ADVERTISEMENT

ಆಮೆಗತಿ ಕಾಮಗಾರಿಗೆ ಹೈರಾಣಾದ ಜನರು

ಮಂಚನಬಲೆ ಬಳಿ ದಿಬ್ಬೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ನನೆಗುದಿಗೆ ಬಿದ್ದ ದೊಡ್ಡ ಚರಂಡಿ ಮೇಲೆ ಹೊಸ ಹೊದಿಕೆ ಹಾಕುವ ಕೆಲಸ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 8:52 IST
Last Updated 29 ಮಾರ್ಚ್ 2018, 8:52 IST
ಮಂಚನಬಲೆಯ ಮುಖ್ಯರಸ್ತೆಯಲ್ಲಿರುವ ಕಾಳಿಕಾಂಭ ದೇವಾಲಯದ ಬಳಿ ದಿಬ್ಬೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಕಳೆದ 24 ದಿನಗಳಲ್ಲಿ ನಡೆದ ಕಾಮಗಾರಿ ಇದು
ಮಂಚನಬಲೆಯ ಮುಖ್ಯರಸ್ತೆಯಲ್ಲಿರುವ ಕಾಳಿಕಾಂಭ ದೇವಾಲಯದ ಬಳಿ ದಿಬ್ಬೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಕಳೆದ 24 ದಿನಗಳಲ್ಲಿ ನಡೆದ ಕಾಮಗಾರಿ ಇದು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮಂಚನಬಲೆಯ ಮುಖ್ಯರಸ್ತೆಯ ಕಾಳಿಕಾಂಬ ದೇವಾಲಯದ ಬಳಿ ದಿಬ್ಬೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿರುವ ದೊಡ್ಡ ಚರಂಡಿ ಮೇಲೆ ಹೊಸ ಹೊದಿಕೆ ಹಾಕುವ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

24 ದಿನಗಳ ಹಿಂದೆ ಆರಂಭಗೊಂಡ ಕಾಮಗಾರಿ ಕುಂಟುತ್ತಾ ಸಾಗಿದೆ. ಇದರಿಂದ ಜನರು ನಗರಕ್ಕೆ ಬರಲು, ನಗರದಿಂದ ಗ್ರಾಮಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ನಿತ್ಯ ನೂರಾರು ವಾಹನಗಳು, ಜನರು ಸಂಚರಿಸುವ ಈ ಮಾರ್ಗದಲ್ಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕಾದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಗಂಗರೇಕಾಲುವೆ, ದಿಬ್ಬೂರು, ಅಂಗರೇಖನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಜನರು ನಿತ್ಯ ಸಮಸ್ಯೆ ಎದುರಿಸಬೇಕಾದ ಸನ್ನಿವೇಶ ಉಂಟಾಗಿದೆ.

ADVERTISEMENT

‘ಲೋಕೋಪಯೋಗಿ ಅಧಿಕಾರಿಗಳು, ಗುತ್ತಿಗೆದಾರರು ಮನಸು ಮಾಡಿದ್ದರೆ ಈ ಕಾಮಗಾರಿ ವಾರದೊಳಗೆ ಮುಗಿಸಬಹುದಿತ್ತು. ಆದರೆ ಅವರ ನಿರ್ಲಕ್ಷ್ಯದಿಂದಾಗಿ ಮುಖ್ಯರಸ್ತೆಯಲ್ಲಿ ಸಂಚರಿಸಬೇಕಾದ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಸದ್ಯ ವಾಹನಗಳು ಕಾಮಗಾರಿ ಸ್ಥಳದವರೆಗೆ ಬಂದು ದಾರಿ ಇಲ್ಲದೆ ಹಿಂತಿರುಗಿ, ಮಂಚನಬೆಲೆ ರಸ್ತೆಯಿಂದ ಹಾದು ಹೋಗುವ ಸ್ಥಿತಿ ಉದ್ಭವವಾಗಿದೆ’ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಚಂದ್ರಶೇಖರ್‌ ಆರೋಪಿಸಿದರು.

‘ಈ ಕಾಮಗಾರಿ ಆರಂಭಗೊಂಡ ದಿನದಿಂದ ಈವರೆಗೆ ರಾತ್ರಿ ವೇಳೆಯಲ್ಲಿ ಐದಾರು ವಾಹನ ಸವಾರರು ಇಲ್ಲಿ ಅಪಘಾತಕ್ಕೆ ಈಡಾಗಿದ್ದಾರೆ. ಅರ್ಧಂಬರ್ಧ ಕಾಮಗಾರಿಯಿಂದಾಗಿ ಆಂಬುಲೆನ್ಸ್‌ಗಳು, ಅಗ್ನಿಶಾಮಕ ದಳದ ವಾಹನಗಳು, ಬಸ್‌, ಇತರೆ ವಾಹನಗಳ ಸವಾರರು ಮಂಚನಬೆಲೆ ಗ್ರಾಮಕ್ಕೆ ತೆರಳಿ ಮುಂದೆ ಸಾಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಇಷ್ಟಾದರೂ ಅಧಿಕಾರಿಗಳು, ಗುತ್ತಿಗೆದಾರರು ಕೆಲಸ ಚುರುಕುಗೊಳಿಸಲು ಮುಂದಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಮಗಾರಿ ನಡೆಯುತ್ತಿರುವ ದಾರಿಯಲ್ಲಿ ಪಾದಚಾರಿಗಳಿಗಾಗಲಿ, ಸವಾರರಿಗಾಗಲಿ ಸೂಚನೆ ನೀಡುವಂತಹ ನಾಮಫಲಕ ಅಳವಡಿಸಿಲ್ಲ. ಕಾಮಗಾರಿ ಸುತ್ತಲೂ ತಡೆ ಬೇಲಿ ನಿಲ್ಲಿಸಿಲ್ಲ. ಹೀಗಾಗಿ ಕಾಮಗಾರಿ ಸ್ಥಳದವರೆಗೆ ಬಂದು ಸವಾರರು ದಾರಿ ತೋಚದೆ ಅವರಿವರನ್ನು ಕೇಳಿ ನಗರದ ಕಡೆಗೆ ಹೋಗಬೇಕಾಗಿದೆ. ಈ ಭಾಗದಲ್ಲಿ ನಗರಕ್ಕೆ ತಲುಪಲು ಮಂಚನಬಲೆಯಿಂದ ಹೋಗಲು ಸಾಧ್ಯ. ಇದೀಗ ವಾಹನಗಳ ದಟ್ಟಣೆಯಿಂದ ಮಂಚನಬಲೆ ರಸ್ತೆಗಳೆಲ್ಲಾ ಆಧ್ವಾನಗೊಳ್ಳುತ್ತಿವೆ’ ಎಂದು ಹೇಳಿದರು.

‘ಕಾಮಗಾರಿ ವಿಳಂಬದಿಂದ ಮಂಚನಬಲೆಯಿಂದ ದಿಬ್ಬೂರು ಗ್ರಾಮಕ್ಕೆ ತೆರಳಲು ಜನರು ಹೈರಾಣಾಗುತ್ತಿದ್ದಾರೆ. ಚಿಕ್ಕಬಳ್ಳಾಪುರದ ಮಾರುಕಟ್ಟೆಗೆ ತರಕಾರಿ ತರುವ ಈ ಭಾಗದ ರೈತರು ಇದರಿಂದಾಗಿ ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ದೊಡ್ಡ ವಾಹನಗಳಂತೂ ಇಲ್ಲಿ ಹಿಂತಿರುಗಿ ಮಂಚನಬಲೆ ಮಾರ್ಗವಾಗಿ ಸಂಚರಿಸಲು ಭಾರಿ ತೊಂದರೆ ಆಗುತ್ತಿದೆ. ಸಂಬಂಧಪಟ್ಟವರನ್ನು ಕೇಳುವವರೇ ಇಲ್ಲದಂತಾಗಿದೆ’ ಎಂದು ಮಂಚನಬಲೆ ನಿವಾಸಿ ವೆಂಕಟೇಶ್‌ ಆರೋಪಿಸಿದರು.

ಹಲವು ದಿನಗಳಿಂದ ಗ್ರಾಮದಲ್ಲಿ ವಾಹನ ದಟ್ಟಣೆ ಶುರುವಾಗಿದೆ. ರಸ್ತೆಯಲ್ಲಿ ಬಿಡುವಿಲ್ಲದೆ ವಾಹನಗಳು ಸಂಚರಿಸುತ್ತಿರುವುದರಿಂದ ಮನೆಗಳಲ್ಲಿ ವಿಪರೀತ ಧೂಳು, ಜತೆಗೆ ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡಲು ಭಯವಾಗುತ್ತಿದೆ. ಬೇಗ ಕಾಮಗಾರಿ ಮುಗಿಸಬೇಕು ಎಂದು ಆಗ್ರಹಿಸಿದರು.

‘ದೊಡ್ಡ ಚರಂಡಿ ದುರಸ್ತಿಗೊಂಡು ಹಲವು ವರ್ಷಗಳೇ ಕಳೆದಿವೆ. ಈ ಕಾಮಗಾರಿ ಹಲವು ತಿಂಗಳ ಹಿಂದೆಯೇ ಆರಂಭವಾಗಬೇಕಿತ್ತು. ಇದೀಗ ದಿಢೀರ್ ತಿಂಗಳ ಹಿಂದೆ ಕೆಲಸ ಆರಂಭಿಸಿದ್ದಾರೆ. ಅದೂ ಇದೀಗ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ನನೆಗುದಿಗೆ ಬಿದ್ದಿದೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು’ ಎಂದು ಮಂಚನಬಲೆ ನಿವಾಸಿ ಮಂಜುನಾಥ್‌ ಒತ್ತಾಯಿಸಿದರು.

**

ಜಿಲ್ಲಾಡಳಿತದ ನಿಷ್ಕ್ರೀಯತೆಯಿಂದಾಗಿ ಅಧಿಕಾರಿಗಳಿಗಾಗಲಿ, ಗುತ್ತಿಗೆದಾರರಿಗಾಗಲಿ ಭಯವಿಲ್ಲದಂತಾಗಿದೆ. ಹೀಗಾದರೆ ಜನಸಾಮಾನ್ಯರ ಗೋಳು ಕೇಳುವವರು ಯಾರು – ವೆಂಕಟೇಶ್, ಮಂಚನಬಲೆ ನಿವಾಸಿ.

ಕೆಂಪೇಗೌಡ ಎನ್.ವೆಂಕಟೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.