ADVERTISEMENT

ಅನರ್ಹರಿಗೆ ಅನುದಾನ: ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 10:35 IST
Last Updated 4 ಮಾರ್ಚ್ 2014, 10:35 IST

ಬಾಗೇಪಲ್ಲಿ: ತಾಲ್ಲೂಕಿನ ದೇವರಗುಡಿ­ಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸೋಮವಾರ ಅರ್ಹ ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಿ ಕೊಳ್ಳಲು ಅನುದಾನ ನೀಡು­ವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡ ಹನುಮೇಶ, ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿದ್ದರೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಅನರ್ಹರಿಗೆ ಅನುದಾನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

   ಬೆಳಿಗ್ಗೆ 8 ರಿಂದ  ಮಧ್ಯಾಹ್ನ 12 ಗಂಟೆಯವರೆಗೂ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಸಾರ್ವಜನಿಕರು ಪ್ರತಿಭಟಿಸಿದರೂ ಕೂಡ ಸಂಬಂಧಪಟ್ಟ ಅಧಿಕಾರಿ­ಗಳಾಗಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಕಚೇರಿಗೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಪ್ರತಿಭಟನೆ ತೀವ್ರಗೊಳಿಸಿದರು.

‘ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಹಣವನ್ನು ಡ್ರಾ ಮಾಡಿ ಮನಸೋ ಇಚ್ಛೆ ದುರ್ಬಳಕೆ ಮಾಡಿ­ಕೊಳ್ಳುತ್ತಿದ್ದಾರೆ. ಲಂಚ ನೀಡಿದವರಿಗೆ ಮಾತ್ರ  ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುತ್ತಾರೆ’ ಎಂದು ಆರೋಪಿಸಿದರು.

ಶೌಚಾಲಯ ಅನುದಾನಕ್ಕೆ ಸಲ್ಲಿಕೆಯಾಗಿದ್ದ ಒಟ್ಟು 950 ಅರ್ಜಿಗಳಲ್ಲಿ ಹಲವು ಅರ್ಜಿಗಳು ನಾಪತ್ತೆಯಾಗಿವೆ. ಇದು ಅಧಿಕಾರಿಗಳ ಬೇಜಾವಾಬ್ದಾರಿತನಕ್ಕೆ ಸಾಕ್ಷಿ ಎಂದು ಆಕ್ರೋಶರಿತರಾಗಿ ಹೇಳಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಸದಸ್ಯ ರವಿಚಂದ್ರ ಹಾಗೂ ಮುಖಂಡ ಹನುಮೇಶ್ ಅವರ ನಡುವೆ ನಾಪತ್ತೆಯಾಗಿರುವ ಅರ್ಜಿಗಳ ಕುರಿತು ವಾಗ್ವಾದ ನಡೆಯಿತು.   ಪ್ರತಿಭಟನೆಯಲ್ಲಿ ಮುಖಂಡರಾದ ಸುಬ್ಬಣ್ಣ, ಶ್ರೀನಿವಾಸ,  ನಂಜುಂಡಪ್ಪ, ರಾಮಚಂದ್ರ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.