ADVERTISEMENT

ಅಂಗವಿಕಲ ಬಾಲಕಿಗೆ ಭಿಕ್ಷಾಟನೆಯಿಂದ ಮುಕ್ತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 13:25 IST
Last Updated 20 ಜೂನ್ 2013, 13:25 IST

ಚಿಂತಾಮಣಿ: ನಗರದಲ್ಲಿ ಅಂಗವಿಕಲ ಬಾಲಕಿಯೊಬ್ಬಳನ್ನು ಭಿಕ್ಷಾಟನೆಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಂಗಳವಾರ ರಕ್ಷಿಸಿ, ಕೆಜಿಎಫ್ ರೀಮ್ಯಾಂಡ್ ಹೋಂಗೆ ಸೇರಿಸಿದ್ದಾರೆ.

ಪಾಲೆಟೆಕ್ನಿಕ್ ರಸ್ತೆ ಸಮೀಪದ ಟೆಂಪೊ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ 12 ವರ್ಷದ ಬಾಗೇಪಲ್ಲಿ ತಾಲ್ಲೂಕಿನ ಗಡದಂ ಸಮೀಪ ಗೊಳ್ಳಹಳ್ಳಿಯ ಬಾಲಕಿಯ ಸ್ಥಿತಿ ಕುರಿತು ಎಬಿವಿಪಿ ಕಾರ್ಯಕರ್ತರು ಮಹಿಳಾ ಮತ್ತು  ಮಕ್ಕಳ  ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದರು. ಆದರೆ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳದಿದ್ದಾಗ ಬಾಲಕಿಗೆ ತುರ್ತು ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.

ಇದಾದ ನಂತರ ತಹಶೀಲ್ದಾರ್ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಸಿಡಿಪಿಓ ಕಚೇರಿ ಅಧಿಕಾರಿ  ಸಿ.ವೆಂಕಟನಾರಾಯಣಮ್ಮ ಮಂಗಳವಾರ ವಿದ್ಯಾರ್ಥಿಗಳ ಜತೆ ತೆರಳಿ ಬಾಲಕಿಯನ್ನು ಪೊಲೀಸರ ನೇತೃತ್ವದಲ್ಲಿ ವಶಕ್ಕೆ ತೆಗೆದುಕೊಂಡು ಕೌನ್ಸೆಲಿಂಗ್ ನಡೆಸಿದರು.

ಅಧಿಕಾರಿಗಳಿಗೆ ಹೇಳಿಕೆ ನೀಡಿದ ಬಾಲಕಿ `ಪಾಲಕರಾದ ಗಂಗಮ್ಮ, ಗಂಗಾಧರ ಅವರು ನಾನು ಅಂಗವಿಕಲೆ ಆಗಿದ್ದರಿಂದ ಸರಿಯಾಗಿ ನೋಡಿಕೊಳ್ಳಲಿಲ್ಲ. ಆಹಾರಕ್ಕಾಗಿ ರಸ್ತೆ ಬದಿ ಭಿಕ್ಷೆ ಬೇಡಿ ಮಲಗುವ ಪರಿಸ್ಥಿತಿ ಇದೆ' ಎಂದು ತಿಳಿಸಿದ್ದಾಳೆ. 

ಘಟನೆ ಕುರಿತು ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ, ಬಡತನದಿಂದ ಸಮಾಜದಲ್ಲಿ ಇಂಥ ಎಷ್ಟೋ ಮಕ್ಕಳು ವಿದ್ಯಾಭ್ಯಾಸವಿಲ್ಲದೆ  ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕು' ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.