಕುವುದಿಲ್ಲ. ನನ್ನ ಸಾವಿಗೆ ಶಾಸಕರ ನಿರಂಜನ್‌ಕುಮಾರ್, ಸರ್ಕಲ್‌ ಇನ್‌ಸ್ಪೆಕ್ಟರ್‌ ಮಹಾದೇವಸ್ವಾಮಿ, ಸಬ್‌ ಇನ್‌ಸ್ಪೆಕ್ಟರ್‌ ಲತೇಶ್‌ ಕುಮಾರ್‌ ಕಾರಣ’ ಎಂದು ಹೇಳಿ ಫೇಸ್‌ಬುಕ್‌ ಲೈವ್‌ ಅನ್ನು ಶಿವಮೂರ್ತಿ ಕೊನೆಗೊಳಿಸಿದ್ದರು.

ನಂತರ ಸ್ವಲ್ಪ ಸಮಯ ಯಾರ ಕೈಗೂ ಸಿಗದ ಅವರನ್ನು ಸ್ಥಳೀಯರು ಪತ್ತೆ ಹಚ್ಚು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದರು. ಶಿವಮೂರ್ತಿ ಅವರು ಕೆಲವು ಮಾತ್ರೆಗಳನ್ನು ಸೇವಿಸಿದ್ದರು ಎಂದು ತಿಳಿದುಬಂದಿದೆ. ಅವರ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎನ್ನಲಾಗಿದೆ.

‘ಸತ್ಯಕ್ಕೆ ದೂರವಾದ ಆರೋಪ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಹದೇವಸ್ವಾಮಿ ಅವರು ‘ಶಾಸಕರರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಸಂಬಂಧ ಬಂದ ದೂರಿನ ಆಧಾರದ ಮೇಲೆ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಠಾಣೆಯಲ್ಲಿ ಬೇರೆ ಜನರು ಇದ್ದರು. ಹಲ್ಲೆ ಮಾಡಿಲ್ಲ. ಜೊತೆಗೆ ಹಣವನ್ನೂ ಕಸಿದುಕೊಂಡಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು’ ಎಂದು ಹೇಳಿದರು.

ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು ಮಾತನಾಡಿ, ‘ದೂರಿನ ಆಧಾರದಲ್ಲಿ ಪೊಲೀಸರು ವಿಚಾರಣೆ ಮಾಡಿದ್ದಾರೆ ಅಷ್ಟೆ. ಈ ವಿಚಾರವಾಗಿ ಶುಕ್ರವಾರ ವಿವರವಾಗಿ ಮಾತನಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.