ಬಾಗೇಪಲ್ಲಿ: ಪಟ್ಟಣದ ಅಂಬೇಡ್ಕರ್ ಪರಿಶಿಷ್ಟ ಪಂಗಡದ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಬೆಳಗಿನ ಉಪ ಹಾರ ಹುಳುಗಳಿಂದ ಕೂಡಿದೆ ಎಂದು ಆರೋಪಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಗಳು ಮಂಗಳವಾರ ಸಮಾಜ ಕಲ್ಯಾಣ ಇಲಾಖೆಗೆ ಬೀಗ ಹಾಕಿ ಪ್ರತಿಭಟಿಸಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಎದುರು ಸೇರಿದ್ದ ಪ್ರತಿಭಟನಾ ಕಾರರು ವಿದ್ಯಾರ್ಥಿ ನಿಲಯದಲ್ಲಿ ಸಮರ್ಪಕವಾಗಿ ಊಟ ವಿತರಿಸುತ್ತಿಲ್ಲ ಹಾಗೂ ಮೂಲಸೌಕರ್ಯ ಒದಗಿಸು ತ್ತಿಲ್ಲ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಬಿ.ವಿ.ವೆಂಕಟರವಣ ಮಾತನಾಡಿ, ಕಳೆದ 8 ತಿಂಗಳಿನಿಂದ ವಿದ್ಯಾರ್ಥಿ ನಿಲಯದಲ್ಲಿ ಸಮರ್ಪಕ ಆಹಾರ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಸಮಾಜ ಕಲ್ಯಾಣಾಧಿಕಾರಿಗೆ ಮನವಿ ಮಾಡಲಾಗಿತ್ತು.
ಈಚೆಗೆ ವಿದ್ಯಾರ್ಥಿಗಳಿಗೆ ಸಮರ್ಪಕ ಆಹಾರ ನೀಡುವಲ್ಲಿ ವಿಫಲರಾಗಿದ್ದಾರೆ. ಮಂಗಳವಾರ ಬೆಳಗಿನ ಆಹಾರದಲ್ಲಿ ಹುಳುಗಳು ಕಂಡುಬಂದಿವೆ. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರ ವಿರುದ್ಧ ಕೂಡಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ನಾರಾಯಣಸ್ವಾಮಿ ಪ್ರತಿಭಟನಾ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಆಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯ ಲಾಗುವುದು ಎಂದು ಭರವಸೆ ನೀಡಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಘಟನಾ ಸಂಚಾಲಕ ಎಂ.ವಿ. ಲಕ್ಷ್ಮೀನರಸಿಂಹಪ್ಪ, ಮುಖಂಡರಾದ ಹೊಸಹುಡ್ಯ ಗೋಪಿ, ರವಿಕುಮಾರ್, ನರಸಿಂಹಯ್ಯ, ಕೆ.ಸಿ.ರಮಣಪ್ಪ, ಹೋಬಳಿ ಸಂಚಾಲಕರಾದ ಕೋಟಪ್ಪ, ಜಿ.ನರಸಿಂಹಪ್ಪ, ವಿದ್ಯಾರ್ಥಿ ಮುಖಂಡ ರಾದ ಜಯಂತ್, ಮಹೇಶ, ರಮಣ, ಮೂರ್ತಿ, ನರೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.