ADVERTISEMENT

ಚಾಮರಾಜನಗರ | ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ. ಸಿಇಒ ದಿಢೀರ್ ಭೇಟಿ: ಪರಿಶೀಲನೆ

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:47 IST
Last Updated 5 ಫೆಬ್ರುವರಿ 2026, 6:47 IST
<div class="paragraphs"><p>ಚಾಮರಾಜನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಬುಧವಾರ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p></div>

ಚಾಮರಾಜನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಬುಧವಾರ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

   

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಚಾಮರಾಜನಗರ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉದ್ಯೋಗ ಖಾತರಿ ಯೋಜನೆ ಅನುಷ್ಠಾನ, ಎನ್.ಆರ್.ಎಲ್.ಎಂ, ಸ್ವಚ್ಛ ಭಾರತ್ ಮಿಷನ್, ಜಲಜೀವನ್ ಮಿಷನ್ ಯೋಜನೆ, ವಿವಿಧ ವಸತಿ ಯೋಜನೆ, 14 ಮತ್ತು 15ನೇ ಹಣಕಾಸು ಯೋಜನೆ ಹಾಗೂ ಗ್ರಾಮೀಣಾಭಿವೃದ್ದಿ ಯೋಜನೆಗಳಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.

ADVERTISEMENT

ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕಗಳ ಕಾರ್ಯವೈಖರಿ, ಕೂಸಿನ ಮನೆ ಕೇಂದ್ರಗಳ ಅನುಷ್ಠಾನ, ನಿರ್ವಹಣೆ ಹಾಗೂ ತೆರಿಗೆ ವಸೂಲಾತಿ ಕುರಿತ ಕಡತಗಳು ಮತ್ತು ದಾಖಲಾತಿಗಳ ನಿರ್ವಹಣೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಹಾಜರಾತಿ ವೀಕ್ಷಿಸಿದರು.

ಮಾದಾಪುರ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿನೀಡಿ ಗ್ರಂಥಾಲಯ ಸದಸ್ಯತ್ವ ಪಡೆದವರ ಸಂಖ್ಯೆ, ಸಂಗ್ರಹಿಸಲಾಗಿರುವ ಪುಸ್ತಕಗಳು, ಶಾಲಾ ಮಕ್ಕಳ ನೋಂದಣಿ, ನಿರ್ವಹಣೆ, ಗ್ರಂಥಾಲಯಕ್ಕೆ ಭೇಟಿನೀಡುವವರ ಬಗ್ಗೆ ಗ್ರಂಥಾಲಯದ ಮೇಲ್ವಿಚಾರಕರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಸದಸ್ಯರ ನೋಂದಣಿ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಗ್ರಾಮದ ಅಂಗನವಾಡಿ ಕೇಂದ್ರ-1 ಮತ್ತು ಕೇಂದ್ರ-2ಕ್ಕೆ ಭೇಟಿನೀಡಿ, ಮಕ್ಕಳ ಸಂಖ್ಯೆ, ಗರ್ಭಿಣಿ-ಬಾಣಂತಿಯರಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟ ಪರಿಶೀಲಿಸಿದರು. ಆಹಾರ ಪದಾರ್ಥಗಳ ದಾಸ್ತಾನು, ಅಂಗನವಾಡಿ ಕಾರ್ಯಕರ್ತೆ ಮತ್ತು ಮೇಲ್ವಿಚಾರಕರ ಹಾಜರಾತಿ, ದಾಸ್ತಾನು ವಹಿ ಹಾಗೂ ಇತರೆ ವೆಚ್ಚಗಳ ವಹಿಗಳು, ಅಡುಗೆ ಕೋಣೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮತ್ತು ಸ್ವಚ್ಛತೆ ವೀಕ್ಷಿಸಿದರು. ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿರುವ ‘ಮಾದರಿ ಮನೆ’ಗೆ ಭೇಟಿ ನೀಡಿ, ನೋಂದಣಿಯಾಗಿರುವ ಮಕ್ಕಳ ಸಂಖ್ಯೆ, ಹಾಜರಾತಿ ಹಾಗೂ ನಿರ್ವಹಣಾ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿದರು.

ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಳ್ಳನೂರು ಹಾಗೂ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಿಯೂರು ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ವತಿಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಟಾನಗೊಳಿಸಲಾಗಿರುವ ನಳ ಸಂಪರ್ಕ ಕಾಮಗಾರಿಗಳು ಹಾಗೂ ಕಿರು ನೀರು ಸರಬರಾಜು ಪೂರೈಕೆ ಕೇಂದ್ರಗಳನ್ನು ವೀಕ್ಷಿಸಿದರು. ಮಹಿಳೆಯರು, ಗ್ರಾಮದ ಮುಖಂಡರೊಂದಿಗೆ ಸಂವಾದ ನಡೆಸಿದರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು-2025ರ ಮಾರ್ಗಸೂಚಿಗಳ ಅನುಸಾರ ಗ್ರಾಮ ಪಂಚಾಯಿತಿಗಳ ತೆರಿಗೆ ವಸೂಲಾತಿ ಸಂಬಂಧ ಪ್ರತಿ ಬುಧವಾರ ಪ್ರಾರಂಭಿಸಲಾಗಿರುವ ವಿಶೇಷ ತೆರಿಗೆ ವಸೂಲಾತಿ ಅಭಿಯಾನದಡಿ ಮನೆಗಳಿಗೆ ಭೇಟಿನೀಡುವ ಮೂಲಕ ಗರಿಷ್ಠ ಮಟ್ಟದ ತೆರಿಗೆ ಸಂಗ್ರಹಣೆ ಮಾಡಬೇಕು ಎಂದು ತಿಳಿಸಿ ಗ್ರಾಮಸ್ಥರಿಗೆ ತೆರಿಗೆ ಪಾವತಿಸುವಂತೆ ಅರಿವು ಮೂಡಿಸಲಾಯಿತು.

‘ಉತ್ತಮ ಆರೋಗ್ಯ ಸೇವೆ ಒದಗಿಸಿ’ 

ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಿಯೂರು ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರ-ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಹಾಜರಾಗುತ್ತಿದ್ದಾರೆ ಎಂಬ ಮಾಹಿತಿ ಪಡೆದರು. ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುವ ಒಳ ಮತ್ತು ಹೊರ ರೋಗಿಗಳ ದಾಖಲಾತಿ ವಿವರ, ಔಷಧ ದಾಸ್ತಾನು, ಲಭ್ಯತೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗಳ ಕುರಿತು ಸಿಇಒ ಮೋನಾ ರೋತ್‌ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.