ADVERTISEMENT

ಇನ್ನಾದರೂ ಸರ್ಕಾರದ ಧಾರಾಳತನ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 7:22 IST
Last Updated 18 ಡಿಸೆಂಬರ್ 2017, 7:22 IST

ಚಿಕ್ಕಬಳ್ಳಾಪುರ: ‘ಸರ್ಕಾರದ ಇಬ್ಬಗೆಯ ನೀತಿಯಿಂದ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳು ಹೆಚ್ಚುತ್ತಿವೆ. ಆದ್ದರಿಂದ ಇವತ್ತು ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಧಾರಾಳತನ ನಿಲ್ಲಿಸಬೇಕು’ ಎಂದು ಸಮ್ಮೇಳನಾಧ್ಯಕ್ಷ ಸಾ.ನ.ಲಕ್ಷ್ಮಣಗೌಡ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಎರಡನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಲಕ್ಷ್ಮಣಗೌಡ, ‘ಇವತ್ತು ಖಾಸಗಿ ಶಾಲೆಗಳ ಹಾವಳಿಯ ನಡುವೆ ಸರ್ಕಾರಿ ಶಾಲೆಗಳನ್ನು ಮತ್ತು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕನ್ನಡ ಮಾಧ್ಯಮದ ಬೋಧನೆ ಮತ್ತು ಶಿಕ್ಷಣ ಗುಣಮಟ್ಟದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕಾಗಿದೆ’ ಎಂದು ಹೇಳಿದರು.

‘ನವೆಂಬರ್‌ ಜ್ವರ ಎಂದು ರಾಜ್ಯೋತ್ಸವದ ಬಗೆಗೆ ಹೇಳುತ್ತೇವೆ. ಸಂಪ್ರದಾಯ ಹಾಗೂ ನಿಯಮಗಳ ಅನುಸಾರ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸಮ್ಮೇಳನಗಳು ನಡೆಯುತ್ತವೆ. ಆದರೆ ಅಲ್ಲಿಗೆ ಸುಮ್ಮನಾಗಬಾರದು. ಆಗಾಗ ಪರಸ್ಪರ ಚರ್ಚೆ, ಸಂವಾದ, ಕವಿಗೋಷ್ಠಿಗಳನ್ನು ಆಯೋಜಿಸಿ ಕನ್ನಡದ ಬಗ್ಗೆ ಉತ್ಸಾಹ ತುಂಬುವ, ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು’ ಎಂದು ತಿಳಿಸಿದರು.

ADVERTISEMENT

‘ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಆದರೆ ರಾಜ್ಯದಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವಂತಹ ದುಃಸ್ಥಿತಿ ಬಂದಿದೆ. ಇಂಥ ದುರಾವಸ್ಥೆಯನ್ನು ಸರ್ಕಾರ ಸರಿಪಡಿಸಬೇಕಾಗಿದೆ. ಪ್ರಾಥಮಿಕ ಹಂತದಿಂದ ಪ್ರೌಢ ಶಾಲೆ ಹಂತದವರೆಗೆ ಮಕ್ಕಳು ಮಾತೃಭಾಷಾ ಮಾಧ್ಯಮದಲ್ಲೇ ಕಲಿಯವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಚಿಂತನೆ, ನಡೆ ಸ್ವಾಗತಾರ್ಹವಾಗಿದೆ’ ಎಂದರು.

‘ಸಾಹಿತ್ಯ ಜೀವನದ ಪ್ರತಿಬಿಂಬ ಎಂಬುದು ಎಲ್ಲರೂ ಒಪ್ಪಿರುವ ವಿಚಾರ. ಸಮಾಜದ ಅಂಕು ಡೊಂಕುಗಳನ್ನು ಅನುಭವದ ಹೂರಣ, ಶಬ್ದ ಲಾಲಿತ್ಯದಿಂದ ಸಂಕ್ಷೀಪ್ತವಾಗಿ ಹಿಡಿದಿಡುವ ಕಲೆ ಚುಟುಕಗಳಿಗಿದೆ. ಚುಟುಕು ಎಂದರೆ ಚಿಕ್ಕದು. ಕಿರಿಯದರಲ್ಲಿ ಹಿರಿದನ್ನು ಕಾಣುವ, ಹತ್ತು ಮಾತುಗಳಲ್ಲಿ ಹೇಳುವುದನ್ನು ಒಂದು ಮಾತಿನಲ್ಲಿ ಹೇಳುವ ಶಕ್ತಿ ಈ ಸಾಹಿತ್ಯಕ್ಕಿದೆ’ ಎಂದು ಹೇಳಿದರು.

‘ಚುಟುಕು ಚಿಕ್ಕದಾದರೂ ಅದರ ಶಕ್ತಿ ಹಿರಿದು. ಲಘು ಹಾಸ್ಯದ ಚುಟುಕುಗಳು ಸಮಾಜವನ್ನು ತಿದ್ದುವ ಕೆಲಸವನ್ನು ಪರೋಕ್ಷವಾಗಿ ಮಾಡಬಲ್ಲವು. ಹಾಸ್ಯದ ಮೊನಚು, ವಿಡಂಬನೆ ಮತ್ತು ವ್ಯಂಗ್ಯವಿದ್ದರೂ ಬೇರೊಬ್ಬರನ್ನು ನೋಯಿಸುವ ಉದ್ದೇಶ ಚುಟುಕುಗಳಲ್ಲಿ ಇರುವುದಿಲ್ಲ. ಚುಟುಕುಗಳನ್ನು ಹಾಸ್ಯ ಲೇಪನದ ನಗೆಚಾಟಿಯ ರಸಬಿಂದುಗಳು’ ಎನ್ನಬಹುದು.

‘ಇವತ್ತು ನಾವೆಲ್ಲ ಭಾಷೆಯ ಮಹತ್ವವನ್ನು ಕಿರಿಯರಿಗೆ ತಿಳಿಸಬೇಕಿದೆ. ಕನ್ನಡ ರಾಜ್ಯದಲ್ಲಿ ಅನ್ನ ನೀಡುವ ಭಾಷೆಯಾಗಿ ಉಳಿಯಬೇಕು. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಚುಟುಕು ಸಾಹಿತ್ಯ ಕೃಷಿ ಹುಲುಸಾಗಿ ಬೆಳೆಯುತ್ತಿದೆ. ಅನೇಕ ಕವಿಗಳು ಚುಟುಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಜಿಲ್ಲೆಯ ಬರಹಗಾರರನ್ನು ಗುರುತಿಸಿ, ಬೆಳೆಸಿ ಉಳಿಸಬೇಕಾಗಿರುವುದು ಇಂತಹ ಸಮ್ಮೇಳನಗಳ ಗುರಿಯಾಗಿರಬೇಕು’ ಎಂದು ಪ್ರತಿಪಾದಿಸಿದರು.

* * 

ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಬೆಳೆಸುವುದು, ಜನಸಾಮಾನ್ಯರಲ್ಲಿ ಕನ್ನಡಾಭಿಮಾನ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.
ಸಾ.ನ.ಲಕ್ಷ್ಮಣಗೌಡ, ಸಮ್ಮೇಳನಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.