ADVERTISEMENT

ಮೌಢ್ಯ ಬಿಟ್ಟರೆ ಬಾಲ್ಯವಿವಾಹ ತಡೆ ಸಾಧ್ಯ: ಪುಟ್ಟರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 16:26 IST
Last Updated 6 ಮಾರ್ಚ್ 2023, 16:26 IST
ಬಾಲ್ಯವಿವಾಹದ ಕುರಿತು ಅರಿವು ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಯುವಮೇಳವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ನಗರಸಭೆಯ ಅಧ್ಯಕ್ಷ ಸಿ.ಎಂ.ಆಶಾ ಇತರರು ಇದ್ದರು
ಬಾಲ್ಯವಿವಾಹದ ಕುರಿತು ಅರಿವು ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಯುವಮೇಳವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ನಗರಸಭೆಯ ಅಧ್ಯಕ್ಷ ಸಿ.ಎಂ.ಆಶಾ ಇತರರು ಇದ್ದರು   

ಚಾಮರಾಜನಗರ: ಪೋಷಕರು ಮೂಢನಂಬಿಕೆಯಿಂದ ಹೊರಬಂದಾಗ ಮಾತ್ರ ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸೋಮವಾರ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯುವಜನ ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಾಲ್ಯವಿವಾಹ ನಿಷೇಧ ಕುರಿತು ಹಮ್ಮಿಕೊಳ್ಳಲಾಗಿದ್ದ ಯುವಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಅನಿಷ್ಟ ಪದ್ಧತಿ ಈಗಲೂ ಚಾಲ್ತಿಯಲ್ಲಿದ್ದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಬಾಲ್ಯವಿವಾಹವು ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದರು.

ADVERTISEMENT

‘ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಬಾಲ್ಯವಿವಾಹದಂತ ಸಮಸ್ಯೆಗಳನ್ನು ತಡೆಯಲು ಮಕ್ಕಳಿಗೆ ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ. ಶಿಕ್ಷಣದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿಯಬಹುದು. ಪೋಷಕರೂ ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗ ಹಾಗೂ ಸ್ಫೂರ್ತಿದಾಯಕವಾಗಬೇಕು. ಬಾಲ್ಯವಿವಾಹ ತಡೆಗಟ್ಟುವಲ್ಲಿ ಪೋಷಕರು, ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಬೇಕು’ ಎಂದು ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಮಾತನಾಡಿ, ‘ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪೋಷಕರು ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು. ಮಕ್ಕಳು ಪೋಷಕರ ಒತ್ತಡಗಳಿಗೆ ಮಣಿದು ಬಾಲ್ಯವಿವಾಹಕ್ಕೆ ಮುಂದಾಗಬಾರದು. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯವಿವಾಹದ ಕುರಿತು ಪ್ರಾಥಮಿಕ ಹಂತದಿಂದಲೇ ಅರಿವು ಮೂಡಿಸಬೇಕು’ ಎಂದರು.

ಬಾಲ್ಯವಿವಾಹ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಇದೇ ವೇಳೆ ಬಾಲ್ಯವಿವಾಹ ಕುರಿತು ಜಾಗೃತಿ ಭಿತ್ತಿಪತ್ರ ಅನಾವರಣ ಮಾಡಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ರೂಪಶ್ರೀ, ಶ್ವೇತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಅನಿತಾ, ಮೊಬಿಲಿಟಿ ಸಂಸ್ಥೆಯ ರಾಜಣ್ಣ, ಪೊಲೀಸ್‌ ಇಲಾಖೆಯ ಪ್ರಸನ್ನಮೂರ್ತಿ, ಆರೋಗ್ಯ ಇಲಾಖೆಯ ಮಾದೇಶ್, ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಮಹೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ವೇದಾವತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.