ADVERTISEMENT

ಅ.19ಕ್ಕೆ ಅಕ್ಷರ ದಾಸೋಹ ನೌಕರರ ಧರಣಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:25 IST
Last Updated 13 ಅಕ್ಟೋಬರ್ 2012, 9:25 IST

ಚಿಕ್ಕಬಳ್ಳಾಪುರ: ಅಕ್ಷರ ದಾಸೋಹ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು, ಅಂಗನವಾಡಿ ನೌಕರರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಈಡೇರಿಕೆಗೆ ಆಗ್ರಹಿಸಿ ಅ.19ರಂದು ಚಿಕ್ಕಬಳ್ಳಾಪುರದಲ್ಲಿ ಮತ್ತು ಆಕ್ಟೋಬರ್ 20ರಂದು ಬೆಂಗಳೂರಿನಲ್ಲಿ ಧರಣಿ ನಡೆಸಲು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಸದಸ್ಯರು ತೀರ್ಮಾನಿಸಿದ್ದಾರೆ.

ಧರಣಿಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿದ ಸಂಘದ ಸದಸ್ಯರು, `ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರದ ಮೇಲೆ ಒತ್ತಡ ಹೇರಲಿದ್ದೇವೆ~ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, `ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದ್ದು, ಅಕ್ಷರ ದಾಸೋಹ ನೌಕರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಉದ್ಯೋಗ ಅಭದ್ರತೆಯಿಂದ ಅವರ ಜೀವನವು ಆತಂಕದಿಂದ ಕೂಡಿದೆ. ಅಂಗನವಾಡಿ ನೌಕರರಿಗೆ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಆಕ್ಟೋಬರ್ 19, 20ರಂದು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಹೋರಾಟ ನಡೆಸಲಿದ್ದೇವೆ~ ಎಂದರು.

`ಅಕ್ಷರದಾಸೋಹ ನೌಕರರನ್ನು ಕೆಲಸದಲ್ಲಿ ಉಳಿಸಿಕೊಳ್ಳಬೇಕು, ಸೇವಾ ನಿಯಮಾವಳಿ ರೂಪಿಸಬೇಕು, ಕನಿಷ್ಠ ಕೂಲಿಯನ್ನು ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 26 ಮತ್ತು 27ರಂದು ನವದೆಹಲಿಗೆ ಪಾರ್ಲಿಮೆಂಟ್ ಚಲೋ ಕೈಗೊಳ್ಳಲಿದ್ದೇವೆ~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.