ಚಿಂತಾಮಣಿ: ಭೂಮಿಯಲ್ಲಿ ಸಿಕ್ಕಿದ ಬಂಗಾರದ ನಾಣ್ಯಗಳೆಂದು ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಗುಂಪನ್ನು ಬೆನ್ನಟ್ಟಿದ ಪೊಲೀಸರು 6 ಜನರನ್ನು ಬಂಧಿಸಿ ಅವರಿಂದ ಒಂದು ಚೆಂಬು, ನಕಲಿ ನಾಣ್ಯ, ನಾಲ್ಕು ಮೊಬೈಲ್ ಟಾಟಾ ಸುಮೋ ವಾಹನ ವಶಪಡಿಸಿಕೊಂಡಿರುವ ಘಟನೆ ಚಿಂತಾಮಣಿ-ಮದನಪಲ್ಲಿ ರಸ್ತೆಯ ಮರಿನಾಯಕನಹಳ್ಳಿ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಕಡಪಾ ರಸ್ತೆಯಲ್ಲಿರುವ ಮರಿನಾಯಕನಹಳ್ಳಿ ಗೇಟ್ ಬಳಿ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಟಾಟಾ ಸುಮೋ ವಾಹನವನ್ನು ನಿಲ್ಲಿಕೊಂಡು ನಕಲಿ ಬಂಗಾರದ ನಾಣ್ಯಗಳನ್ನು ತೋರಿಸಿ ಜನರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್, ಕೆಂಚಾರ್ಲಹಳ್ಳಿ ಠಾಣೆಯ ಪಿಎಸ್‌ಐ ಕೃಷ್ಣಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಪೊಲೀಸರನ್ನು ಕಂಡ ತಕ್ಷಣ ಟಾಟಾ ಸುಮೋ ಹತ್ತಿ ಪರಾರಿಯಾಗಲು ಯತ್ನಿಸಿದರು. ಜಾಗೃತಗೊಂಡ ಪೊಲೀಸರು ವಾಹನವನ್ನು ಬೆನ್ನಟ್ಟಿ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದಾಗ ನಕಲಿ ನಾಣ್ಯಗಳನ್ನು ಬಂಗಾರದ ನಾಣ್ಯ ಎಂದು ನಂಬಿಸಿ ಮಾರಾಟ ಮಾಡುತ್ತಿರುವುದು ಬಹಿರಂಗವಾಗಿದೆ
ವಾಹನವನ್ನು ಶೋಧನೆ ಮಾಡಿದಾಗ ಸೀಟ್ ಕೆಳಗಡೆ ಒಂದು ಗಂಟು ಸಿಕ್ಕಿದೆ, ಬಿಚ್ಚಿ ನೋಡಿದಾಗ ಬಂಗಾರದಂತಿರುವ 154 ನಕಲಿ ನಾಣ್ಯಗಳು ಜತೆಯಲ್ಲಿ ಒಂದು ಹಳೆಯ ಹಿತ್ತಾಳೆಯ ಚೆಂಬು ದೊರೆತಿದೆ. ಚೆಂಬಿನ ಸುತ್ತಲೂ ಹತ್ತಿಯನ್ನು ಸುತ್ತಿ ಪ್ಲಾಸ್ಟಿಕ್ ಟೇಪ್ ಅಂಟಿಸಲಾಗಿತ್ತು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬಂಗಾರದ ನಕಲಿ ನಾಣ್ಯಗಳನ್ನು ಭೂಮಿಯಲ್ಲಿ ಸಿಕ್ಕಿದ ನಿಧಿ ಎಂದು ನಂಬಿಸಿ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳ ಪೈಕಿ ನಾಲ್ವರು ಪೊಲೀಸರಂತೆ ಖಾಕಿ ತೊಟ್ಟಿದ್ದರು. ಕೆಲವರು ಗಿರಾಕಿಗಳಿಗೆ ನಕಲಿ ನಾಣ್ಯಗಳನ್ನು ನೀಡಿ ಹಣ ಪಡೆಯುವುದು, ಆ ಸಮಯಕ್ಕೆ ಸರಿಯಾಗಿ ಪೊಲೀಸರಂತೆ ಖಾಕಿದಾರರು ಸ್ಥಳಕ್ಕೆ ತೆರಳಿದಾಗ ಗಿರಾಕಿಗಳು ಓಡಿಹೋಗುತ್ತಾರೆ ನಂತರ ಹಣವನ್ನು ಲಪಟಾಯಿಸುವುದು ತಮ್ಮ ಕೆಲಸ ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಆರೋಪಿಗಳಾದ ನಾಗರಾಜ(ಮುಳಬಾಗಲು ತಾಲ್ಲೂಕು), ಎಸ್.ರವೂಫ್ (ಮುಳಬಾಗಲು ಪಟ್ಟಣ), ಶಿವಣ್ಣ (ಮುಳಬಾಗಲು ಪಟ್ಟಣ), ವೆಂಕಟೇಶಪ್ಪ (ಶ್ರೀನಿವಾಸಪುರ ಪಟ್ಟಣ), ಎಂ. ಜಾನೀದ್(ಪಲಮನೇರು ತಾಲ್ಲೂಕು), ಶಂಕರರೆಡ್ಡಿ(ಪಲಮನೇರು ತಾಲ್ಲೂಕು) ಪೊಲೀಸರು ಬಂಧಿಸಿದ್ದಾರೆ. ಮುಳಬಾಗಲಿನ ಕೃಷ್ಣಪ್ಪ ಎಂಬ ಆರೋಪಿ ಪರಾರಿಯಾಗಿದ್ದಾನೆ.
ಕೇಮಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.