ADVERTISEMENT

ಅಲ್ಪಸಂಖ್ಯಾತರ ಪ್ರಗತಿ ಹಿನ್ನಡೆ: ಟೀಕೆ

​ಪ್ರಜಾವಾಣಿ ವಾರ್ತೆ
Published 18 ಮೇ 2012, 6:30 IST
Last Updated 18 ಮೇ 2012, 6:30 IST

ಬಾಗೇಪಲ್ಲಿ: ದೇಶದ ಅಲ್ಪಸಂಖ್ಯಾತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲಾದ ಯೋಜನೆಗಳು ವಿಫಲವಾಗಿವೆ. ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಟೀಕಿಸಿದರು.

ಪಟ್ಟಣದಲ್ಲಿ ಗುರುವಾರ ಮುಸ್ಲಿಂ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕುಗಳ ಸಮಾವೇಶದಲ್ಲಿ ಮಾತನಾಡಿ, ಅಲ್ಪಸಂಖ್ಯಾತರ ಪ್ರಗತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳಿಗಿಂತ ಕಡಿಮೆ ಇದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿಯು ಅನೇಕ ಶಿಫಾರಸು ಮಾಡಿದರೂ ಅವುಗಳು ಜಾರಿಯಾಗದಿರುವುದು ದುರದೃಷ್ಟಕರ ಎಂದು ಹೇಳಿದರು.

ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಪ್ರಕಾರ ಮುಸ್ಲಿಂರು ಎಲ್ಲ ರಂಗದಲ್ಲಿ ಹಿಂದುಳಿದ್ದಾರೆ ಎಂದು ತಿಳಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶೇ.15 ರಷ್ಟು ಮೀಸಲಾತಿ ಕಲ್ಪಿಸಬೇಕು. ಬ್ಯಾಂಕ್ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಗಳಿಂದ ಮುಸ್ಲಿಂರಿಗೆ ಸ್ವಯಂ ಉದ್ಯೋಗಗಳಿಗೆ ನಿಧಿ ನೀಡಬೇಕು ಎಂದು ಸಲಹೆ ನೀಡಿದ್ದರೂ ಸಾಧ್ಯವಾಗಿಲ್ಲ ಎಂದು ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.

ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟ ಸಮಿತಿ ಸದಸ್ಯ ಅಮಾನುಲ್ಲಾಖಾನ್ ಮಾತನಾಡಿ, ಕೇಂದ್ರ ಸರ್ಕಾರವು ಆಯೋಗಗಳ ಶಿಫಾರಸುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಪಶ್ಚಿಮ ಬಂಗಾಳದಲ್ಲಿ ಮಾತ್ರ ರಂಗನಾಥ ಮಿಶ್ರ ಸಮಿತಿಯ ಶಿಫಾರಸು ಜಾರಿಗೊಂಡಿವೆ. ಕೂಡಲೇ ಎಲ್ಲ ರಾಜ್ಯಗಳಲ್ಲಿ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು. 

ಸಮಾವೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಹಮದ್ ಅಕ್ರಂ, ಮುಖಂಡರಾದ ಎಸ್.ಷಫೀವುಲ್ಲಾ, ಕೆ.ಹುಸೇನ್, ಸಿ.ಜಬೀವುಲ್ಲಾ, ಮೆಕಾನಿಕ್‌ಬಾಬು, ಬಿ.ಎಚ್.ವಲಿ, ಭಾಷ, ಅಬುಬಕರ್, ರಶೀದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.