ADVERTISEMENT

ಅನಾನಸ್ ಮಾರಾಟ ಜೀವನಾಧಾರ

ರಾಹುಲ ಬೆಳಗಲಿ
Published 24 ಡಿಸೆಂಬರ್ 2012, 6:07 IST
Last Updated 24 ಡಿಸೆಂಬರ್ 2012, 6:07 IST
ಚಿಕ್ಕಬಳ್ಳಾಪುರದ ಹಳೆಯ ಬಸ್ ನಿಲ್ದಾಣದ ಬಳಿ ಬಸ್ ಪ್ರಯಾಣಿಕರಿಗೆ ಬಾಲಕರು ಅನಾನಸ್‌ಗಳನ್ನು ಮಾರುತ್ತಿರುವುದು.
ಚಿಕ್ಕಬಳ್ಳಾಪುರದ ಹಳೆಯ ಬಸ್ ನಿಲ್ದಾಣದ ಬಳಿ ಬಸ್ ಪ್ರಯಾಣಿಕರಿಗೆ ಬಾಲಕರು ಅನಾನಸ್‌ಗಳನ್ನು ಮಾರುತ್ತಿರುವುದು.   

ಚಿಕ್ಕಬಳ್ಳಾಪುರ: ನಗರದ ಹೃದಯಭಾಗದಲ್ಲಿರುವ ಹಳೆಯ ಬಸ್ ನಿಲ್ದಾಣವು ಬಸ್ ಆಗಮನ ಮತ್ತು ನಿರ್ಗಮನಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ನಿಲ್ದಾಣವು ಹಲವರ ಪಾಲಿಗೆ ಜೀವನಾಧಾರವಾಗಿದೆ. ಒಂದೇ ದಿನದಲ್ಲಿ ಸಾವಿರಾರು ರೂಪಾಯಿಗಳಷ್ಟು ದುಡಿಯಲು ಸಾಧ್ಯವಾಗದಿದ್ದರೂ ಒಂದೆರಡು ಹೊತ್ತಿಗೆ ಊಟ ಮಾಡುವಷ್ಟು ಮತ್ತು ಕುಟುಂಬ ಸದಸ್ಯರಿಗೆ ನೀಡುವಷ್ಟು ಹಣವಾದರೂ ಕೈಸೇರುತ್ತದೆ. ಅಲ್ಪಸ್ವಲ್ಪ ದುಡಿಮೆ ಹಣವನ್ನೇ ನಂಬಿಕೊಂಡು 30ಕ್ಕೂ ಹೆಚ್ಚು ಮಂದಿ ಬದುಕುತ್ತಿದ್ದಾರೆ.

ಅಂತಹವರನ್ನು ಹುಡುಕುವುದು ಕಷ್ಟದ ಕೆಲಸವೇನಲ್ಲ. ಹಳೆಯ ಬಸ್ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ನಿಂತರೆ ಸಾಕು, ಅವರು ಕಾಣಿಸಿಕೊಳ್ಳುತ್ತಾರೆ. ನಿಲ್ದಾಣದಲ್ಲಿ ಬಸ್ ಪ್ರವೇಶಿಸಿದ ಕೂಡಲೇ ಮತ್ತು ನಿರ್ಗಮಿಸುವ ವೇಳೆ ಅವರ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ. ತಟ್ಟೆ ಪೂರ್ತಿ ಅನಾನಸ್, ಸೌತೆಕಾಯಿ ಮತ್ತು ಕಡ್ಲೆಕಾಯಿಗಳನ್ನು ಹಿಡಿದುಕೊಂಡು ಲಗುಬಗೆಯಲ್ಲಿ ಓಡುತ್ತಾರೆ. ಬಸ್‌ನ ಚಾಲಕ, ನಿರ್ವಾಹಕನ ಬೈಗುಳಗಳತ್ತ ಗಮನ ಕೊಡದೆ ಒಬ್ಬಾತ ದಿಢೀರ್ ಬಸ್‌ನೊಳಗೆ ನುಸುಳಿಬಿಟ್ಟರೆ, ಮತ್ತೊಬ್ಬ ಬಸ್ ಹೊರಗೆ ಉಳಿದುಕೊಂಡೇ ಕಿಟಕಿಯ ತುದಿಗಳಲ್ಲಿ ತಟ್ಟೆಯನ್ನು ಎತ್ತಿ ಹಿಡಿಯುತ್ತಾನೆ.

ಅವರ‌್ಯಾರೂ ವಹಿವಾಟು ಚತುರರಲ್ಲ, ಅದರಲ್ಲಿ ಪರಿಣತಿ ಪಡೆದವರೂ ಅಲ್ಲ. `ತಟ್ಟೆಯಲ್ಲಿನ ಅನಾನಸ್, ಸೌತೆಕಾಯಿ ಮತ್ತು ಕಡ್ಲೆಕಾಯಿ ಸಂಜೆ ವೇಳೆಗೆ ಖಾಲಿಯಾಗಬೇಕು. ಮಾರಾಟದಿಂದ ದುಡಿದ ಅಲ್ಪಸ್ವಲ್ಪ ಹಣವನ್ನು ತೆಗೆದುಕೊಂಡು ಅಪ್ಪ ಅಥವಾ ಅಮ್ಮನಿಗೆ ನೀಡಬೇಕು' ಎಂಬ ಏಕಮೇವ ಗುರಿಯೊಂದಿಗೆ ಅವರು ವಹಿವಾಟಿನಲ್ಲಿ ತೊಡಗಿಕೊಳ್ಳುತ್ತಾರೆ. ಪರಿಚಿತರಿಂದ ಅಥವಾ ಅಪರಿಚಿತರಿಂದ ಎಷ್ಟೇ ಟೀಕೆ-ಟಿಪ್ಪಣಿ ಬರಲಿ, ಹೊಡೆಯಲಿ ಅಥವಾ ಬಯ್ಯಲಿ. ಪ್ರಾಮಾಣಿಕವಾಗಿ ದುಡಿಯಬೇಕು ಎಂಬ ನಿಶ್ಚಿತ ಮನಸ್ಸಿನೊಂದಿಗೆ ಅವರು ವ್ಯವಹಾರದಲ್ಲಿ ಪಾಲ್ಗೊಳ್ಳುತ್ತಾರೆ. 

`ಇಡೀ ದಿನ ಅಲೆದಾಡಿ ತಟ್ಟೆ ಪೂರ್ತಿ ಖಾಲಿಗೊಳಿಸಿ ಮಾರಾಟ ಮಾಡಿದರೂ ಅದರ ಪೂರ್ಣಪ್ರಮಾಣದ ಹಣ ನಮಗೆ ಸಿಗುವುದಿಲ್ಲ. ನಾವು ದಿನಕ್ಕೆ ಕನಿಷ್ಠ ಒಂದು ಸಾವಿರ ರೂಪಾಯಿಯವರೆಗೆ ದುಡಿಯಬೇಕು. ಆ ಹಣವನ್ನು ನಮ್ಮ ಮಾಲೀಕರಿಗೆ ಕೊಡಬೇಕು. ಅವರು ಅದರಲ್ಲಿ 300 ರೂಪಾಯಿ ನಮಗೆ ನೀಡುತ್ತಾರೆ. ಅದರಲ್ಲಿನ ಸ್ವಲ್ಪ ಹಣ ತಿಂಡಿ ಮತ್ತು ಊಟಕ್ಕೆ ಖರ್ಚಾಗುತ್ತದೆ. ಮನೆಗೆ ಸ್ವಲ್ಪ ಹಣ ಕೊಟ್ಟು ಉಳಿದಿದ್ದನ್ನು ನನ್ನ ಖರ್ಚಿಗೆ ಇಟ್ಟುಕೊಳ್ಳುತ್ತೇನೆ. ಯಾವಾಗ ಹೆಚ್ಚು ಮಾರಾಟ ಮಾಡಲು ಆಗುವುದಿಲ್ವೊ, ಅವತ್ತು ದಿನದ ದುಡಿಮೆ ಕಷ್ಟವೆಂದೇ ಅರ್ಥ' ಎಂದು ಯುವ ಮಾರಾಟಗಾರರು ಹೇಳುತ್ತಾರೆ.

ಹೀಗೆ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಂಡವರಲ್ಲಿ ಬಹುತೇಕ ಮಂದಿ 12 ರಿಂದ 18ರ ವಯೋಮಾನದವರು ಇದ್ದಾರೆ. ಕೆಲವರು ಶಾಲೆಗಳನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಇನ್ನೂ ಕೆಲವರು ವಾರದ ಆರು ದಿನ ಶಾಲೆಗೆ ಹೋಗುತ್ತಾರೆಯಾದರೂ ಭಾನುವಾರ ಇಡೀ ದಿನ ಮಾರಾಟ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಮಳೆ, ಚಳಿ ಅಥವಾ ಬಿಸಿಲಿರಲಿ, ಮಕ್ಕಳಲ್ಲದೇ ಯುವಜನರು ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಅನಾನಸ್, ಸೌತೆಕಾಯಿ ಮತ್ತು ಕಡ್ಲೆಕಾಯಿಗಳನ್ನು ಮಾರಾಟ ಮಾಡಲೇಬೇಕು. ಯಾವುದೇ ನೆಪ ಹೇಳುವಂತಿಲ್ಲ.

`ಶಾಲೆಗೆ ಹೋಗಬೇಕು. ಓದು-ಕಲಿತು ದೊಡ್ಡ ಮನುಷ್ಯನಾಗಬೇಕು ಎಂಬ ಆಸೆ ಇತ್ತು. ಆದರೆ ಆರ್ಥಿಕ ಮತ್ತು ಕೌಟಂಬಿಕ ಸಮಸ್ಯೆಯಿಂದ ಶಾಲೆಗೆ ಹೋಗಲಾಗಲಿಲ್ಲ. ಈಗ ಒತ್ತಾಯಪೂರಕವಾಗಿ ಶಾಲೆಗೆ ಸೇರಿಸಿದರೂ ವಿದ್ಯಾಭ್ಯಾಸ ಮಾಡುವುದು ಕಷ್ಟ.

ವಾಹನಗಳನ್ನು ಚಾಲನೆ ಮಾಡುವುದನ್ನು ಕಲಿತಿದ್ದೇನೆ. ಯಾವಾಗ ವಾಹನ ಚಾಲನೆ ಮಾಡುವುದಿಲ್ವೊ, ಆಗ ಬಸ್‌ಗಳಲ್ಲಿ ಮಾರಾಟದ ಕೆಲಸ ಮಾಡುತ್ತೇನೆ. ಸಿಗುವ ಅಲ್ಪಸ್ವಲ್ಪ ದುಡಿಮೆಯನ್ನೇ ನಂಬಿಕೊಂಡು ಕುಟುಂಬ ನಿರ್ವಹಿಸಲು ಪ್ರಯತ್ನಿಸುತ್ತೇನೆ' ಎಂದು ಬಾಲಕನೊಬ್ಬ ತಿಳಿಸಿದ. ನಗರದ ವಿವಿಧ ಬಡಾವಣೆಗಳಲ್ಲಿ ವಾಸವಿರುವ ಶಬ್ಬೀರ್, ಜಹೀರ್, ಸುರೇಶ್ ಮುಂತಾದವರು ಹೀಗೆಯೇ ಜೀವನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.