ADVERTISEMENT

ಆರ್ಥಿಕ ಭದ್ರತೆಗೆ ಹುಣಸೆ, ಜಂಬುನೇರಳೆ

ನೆಡುತೋಪು ಬೆಳೆಸುವ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 10:38 IST
Last Updated 18 ಜೂನ್ 2018, 10:38 IST
ಚಿಂತಾಮಣಿ ತಾಲ್ಲೂಕಿನ ಬೊಮ್ಮಲಾಟಪುರದ ತೊಗಲುಗೊಂಬೆ ಕಲಾವಿದರ ಹೊಲಗಳಲ್ಲಿ ಹಸಿರುಹೊನ್ನು ಬಳಗದಿಂದ ಭಾನುವಾರ ಗಿಡ ನೆಡಲಾಯಿತು
ಚಿಂತಾಮಣಿ ತಾಲ್ಲೂಕಿನ ಬೊಮ್ಮಲಾಟಪುರದ ತೊಗಲುಗೊಂಬೆ ಕಲಾವಿದರ ಹೊಲಗಳಲ್ಲಿ ಹಸಿರುಹೊನ್ನು ಬಳಗದಿಂದ ಭಾನುವಾರ ಗಿಡ ನೆಡಲಾಯಿತು   

ಚಿಂತಾಮಣಿ: ಬಹುವಾರ್ಷಿಕ ಸಸ್ಯಗಳು ಕುಟುಂಬ ನಿರ್ವಹಣೆಗೆ ಆರ್ಥಿಕ ಬಲ ನೀಡುತ್ತವೆ ಎಂದು ಹಸಿರುಹೊನ್ನು ಬಳಗದ ಕಾರ್ಯದರ್ಶಿ ಸ.ರಘುನಾಥ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೊಮ್ಮಲಾಟಪುರದಲ್ಲಿ ಹಸಿರು ಹೊನ್ನು ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ನೆಡುತೋಪು ಬೆಳೆಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಬೊಮ್ಮಲಾಟಪುರದ ತೊಗಲುಗೊಂಬೆ ಕಲಾವಿದರ ಬೀಳು ಬಿದ್ದ ಹೊಲಗಳಲ್ಲಿ ಹುಣಸೆ, ಜಂಬುನೇರಳೆ ಮರಗಳನ್ನು ಬೆಳೆಸುವುದರಿಂದ ಕಲಾವಿದರಿಗೆ ಆರ್ಥಿಕವಾಗಿ ನೆರವಾಗುತ್ತದೆ. ಕಲಾವಿದರು ಊರೂರು ಸುತ್ತುವುದರಿಂದ ವ್ಯವಸಾಯ ಮಾಡಲಾಗದೆ ಇರುವ ಅಲ್ಪ–ಸ್ವಲ್ಪ ಭೂಮಿ ಬರಡಾಗಿದೆ. ಇದರಲ್ಲಿ ನೆಡುತೋವು ಮಾಡುವ ಯೋಜನೆ ಕೈಗೊಂಡಿರುವುದಾಗಿ ತಿಳಿಸಿದರು.

ADVERTISEMENT

ಹುಣಸೆಮರ ಆರ್ಥಿಕವಾಗಿ ಸಹಾಯವಾಗುವ ಜತೆಗೆ ಔಷಧಿಯ ಗುಣವನ್ನು ಹೊಂದಿದೆ. ಇತ್ತೀಚೆಗೆ ಹುಣಸೆ ಬಳಕೆಗೆ ಬದಲಾಗಿ ರಾಸಾಯನಿಕಗಳಿಂದ ಬೆಳೆದ ಟೊಮೆಟೊ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಅಪಾಯಕಾರಿ. ಆರೋಗ್ಯವರ್ಧಕ ಹುಣಸೆ ಬಳಸುವುದು ಉತ್ತಮ ಎಂದು ಸೂಚಿಸಿದರು.

ಕವಿ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಮಾತನಾಡಿ, ಹಸಿರುಹೊನ್ನು ಬಳಗ 10 ವರ್ಷಗಳಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಸಿರು ನಿರ್ಮಾಣಕ್ಕಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಬೊಮ್ಮಲಾಟಪುರದ ತೊಗಲುಗೊಂಬೆ ಕಲಾವಿದರ ಭವಿಷ್ಯಕ್ಕಾಗಿ ಹುಣಸೆತೋಪು ಮಾಡುವ ಮಹತ್ಕಾರ್ಯಕ್ಕೆ ಕೈಹಾಕಿದೆ. ನೆಟ್ಟಿರುವ ಗಿಡಗಳನ್ನು ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಹಸಿರುಹೊನ್ನು ಬಳಗದ ಅಧ್ಯಕ್ಷ ರಾಜಾರೆಡ್ಡಿ ಮಾತನಾಡಿ, ಮೊದಲ ಹಂತದಲ್ಲಿ ತೊಗಲುಗೊಂಬೆ ಕಲಾವಿದರ 4 ಕುಟುಂಬಗಳಿಗಾಗಿ 500 ಹುಣಸೆ, 50 ಜಂಬುನೇರಳೆ ಗಿಡಗಳನ್ನು ನೆಟ್ಟಿದ್ದೇವೆ. ಭೂಮಿಯಲ್ಲಿ ತೇವಾಂಶ ಕಡಿಮೆ ಇರುವುದರಿಂದ ಮಳೆಯಾದ ನಂತರ ಉಳಿದ ಕಲಾವಿದರ ಜಮೀನುಗಳಲ್ಲೂ ಒಂದು ಸಾವಿರ ಹುಣಸೆ, 100 ಜಂಬುನೇರಳೆ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದರು.

ಕಲಾವಿದೆ ಕೀರ್ತಿ ಬಸಪ್ಪ ಲಗಳಿ, ತೊಗಲುಗೊಂಬೆ ಕಲಾವಿದ ಜಯರಾಂ, ಹಸಿರುಹೊನ್ನು ಬಳಗದ ಕುಮಾರ್‌, ವಿ.ಮಣಿಕಂಠ, ಪ್ರವೀಣ್‌, ವಿದ್ಯಾರ್ಥಿಗಳಾದ ಮಂಜುನಾಥ್‌, ಗಿರೀಶ್, ಮಾರುತಿ, ಗೋವರ್ಧನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.