ADVERTISEMENT

ಯಳಂದೂರು: ಪೊಲೀಸ್‌ ಜೀಪಿನಿಂದ ಹಾರಿದ ಅಪಹರಣ ಪ್ರಕರಣದ ಆರೋಪಿ ಯುವಕ ಸಾವು

ಮಾಂಬಳ್ಳಿ: ಪೊಲೀಸ್ ಠಾಣೆ ಮುಂಭಾಗ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 16:52 IST
Last Updated 29 ನವೆಂಬರ್ 2022, 16:52 IST
ಮೃತಪಟ್ಟ ಯುವಕನ ಕುಟುಂಬದವರು ಹಾಗೂ ಗ್ರಾಮಸ್ಥರು ಯಳಂದೂರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು
ಮೃತಪಟ್ಟ ಯುವಕನ ಕುಟುಂಬದವರು ಹಾಗೂ ಗ್ರಾಮಸ್ಥರು ಯಳಂದೂರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು   

ಯಳಂದೂರು: ಬಾಲಕಿಯೊಬ್ಬಳ ಅಪಹರಣ ಪ್ರಕರಣಕ್ಕೆ ಸಂಬಂಧ ಯುವಕನೊಬ್ಬನನ್ನು ಪೊಲೀಸರು ವಿಚಾರಣೆಗಾಗಿ ಜೀಪಿನಲ್ಲಿ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಆ ಯುವಕ ಜೀಪಿನಿಂದ ಹೊರಕ್ಕೆ ಹಾರಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮದ್ದೂರು–ಯರಿಯೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.

ಕೊಳ್ಲೇಗಾಲ ತಾಲ್ಲೂಕು ಕುಂತೂರು ಮೋಳೆ ನಿವಾಸಿ ನಂಜುಂಡಶೆಟ್ಟಿ ಅವರ ಮಗ ನಿಂಗರಾಜು (21) ಮೃತಪಟ್ಟವರು.

ಬಾಲಕಿಯೊಬ್ಬಳ ಅಪಹರಣಕ್ಕೆ ಸಂಬಂಧಿಸಿದಂತೆ ಮಾಂಬಳ್ಳಿ ಠಾಣೆಯಲ್ಲಿ ಎಂಟು ದಿನಗಳ ಹಿಂದೆ ದೂರು ದಾಖಲಾಗಿತ್ತು.

ADVERTISEMENT

ಯುವಕ ಹಾಗೂ ಬಾಲಕಿ ಚಾಮರಾಜನಗರದಲ್ಲಿ ಮಂಗಳವಾರ ಪತ್ತೆಯಾಗಿದ್ದರು. ಮಾಂಬಳ್ಳಿ ಪೊಲೀಸರು ಅವರನ್ನು ಪೊಲೀಸ್‌ ಜೀಪಿನಲ್ಲಿ ಮಾಂಬಳ್ಳಿ ಠಾಣೆಗೆ ಕರೆದೊಯ್ಯುತ್ತಿರುವಾಗ ಮದ್ದೂರು–ಯರಿಯೂರು ನಡುವೆ ಯುವಕ ಏಕಾಏಕಿ ಜೀಪಿನಿಂದ ಹೊರಗಡೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಲೆ ರಸ್ತೆಗೆ ಬಿದ್ದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಯಳಂದೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ನಿಂಗರಾಜು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರ ಆಕ್ರೋಶ: ವಿಷಯ ತಿಳಿಯುತ್ತಿದ್ದಂತೆಯೇ ಕುಂತೂರು ಮೋಳೆ ಗ್ರಾಮಸ್ಥರು ಯಳಂದೂರುಠಾಣೆ ಮುಂದೆ ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಮಗನ ಸಾವಿಗೆ ಪೊಲೀಸರೇ ಕಾರಣ. ಅವರ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. ಏಕಾಏಕಿ ಬಾಗಿಲು ತೆಗೆದು ಹಾರುವಾಗ ಜೀಪಿನಲ್ಲಿದ್ದ ಪೊಲೀಸರು ಏನು ಮಾಡುತ್ತಿದ್ದರು?ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಈ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು’ ಎಂದು ಪೋಷಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದರು.

ಸ್ಥಳದಲ್ಲಿದ್ದ ಡಿವೈಎಸ್‌ಪಿ ಮಾತನಾಡಿ, ‘ನಾವು ಯುವಕನನ್ನು ಆರೋಪಿಯಂತೆ ನಡೆಸಿಕೊಂಡಿಲ್ಲ. ಕೈಗೆ ಬೇಡಿಯನ್ನೂ ಹಾಕಿರಲಿಲ್ಲ. ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ನೇಹಮಯವಾಗಿಯೇ ಮಾತನಾಡಿದ್ದಾರೆ. ಆತ ಒತ್ತಡದಿಂದ ಏಕಾಏಕಿ ಹೊರಗೆ ಜಿಗಿದಿದ್ದಾನೆ’ ಎಂದು ಹೇಳಿದರು. ಗ್ರಾಮಸ್ಥರು ಆ ಮಾತನ್ನು ಒಪ್ಪಲಿಲ್ಲ.

ಅಮಾನತು ಮಾಡಿ ತನಿಖೆ: ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.‍ಪಿ.ಶಿವಕುಮಾರ್‌ ಅವರು, ‘ಜೀಪಿನಲ್ಲಿದ್ದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಪ್ಪಿದೆಯೋ ಇಲ್ಲವೋ, ನಿರ್ಲಕ್ಷ್ಯ ವಹಿಸಿದ್ದಾರೋ ಇಲ್ಲವೋ, ತಕ್ಷಣವೇ ಅವರನ್ನು ಅಮಾನತು ಮಾಡುತ್ತೇನೆ. ಈ ಬಗ್ಗೆ ತನಿಖೆ ನಡೆಸುತ್ತೇವೆ. ನಿಮ್ಮ ದೂರನ್ನೂ ಕೊಡಿ. ಕೂಲಂಕಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.