ADVERTISEMENT

ಅಭ್ಯರ್ಥಿಗಾಗಿ ನಿಲ್ಲದ ಹುಡುಕಾಟ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:37 IST
Last Updated 4 ಏಪ್ರಿಲ್ 2013, 8:37 IST

ಚಿಂತಾಮಣಿ: ವಿಧಾನಸಭಾ ಚುನಾವಣೆ ನಾಮಪತ್ರಗಳನ್ನು ಸಲ್ಲಿಸುವ ದಿನ ಹತ್ತಿರ ಬರುತ್ತಿದ್ದರೂ ಕ್ಷೇತ್ರದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಭ್ಯರ್ಥಿ ಘೋಷಣೆಯಲ್ಲಿ ತಿಣಕಾಡುತ್ತಿವೆ.

ಕ್ಷೇತ್ರದ ರಾಜಕೀಯ ಪ್ರಮುಖವಾಗಿ ಶಾಸಕ ಡಾ.ಎಂ.ಸಿ.ಸುಧಾಕರ್, ಕಾಂಗ್ರೆಸ್ ನಾಯಕಿ ವಾಣಿ ಕೃಷ್ಣಾರೆಡ್ಡಿ ಹಾಗೂ ಜೆಡಿಎಸ್ ಜೆ.ಕೆ.ಕೃಷ್ಣಾರೆಡ್ಡಿ ಹೆಸರು ಕೇಳಿಬರುತ್ತಿವೆ.

ಶಾಸಕ ಡಾ.ಎಂ.ಸಿ.ಸುಧಾಕರ್ ಸ್ವತಂತ್ರವಾಗಿ, ವಾಣಿ ಕೃಷ್ಣಾರೆಡ್ಡಿ ಕಾಂಗ್ರೆಸ್‌ನಿಂದ ಹಾಗೂ ಜೆ.ಕೆ.ಕೃಷ್ಣಾರೆಡ್ಡಿ ಜೆಡಿಎಸ್ ಅಭ್ಯರ್ಥಿಗಳಾಗಿ ಸ್ಫರ್ಧಿಸುತ್ತಾರೆ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದರೂ ರಾಜಕೀಯ ಒಳಸುಳಿಗಳು ಸಾಕಷ್ಟು ಆಳವಾಗಿ ಸುತ್ತುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಒಬ್ಬೊಬ್ಬ ಅಭ್ಯರ್ಥಿಯೂ ಮಾತ್ರ ರೇಸ್‌ನಲ್ಲಿದ್ದರೂ ಆಯ್ಕೆಯ ಘೋಷಣೆ ಮಾತ್ರ ಆಗುತ್ತಿಲ್ಲ. ಶಾಸಕ ಡಾ.ಎಂ.ಸಿ.ಸುಧಾಕರ್ ಸ್ವತಂತ್ರವಾಗಿ ಸ್ಪರ್ಧಿಸಲು ಇಚ್ಚಿಸಿದ್ದರೂ ಕಾಂಗ್ರೆಸ್‌ನ ಕೆಲವು ನಾಯಕರು ಕಾಂಗ್ರೆಸ್ ಅಭ್ಯರ್ಥಿಯಾಗಿಯೇ ಸ್ಪರ್ಧಿಸಬೇಕೆಂಬ ಒತ್ತಡ ತರುತ್ತಿದ್ದಾರೆ.

ಶಾಸಕ ಡಾ.ಎಂ.ಸಿ.ಸುಧಾಕರ್ ಕ್ಷೇತ್ರದ ಕೇಂದ್ರ ಬಿಂದು. ಜೆಡಿಎಸ್‌ನ ನಾಯಕರು ಜೆಡಿಎಸ್‌ಗೆ ಕರೆತರಲು ತೀವ್ರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮುಖಂಡರಾದ ರಾಜಣ್ಣ, ಜಿ.ಕೆ.ವೆಂಕಟಶಿವಾರೆಡ್ಡಿ,  ಶ್ರೀನಿವಾಸಗೌಡ ಹಲವರು ಶಾಸಕರ ಮನವೊಲಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಲ್ಲಿ ಒಬ್ಬರೇ ಅಭ್ಯರ್ಥಿ ಇದ್ದರೂ ಇನ್ನೂ ಘೋಷಣೆ ಮಾಡುತ್ತಿಲ್ಲ.

ಇತ್ತ ಶಾಸಕರೂ ಸಹ ಮುಗುಮ್ಮೋಗಿರುವುದು ಕೂತುಹಲ ಕೆರಳಿಸಿದೆ. ಹೀಗಾಗಿ ಮೇಲ್ನೋಟಕ್ಕೆ ರಾಜಕೀಯ ವಿದ್ಯಮಾನಗಳು ತಣ್ಣಗಿದ್ದರೂ ಆಂತರಿಕವಾಗಿ ಮೂವರು ಅಭ್ಯರ್ಥಿಗಳು ತಂತ್ರ, ಪ್ರತಿ ತಂತ್ರಗಳನ್ನು ನಡೆಸುತ್ತಿದ್ದಾರೆ. ಶಾಸಕ ಸುಧಾಕರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ ಎಂದು ಅವರ ಬೆಂಬಲಿಗರ ವಾದ. ಸ್ವತಂತ್ರವಾಗಿ ಸ್ಪರ್ಧಿಸಿದರೆ ವಿರೋಧಿಗಳು ಕಾಂಗ್ರೆಸ್‌ನಲ್ಲೇ ಉಳಿಯುತ್ತಾರೆ. ತ್ರಿಕೋನ ಸ್ಪರ್ಧೆ ಉಂಟಾಗಿ ಜಯ ಸುಲಭವಾಗುತ್ತದೆ ಎಂಬುದು ಲೆಕ್ಕಾಚಾರ.

ವಿಧಾನಸಭೆ ಚುನಾವಣೆಗಳು ಘೋಷಣೆಯಾಗಿದ್ದು ತಾಲ್ಲೂಕಿನ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ರಾಜಕೀಯ ಚದುರಂಗದ ಆಟ ಪ್ರಾರಂಭವಾಗಿದೆ. ಕ್ಷೇತ್ರದ ಇತಿಹಾಸವನ್ನು ಅವಲೋಕಿಸಿದರೆ ಇಲ್ಲಿ ಪಕ್ಷಗಳಿಗಿಂತ ವ್ಯಕ್ತಿ ಪ್ರಾಬಲ್ಯ ರಾಜಕೀಯವೇ ಪ್ರಧಾನವಾಗಿರುವುದು ಕಂಡು ಬರುತ್ತದೆ. ಇತಿಹಾಸದ ಮೇಲೆ ಕಣ್ಣಾಡಿಸಿದರೆ ಮೊದಲಿನಿಂದಲೂ ಎರಡು ಕುಟುಂಬಗಳ ನಡುವೆಯೇ ರಾಜಕೀಯವಿದೆ. ಟಿ.ಕೆ.ಗಂಗಿರೆಡ್ಡಿ ಮತ್ತು ಆಂಜನೇಯರೆಡಿ,್ಡ ನಂತರ ಚೌಡರೆಡ್ಡಿ ಮತ್ತು ಕೆ.ಎಂ.ಕೃಷ್ಣಾರೆಡ್ಡಿ ಹಾಗೂ ಕಳೆದ 2 ವಿಧಾನಸಭಾ ಚುನಾವಣೆಗಳಲ್ಲಿ ಡಾ.ಎಂ.ಸಿ.ಸುಧಾಕರ್ ಮತ್ತು ಕೆ.ಎಂ.ಕೃಷ್ಣಾರೆಡ್ಡಿ ಪ್ರತಿಸ್ಪರ್ಧಿಗಳು. ಇಲ್ಲಿ ಈ ಎರಡು ಕುಟುಂಬಗಳ ರಾಜಕೀಯವನ್ನು ಕೊನೆಗಾಣಿಸಿ ಬೇರೆ ಅವರನ್ನು ಅಧಿಕಾರಕ್ಕೆ ತರಬೇಕೆಂದು  ಸಾಕಷ್ಟು ರಾಜಕೀಯ ತಂತ್ರಗಳನ್ನು ಹೆಣೆದರೂ ಯಶಸ್ವಿಯಾಗಿಲ್ಲ.

ಆಂಜನೇಯರೆಡ್ಡಿ ಕುಟುಂಬದವರು ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದಾಗ ಕಾಂಗ್ರೆಸ್‌ನವರೆಲ್ಲ ಅವರ ಹಿಂದೆ ಇದ್ದು ಜಯಶೀಲರನ್ನಾಗಿ ಮಾಡಿದ್ದರು. ಕೆ.ಎಂ.ಕೃಷ್ಣಾರೆಡ್ಡಿ ಸಹ ಕಾಂಗ್ರೆಸ್ ಮತ್ತು ಬಿಜೆಪಿಗೆ ಸೇರಿದ್ದಾಗ ಅವರ ಬೆಂಬಲಿಗರೆಲ್ಲ ಅವರನ್ನು ಹಿಂಬಾಲಿಸಿದ್ದರು. ಎರಡು ಕುಟುಂಬಗಳನ್ನು ಹೊರತುಪಡಿಸಿ ಬೇರೆಯವರು ಠೇವಣಿ ಉಳಿಸಿಕೊಳ್ಳಲು ಹೆಣಗಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.