ADVERTISEMENT

ಆದೇಶಕ್ಕೆ ಕಿಮ್ಮತ್ತಿಲ್ಲ, ‘ಬಾಧೆ’ಗೆ ಮರಗುವವರಿಲ್ಲ!

ಈರಪ್ಪ ಹಳಕಟ್ಟಿ
Published 27 ನವೆಂಬರ್ 2017, 6:52 IST
Last Updated 27 ನವೆಂಬರ್ 2017, 6:52 IST
ಬೀಗ ಹಾಕಿಕೊಂಡೇ ಇರುವ ನಗರಸಭೆ ಖಾಸಗಿ ಬಸ್‌ ನಿಲ್ದಾಣದ ಶೌಚಾಲಯ
ಬೀಗ ಹಾಕಿಕೊಂಡೇ ಇರುವ ನಗರಸಭೆ ಖಾಸಗಿ ಬಸ್‌ ನಿಲ್ದಾಣದ ಶೌಚಾಲಯ   

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ತಿಂಗಳ ಹಿಂದೆ ಉದ್ಘಾಟಿಸಿದ ನಗರಸಭೆಯ ಖಾಸಗಿ ಬಸ್‌ ನಿಲ್ದಾಣದಲ್ಲಿ ಈವರೆಗೆ ಶೌಚಾಲಯ ಬಾಗಿಲು ತೆರೆದಿಲ್ಲ. ಇದರಿಂದಾಗಿ ವರ್ಷಗಟ್ಟಲೇ ‘ಜಲಬಾಧೆ’ ತೀರಿಸಿಕೊಳ್ಳಲು ಪ್ರಯಾಣಿಕರು ಪಡುತ್ತಿರುವ ಬಾಧೆಗೆ ಮರಗುವವರು ಇಲ್ಲದಂತಾಗಿದೆ.

‘ಮುಖ್ಯಮಂತ್ರಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನಾ ನಿಧಿ’ಯ ₹ 8.33 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನಿಲ್ದಾಣದಲ್ಲಿ ಈವರೆಗೆ ಶೌಚಾಲಯ ಮಾತ್ರವಲ್ಲದೆ ಮಳಿಗೆಗಳೂ ಬಾಗಿಲು ತೆರೆದಿಲ್ಲ. ಇದರಿಂದಾಗಿ ನಗರಸಭೆಗೆ ಆದಾಯ ನಷ್ಟದ ಜತೆಗೆ ಪ್ರಯಾಣಿಕರಿಗೆ ತೀವ್ರ ತೊಂದರೆ ಮುಂದುವರಿದೇ ಇದೆ.

ನಗರಸಭೆ ಮತ್ತು ಹಳೆ ನಿಲ್ದಾಣದಲ್ಲಿದ್ದ ಮಳಿಗೆ ಬಾಡಿಗೆ ಪಡೆದಿದ್ದ ವರ್ತಕರ ನಡುವೆ ನಡೆದ ಮುಸುಕಿನ ಗುದ್ದಾಟ ಹೈಕೋರ್ಟ್‌ ಮೆಟ್ಟಿಲೇರಿದೆ. ಸದ್ಯ ನಿಲ್ದಾಣದಲ್ಲಿರುವ ಮಳಿಗೆಗಳನ್ನು ಹರಾಜು ಹಾಕದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ADVERTISEMENT

ಆದರೆ ಶೌಚಾಲಯ ಕಳೆದ 16 ತಿಂಗಳ ಅವಧಿಯಲ್ಲಿ ಎರಡು ಬಾರಿ ಹರಾಜಾಗಿದೆ.ಆದರೂ ಈವರೆಗೆ ಅದರ ಬೀಗ ತೆರೆದು ಸಾರ್ವಜನಿಕರ ಬಳಕೆಗೆ ಕೊಟ್ಟಿಲ್ಲ.ಇದರಿಂದಾಗಿ ನಿಲ್ದಾಣವೇ ಬಯಲು ಶೌಚಾಲಯವಾಗಿ ಮಾರ್ಪಟ್ಟು, ಗಬ್ಬೆದ್ದು ನಾರುತ್ತಿದೆ. ಇದನ್ನು ತಡೆಗಟ್ಟಲು ನಗರಸಭೆ ತಾತ್ಕಾಲಿಕವಾಗಿ ತಂತಿಯ ತಡೆಬೇಲಿ ಹಾಕಿದೆಯಾದರೂ ಬಾಧೆ ತಡೆಯದವರು ನಿಲ್ದಾಣದ ಮೂಲೆ, ಮೂಲೆಗಳನ್ನು ‘ಗಲೀಜು’ ಮಾಡುವುದು ನಿಲ್ಲಿಸಿಲ್ಲ.

ಮಾರ್ಚ್‌ 13 ರಂದು ನಡೆದ ನಿಲ್ದಾಣದ ಶೌಚಾಲಯ ಹರಾಜಿನಲ್ಲಿ ಎಚ್‌.ವಿ .ಶ್ರೀನಿವಾಸ್ ಎಂಬುವರು ₹ 6.6 ಲಕ್ಷಕ್ಕೆ ಶೌಚಾಲಯದ ವಾರ್ಷಿಕ ಗುತ್ತಿಗೆ ಪಡೆದುಕೊಂಡಿದ್ದರು. ಬಳಿಕ ಅವರು ಹರಾಜಿನ ಠೇವಣಿಯ ಮೊತ್ತವನ್ನು ಪಾವತಿಸಲಿಲ್ಲ. ಹೀಗಾಗಿ ಹರಾಜಿಗೂ ಮುನ್ನ ಅವರು ಪಾವತಿಸಿದ್ದ ₹ 50 ಸಾವಿರ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡ ನಗರಸಭೆ ಆಯುಕ್ತರು ಶೌಚಾಲಯದ ಮರು ಹರಾಜಿ ಮಾಡಿದ್ದರು.

ಜುಲೈ 13 ರಂದು ಎರಡನೇ ಬಾರಿಗೆ ನಡೆದ ಹರಾಜಿನಲ್ಲಿ ಅರುಣ್‌ ಕುಮಾರ್ ಎಂಬುವರು ₹ 5.8 ಲಕ್ಷಕ್ಕೆ ಶೌಚಾಲಯದ ವಾರ್ಷಿಕ ಗುತ್ತಿಗೆ ತಮ್ಮದಾಗಿಸಿಕೊಂಡರು. ಈ ಹರಾಜು ಪ್ರಕ್ರಿಯೆ ಮುಗಿದು ನಾಲ್ಕೂವರೆ ತಿಂಗಳು ಕಳೆದರೂ ಈವರೆಗೆ ಶೌಚಾಲಯ ಬಾಗಿಲು ತೆರೆಯಲು ನಗರಸಭೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ.

ಬಾಗಿಲು ತೆರೆಯದ ಶೌಚಾಲಯ ಸೃಷ್ಟಿಸಿದ ಸಮಸ್ಯೆಗಳ ವಿಚಾರ ನಗರಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಿಂದ ಹಿಡಿದು ದೊಡ್ಡ ದೊಡ್ಡ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜನಪ್ರತಿನಿಧಿಗಳು, ಸಚಿವರ ಗಮನ ಸೆಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರು ಈ ನಿಲ್ದಾಣಕ್ಕೆ ಭೇಟಿ ನೀಡಿದಾಗ ಇಲ್ಲಿರುವ ಶೌಚಾಲಯಕ್ಕೆ ಹಾಕಿರುವ ಬೀಗವನ್ನು ತೆಗೆದು, ಸಾರ್ವಜನಿಕ ಉಪಯೋಗಕ್ಕೆ ಮುಕ್ತಗೊಳಿಸುವಂತೆ ಸೂಚಿಸಿದ್ದರು. ಅವರ ಮುಂದೆ ಶೌಚಾಲಯ ಬಾಗಿಲು ತೆಗೆದಂತೆ ಮಾಡಿದವರು ಜಿಲ್ಲಾಧಿಕಾರಿ ಅತ್ತ ಹೋಗುತ್ತಿದ್ದಂತೆ ಮತ್ತೆ ಬೀಗ ಹಾಕಿದ್ದರೆ. ಈವರೆಗೆ ತೆರೆದಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ಶಾಸಕ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರ ಎದುರು ಈ ವಿಚಾರ ಪದೇ ಪದೇ ಪ್ರಸ್ತಾಪವಾಗಿದೆ. ಆದರೂ ಪ್ರಯಾಣಿಕರ ಬಾಧೆಗೆ ಕೊನೆ ಇಲ್ಲದಂತಾಗಿದೆ. ನಗರಸಭೆಯ ಅಧಿಕಾರಿಗಳು ಮಾತ್ರ ನಿಲ್ದಾಣ ಉದ್ಘಾಟನೆಗೊಂಡ ದಿನದಿಂದಲೂ ‘ಶೀಘ್ರದಲ್ಲಿಯೇ ಶೌಚಾಲಯ ತೆರೆಯುತ್ತೇವೆ’ ಎನ್ನುವ ಸಿದ್ಧ ಉತ್ತರ ಹೇಳುತ್ತಲೇ 16 ತಿಂಗಳು ದೂಡಿದ್ದಾರೆ.

ಈ ಬಗ್ಗೆ ನಗರಸಭೆ ಆಯುಕ್ತ ಉಮಾಕಾಂತ್‌ ಅವರನ್ನು ವಿಚಾರಿಸಿದರೆ, ‘ಈಗಾಗಲೇ ಶೌಚಾಲಯ ಹರಾಜು ಹಾಕಲಾಗಿದೆ. ಶೌಚಾಲಯದಲ್ಲಿ ಸ್ವಲ್ಪ ರಿಪೇರಿ ಕೆಲಸ ಬಾಕಿ ಇದ್ದ ಕಾರಣಕ್ಕೆ ಬೀಗ ತೆರೆದಿರಲಿಲ್ಲ. ಎರಡ್ಮೂರು ದಿನಗಳಲ್ಲಿ ಶೌಚಾಲಯ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ’ ಎಂದು ಹೇಳಿದರು.

ವಾಹನ ಮರೆಯಲ್ಲಿ ಮೂತ್ರ ವಿಸರ್ಜನೆ
‘ಶೌಚಾಲಯ ಬೀಗ ಹಾಕಿದ ಕಾರಣ ನಿಲ್ದಾಣದಲ್ಲಿರುವ ಆಟೊ ಚಾಲಕರು ಮೂತ್ರ ವಿಸರ್ಜಿಸಲು ಸಮೀಪದ ಬಾರ್‌ಗಳಿಗೆ ಹೋಗುತ್ತಿದ್ದಾರೆ. ಇನ್ನೂ ರಾತ್ರಿ ವೇಳೆ ತಿರುಪತಿ ಸೇರಿದಂತೆ ದೂರದ ಪ್ರಯಾಣದಲ್ಲಿ ಬರುವ ಮಹಿಳೆಯರು ಶೌಚಾಲಯಕ್ಕಾಗಿ ಚಟಪಡಿಸುತ್ತಲೇ ಪುರುಷರ ಕಣ್ತಪ್ಪಿಸಿ ನಿಲುಗಡೆ ಮಾಡಿದ ವಾಹನಗಳ ಮರೆಯಲ್ಲಿ ತಮ್ಮ ಜಲಬಾಧೆ ತೀರಿಸಿಕೊಳ್ಳುವ ಸ್ಥಿತಿ ಬಂದಿದೆ’ ಎಂದು ಆಟೊ ಚಾಲಕ ಬಸವರಾಜ ಬೇಸರ ವ್ಯಕ್ತಪಡಿಸಿದರು.

* * 

ಹೆಣ್ಣು ಮಕ್ಕಳ ಘನತೆಯ ಅರಿವಿಲ್ಲದ, ತಮ್ಮ ಆತ್ಮಸಾಕ್ಷಿಗೂ ನಾಚಿಕೆಪಟ್ಟುಕೊಳ್ಳದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಈ ನಿರ್ಲಕ್ಷ್ಯ ವ್ಯವಸ್ಥೆ ಬಗ್ಗೆ ಜಿಗುಪ್ಸೆ ಮೂಡಿಸುತ್ತಿದೆ
ಅರವಿಂದ್  ಪ್ರಶಾಂತ್ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.