ADVERTISEMENT

ಅಂತಃಕರಣವೇ ಬೆಳೆದು ಮರವಾಗಿ ನಿಂತಾಗ

ಟಿ.ನಂಜುಂಡಪ್ಪ
Published 18 ಜುಲೈ 2013, 10:42 IST
Last Updated 18 ಜುಲೈ 2013, 10:42 IST

ಗೌರಿಬಿದನೂರು ತಾಲ್ಲೂಕು ನಾಮಗೊಂಡ್ಲು ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ಭೇಟಿ ನೀಡಿದರೆ, ಹಳೆಯ ಮತ್ತು ಹೊಸ ವಿದ್ಯಾರ್ಥಿಗಳ ಸಂಗಮ ಮತ್ತು ಶ್ರಮಕ್ಕೆ ಸಾಕ್ಷಿಯಾದಂತೆ ಭಾಸವಾಗುತ್ತದೆ. ಅದರಲ್ಲೂ ಈ ಶಾಲೆಯ ಹಳೆ ವಿದ್ಯಾರ್ಥಿಗಳ ಜೊತೆ ಹೋದರಂತೂ ಬೇರೆಯದ್ದೇ ದೃಷ್ಟಿಕೋನ ಮೂಡುತ್ತದೆ. ಶಾಲೆ ಆವರಣ ಸಮೃದ್ಧವಾಗಿಡಲು ಹಾಲಿ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಎಂಬುದರಿಂದ ಆರಂಭಗೊಂಡು ಹಳೆ ವಿದ್ಯಾರ್ಥಿಗಳು ಏನೆಲ್ಲಾ ಮಾಡಿದರು ಎಂಬ ಬಗ್ಗೆ ಕುತೂಹಲ ಹೆಚ್ಚುತ್ತದೆ.

ವಿಶಾಲವಾದ ಆಟದ ಮೈದಾನ ಮತ್ತು ಹಸಿರಾದ ಪರಿಸರ ಇರುವುದರಿಂದ ಈ ಶಾಲೆ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶವಿದೆ. ಶಾಲಾ ವ್ಯಾಪ್ತಿ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ. ಈ ಎಲ್ಲಕ್ಕಿಂತ ಆಸಕ್ತಿಕರ ಸಂಗತಿಯೆಂದರೆ, ಶಾಲಾ ಆವರಣದಲ್ಲಿರುವ ಎಲ್ಲ ಗಿಡ- ಮರಗಳ ಮೇಲೆ ಹಳೆ ವಿದ್ಯಾರ್ಥಿಗಳ ಸ್ಪರ್ಶವಿದೆ. ಯಾವುದೇ ಗಿಡ- ಮರದ ಬಗ್ಗೆ ಮಾಹಿತಿ ಪಡೆಯಲು ಇಚ್ಛಿಸಿದರೂ ಒಬ್ಬೊಬ್ಬ ವಿದ್ಯಾರ್ಥಿಯ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ.

`ನಮ್ಮ ಶಾಲೆಗೂ ಮತ್ತು ಹಸಿರು ಪರಿಸರಕ್ಕೂ ಗಾಢವಾದ ನಂಟಿದೆ. ಹಳೆ ವಿದ್ಯಾರ್ಥಿಗಳು ಹಲವು ವರ್ಷಗಳ ಹಿಂದೆ ನೆಟ್ಟ ಸಸಿಗಳು ಈಗ ಹೆಮ್ಮರವಾಗಿ ಬೆಳೆದಿದ್ದರೆ, ಹೊಸ ವಿದ್ಯಾರ್ಥಿಗಳು ಹೊಸದಾಗಿ ಸಸಿಗಳನ್ನು ನೆಟ್ಟು ಹೆಮ್ಮರವಾಗಿಸುವ ಪ್ರಯತ್ನದಲ್ಲಿದ್ದಾರೆ. ನೀರಿನ ತೊಂದರೆಯಾಗದಿರಲಿಯೆಂದೇ ಶಾಲಾ ಆವರಣದಲ್ಲೇ ದೊಡ್ಡ ಹೊಂಡ ತೋಡಲಾಗಿದೆ. ಹೊಂಡದಲ್ಲಿ ಶೇಖರಣೆಯಾಗುವ ನೀರಿನಿಂದ ಗಿಡ- ಮರಗಳನ್ನು ಬೆಳೆಸಲಾಗುತ್ತದೆ. ಶಾಲೆಯ ನಾಲ್ಕು ಗೋಡೆಗಳ ಮಧ್ಯೆಯೇ ಪಾಠ ಮಾಡುವ ಬದಲು ಮರಗಳ ನೆರಳಿನಲ್ಲಿ ತಂಪಾದ ವಾತಾವರಣದಲ್ಲಿ ಮಕ್ಕಳಿಗೆ ಪಾಠ ಮಾಡುತ್ತೇವೆ' ಎಂದು ಶಾಲೆ ಮುಖ್ಯ ಶಿಕ್ಷಕ ಜಗದೀಶ್ `ಪ್ರಜಾವಾಣಿ'ಗೆ ತಿಳಿಸಿದರು.

`ಇಲ್ಲಿ ಪರಿಸರ ಪಾಠಕ್ಕೂ ನೀಡುತ್ತೇವೆ. ಪರಿಸರ ದಿನಾಚರಣೆ ಸಂದರ್ಭಗಳಲ್ಲಿ ಶಾಲಾ ಆವರಣಕ್ಕೆ ಸೀಮಿತಗೊಳ್ಳದೆ ಗ್ರಾಮದಲ್ಲಿ ಪರಿಸರ ಜಾಗೃತಿ ಮೆರವಣಿಗೆ ಕೈಗೊಂಡು ಪ್ರಮುಖ ಸ್ಥಳಗಳಲ್ಲಿ ಸಸಿಗಳನ್ನು ನೆಡುತ್ತೇವೆ. ಸ್ವಚ್ಛತಾ ಕಾರ್ಯ ಜೊತೆಜೊತೆಯಲ್ಲೇ ಮಾಡುತ್ತೇವೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ಮಾಡುತ್ತೇವೆ. ಕಲಿಕೆಯಲ್ಲಿ ತೀರ ಹಿಂದುಳಿದಿರುವ ಮಕ್ಕಳತ್ತ ವಿಶೇಷ ಕಾಳಜಿ ತೋರಿ, ಗ್ರಾಮದ ಬುದ್ಧಿವಂತ ಮಕ್ಕಳೊಂದಿಗೆ ನಂಟನ್ನು ಬೆಳೆಸಲು ಪ್ರಯತ್ನಿಸುತ್ತೇವೆ. ಕಲಿಕೆ ಕಠಿಣವಲ್ಲ, ಅತ್ಯಂತ ಸುಲಭ ಎಂಬುದನ್ನು ಮನಗಾಣಿಸುತ್ತೇವೆ' ಎಂದು ಅವರು ತಿಳಿಸಿದರು.

`ನಮ್ಮ ಶಾಲೆಯಲ್ಲಿ ವಿಜ್ಞಾನ ಸಂಘ, ಕಲಾ ಸಂಘ, ಕ್ರೀಡಾ ಸಂಘ, ಪರಿಸರ ಸಂಘ, ಗ್ರಾಹಕರ ಸಂಘ ಮುಂತಾದವುಗಳನ್ನು ರಚಿಸಿಕೊಂಡಿದ್ದೇವೆ. ನಮ್ಮ ಶಾಲೆ ಮಕ್ಕಳು ಹಲವಾರು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನು ಗಳಿಸಿದ್ದಾರೆ. ವರ್ಷಕ್ಕೊಮ್ಮೆ ಸಮೀಪದ ಭೀಮೇಶನ ಬೆಟ್ಟಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ಬೆಟ್ಟ- ಗುಡ್ಡ ಮತ್ತು ವಿವಿಧ ಜಾತಿ ಗಿಡಮರಗಳನ್ನು ಪರಿಚಯಿಸುತ್ತೇವೆ. ಪ್ರತಿ ಗುರುವಾರ ತರಗತಿಗಳು ಪ್ರಾರಂಭವಾಗುವ ಮುನ್ನ ವಿವೇಕಾನಂದ ಬಾಲವಿಕಾಸ ಕೇಂದ್ರದ ವತಿಯಿಂದ ಧ್ಯಾನ, ಯೋಗ, ವಿವೇಕಾನಂದ ಚಿಂತನೆಗಳ ಬಗ್ಗೆ ಬೋಧನೆ ಮಾಡಲಾಗುತ್ತದೆ' ಎಂದು ಶಿಕ್ಷಕ ಶಿವಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.