ADVERTISEMENT

ಅಭಿವೃದ್ಧಿಗೆ ಕಾರ್ಯಕರ್ತರ ಸಹಕಾರ ಅಗತ್ಯ

ಪಕ್ಷ ಸಂಘಟನೆಗೆ ವಿಶ್ವಾಸ ಕಳೆದುಕೊಳ್ಳದಿರಿ: ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಮುನಿಯಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 13:30 IST
Last Updated 30 ಮೇ 2018, 13:30 IST

ಶಿಡ್ಲಘಟ್ಟ: ಸ್ಪಷ್ಟ ಬಹುಮತ ಬಾರದ ಕಾರಣ ಕೋಮುವಾದಿಗಳನ್ನು ದೂರ ಇಟ್ಟು, ಜಾತ್ಯತೀತ ಪಕ್ಷಗಳು ಒಂದಾಗಿ ಸರ್ಕಾರ ರಚಿಸುವ ಅನಿವಾರ್ಯತೆ ಎದುರಾಗಿದೆ. ಈ ಸಂದರ್ಭದಲ್ಲಿ ಅಭಿವೃದ್ಧಿಗೆ ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಶಾಸಕ ವಿ. ಮುನಿಯಪ್ಪ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕೆಂದು ಹೊರಟಿದ್ದ ಬಿಜೆಪಿ ನಾಯಕರ ಓಟಕ್ಕೆ ತಡೆ ಹಾಕಲು ಕಾಂಗ್ರೆಸ್‌ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದೆ. ಕೇವಲ 38 ಸ್ಥಾನ ಜಯ ಗಳಿಸಿರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ಸರ್ಕಾರ ರಚನೆ ಮಾಡಿದೆ. ಮುಂದಿನ ಆರು ತಿಂಗಳು ಸರ್ಕಾರಕ್ಕೆ ಯಾವುದೇ ಭಯವಿಲ್ಲ ಎಂದರು.

ಆರು ತಿಂಗಳ ನಂತರವೂ ಸರ್ಕಾರ ಮುಂದುವರಿಯುವ ನಂಬಿಕೆ ಯಾರಲ್ಲೂ ಇಲ್ಲ. ಆದರೆ ಈ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಶೀಘ್ರ ಮಂತ್ರಿ ಮಂಡಲ ರಚನೆಯಾಗಿ ವದಂತಿಗಳಿಗೆ ಉತ್ತರ ನೀಡುವುದು ಎಂದು ಹೇಳಿದರು.

ADVERTISEMENT

ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಪೈಪೋಟಿ ಯಿಂದ ಕೆಲಸ ಮಾಡಿದ್ದಾರೆ. ಗೆಲುವಿ ಗಾಗಿ ಹೋರಾಟ ಮಾಡಿದ್ದಾರೆ. ಆದರೆ ಈಗ ಕೋಮುವಾದಿಗಳನ್ನು ದೂರವಿಡುವ ಕಾರಣಕ್ಕಾಗಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವುದು ಅನಿವಾರ್ಯವಾಗಿದೆ. ಪಕ್ಷದ ಕಾರ್ಯಕರ್ತರು ಕೈಕಟ್ಟಿ ಕೂಡಬಾರದು. ಹಳ್ಳಿಗಳಲ್ಲಿ ಅಭಿವೃದ್ಧಿಯ ಕಡೆಗೆ ಗಮನಕೊಟ್ಟು, ಎಲ್ಲ ಸಮಸ್ಯೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಅದಕ್ಕೆ ತಮ್ಮ ಸಹಕಾರವೂ ಇರುತ್ತದೆ ಎಂದು ಭರವಸೆ ನೀಡಿದರು.

ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಶಿಧರ್ ಮಾತನಾಡಿ, ಪಕ್ಷದ ಕಾರ್ಯಕರ್ತರಲ್ಲಿ ಬದ್ಧತೆ ಇರಬೇಕು. ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿದರೆ ಸೋಲಿನ ಭಯ ಕಾಡುವುದಿಲ್ಲ. ಸಾಕಷ್ಟು ಪಂಚಾಯಿತಿಗಳಲ್ಲಿ ಪಕ್ಷದ ಕಾರ್ಯಕರ್ತರು ಬೇರೆ ಪಕ್ಷಕ್ಕೆ ಸಹಕಾರ ನೀಡಿದ್ದಾರೆ. ಈ ಕುರಿತು ಬೇಸರವಿದೆ. ಯಾವ ಪಂಚಾಯಿತಿಗಳಲ್ಲಿ ಬಹುಮತ ಬಂದಿದೆಯೋ ಅಂತಹ ಪಂಚಾಯಿತಿಗಳ ಅಭಿವೃದ್ಧಿಗಾಗಿ ಪ್ರಾಶಸ್ತ್ಯ ನೀಡಲಾಗುವುದು ಎಂದರು.

ಯಾವುದೇ ಹಳ್ಳಿಯನ್ನು ನಿರ್ಲಕ್ಷಿ ಸುವ ಪ್ರಶ್ನೆ ಇಲ್ಲ. ಪ್ರಾಮಾಣಿಕ ವಾಗಿ ಪಕ್ಷದ ಸಂಘಟನೆಗಾಗಿ, ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿರುವ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿಸುವುದಿಲ್ಲ. ಪಕ್ಷಕ್ಕೆ ಮೋಸ ಮಾಡಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಕ್ಷೇತ್ರದ ವಿವಿಧ ಭಾಗಗಳಿಂದ ಬಂದಿದ್ದ ಕಾರ್ಯಕರ್ತರು ಶಾಸಕ ವಿ.ಮುನಿಯಪ್ಪ ಅವರನ್ನು ಅಭಿನಂದಿಸಿ ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸದಸ್ಯ ಸತೀಶ್, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಯಾಸ್ಮೀನ್‌ ತಾಜ್‌, ನಗರಸಭಾ ಸದಸ್ಯ ಚಿಕ್ಕಮುನಿಯಪ್ಪ, ಜೆ.ಎಂ.ಬಾಲಕೃಷ್ಣ, ತಾಲ್ಲೂಕು ಪಂಚಾ ಯಿತಿ ಸದಸ್ಯೆ ಪಂಕಜಾ ನಿರಂಜನ್, ಎಚ್.ಎಂ.ಮುನಿಯಪ್ಪ, ಬಿ.ಸಿ.ವೆಂಕಟೇಶಪ್ಪ, ಭಕ್ತರಹಳ್ಳಿ ಮುನೇಗೌಡ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಭೀಮೇಶ್, ಗುಡಿಹಳ್ಳಿ ಚಂದ್ರು, ಬಿ. ನಾರಾಯಣಸ್ವಾಮಿ ಇದ್ದರು.

**
ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ ಜೊತೆಗೆ ಜಿದ್ದಾಜಿದ್ದಿಯ ಹೋರಾಟ ನಡೆಸಿದ್ದಾರೆ. ಈಗ ಸರ್ಕಾರದಲ್ಲಿ ಹೊಂದಾಣಿಕೆ ಅನಿವಾರ್ಯ
ವಿ. ಮುನಿಯಪ್ಪ,ಶಾಸಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.