ADVERTISEMENT

ಇಬ್ಬರ ಜಗಳ ಮೂರನೆಯವನಿಗೆ ಲಾಭ

​ಪ್ರಜಾವಾಣಿ ವಾರ್ತೆ
Published 16 ಮೇ 2018, 10:58 IST
Last Updated 16 ಮೇ 2018, 10:58 IST

ಶಿಡ್ಲಘಟ್ಟ: ಈ ಕ್ಷೇತ್ರದ ಫಲಿತಾಂಶ ಜೆಡಿಎಸ್‌ ಪಾಳೆಯದ ಒಡಕು ಅವಲೋಕಿಸಿದವರ ನಿರೀಕ್ಷೆಯಂತೆ ಬಂದಿದೆ. ‘ಇಬ್ಬರ ಜಗಳ ಮೂರನೆಯವನಿಗೆ ಲಾಭ’ ಎಂಬ ಗಾದೆ ಇಲ್ಲಿ ಈ ಬಾರಿ ಅಕ್ಷರಶಃ ನಿಜವಾಗಿದೆ. ಹೀಗಾಗಿ ಈ ಕ್ಷೇತ್ರದ ‘ಚಂದ್ರಿಕೆ’ಯಲ್ಲಿ ಪುನಃ ಕಾಂಗ್ರೆಸ್ ಗೂಡು ಕಟ್ಟಿದೆ.

ಮೊದಲಿನಿಂದಲೂ ಕಾಂಗ್ರೆಸ್‌ಗೆ ನೆಲೆ ಒದಗಿಸುತ್ತ ಬಂದಿರುವ ಈ ಕ್ಷೇತ್ರದಲ್ಲಿ ಕಳೆದ ಕೆಲ ಚುನಾವಣೆಗಳಿಂದ ಇತ್ತೀಚೆಗೆ ಕಾಂಗ್ರೆಸ್, ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗುತ್ತ ಬಂದಿವೆ. ಈ ಕ್ಷೇತ್ರದ ರಾಜಕೀಯ ಮುತ್ಸದಿ, ಮಾಜಿ ಸಚಿವ ವಿ. ಮುನಿಯಪ್ಪ ಅವರು ತಮ್ಮ 9ನೇ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆದ್ದು ಬೀಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಜೆಡಿಎಸ್‌ನಿಂದ ಸ್ಪರ್ಧಿಸುವ ವಿಚಾರದಲ್ಲಿ ಶಾಸಕ ಎಂ.ರಾಜಣ್ಣ, ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ಅವರ ನಡುವೆ ತೀವ್ರ ಪೈಪೋಟಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಈ ಕ್ಷೇತ್ರದಲ್ಲಿ ರವಿಕುಮಾರ್ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾದರು. ರಾಜಣ್ಣ ಅವರಿಗೆ ಪಕ್ಷೇತರರಾಗಿ ‘ಅಖಾಡ’ಕ್ಕಿಳಿದು ಗೆಳೆಯನಿಗೆ ಸೆಡ್ಡು ಹೊಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.

ADVERTISEMENT

ಒಂದೆಡೆ ಜೆಡಿಎಸ್ ಪಾಳೆಯದ ಒಡಕಿನ ಲಾಭವನ್ನು ಚತುರ ರಾಜಕಾರಣಿ ಮುನಿಯಪ್ಪ ಅವರು ತುಂಬಾ ಚೆನ್ನಾಗಿ ಬಳಸಿಕೊಂಡರು. ಇನ್ನೊಂದೆಡೆ ರಾಜಣ್ಣ ಅವರ ಬೆಂಬಲಿಗರು ಕೊನೆಯ ಕ್ಷಣದಲ್ಲಿ ರವಿಕುಮಾರ್ ಅವರ ಮೇಲಿನ ಸಿಟ್ಟಿಗೆ ‘ಶತ್ರುವಿನ ಶತ್ರು ಮಿತ್ರ’ ಎಂಬ ಮಾತಿನಂತೆ ಮುನಿಯಪ್ಪ ಅವರತ್ತ ಒಲುವು ತೋರಿದರು. ಹೀಗಾಗಿ ರವಿಕುಮಾರ್‌ ಸಾಕಷ್ಟು ಪೈಪೋಟಿ ನೀಡಿದರೂ ಗೆಲುವಿನ ದಡ ಸಿಗಲಿಲ್ಲ ಎಂಬ ಮಾತುಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಕಳೆದ (2013) ಚುನಾವಣೆಯಲ್ಲಿ ವಿ.ಮುನಿಯಪ್ಪ ಅವರ ವಿರುದ್ಧ 15,479 ಮತಗಳಿಂದ ಗೆದ್ದು ಬೀಗಿದ್ದ ಶಾಸಕ ಎಂ.ರಾಜಣ್ಣ ಅವರು ಈ ಬಾರಿ ಸ್ನೇಹಿತನೊಂದಿಗೆ ಸೆಡು ಸಾಧಿಸಲು ಹೋಗಿ 8,593 ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನಕ್ಕೆ ತಲುಪಿ ಠೇವಣಿ ಕಳೆದುಕೊಂಡಿದ್ದಾರೆ.

ಜಿಲ್ಲೆ ಐದು ಕ್ಷೇತ್ರಗಳ ಪೈಕಿ ರಾಜಣ್ಣ ಅವರನ್ನು ಹೊರತುಪಡಿಸಿದಂತೆ ಉಳಿದೆಲ್ಲ ಶಾಸಕರು ಈ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಗೆಲುವಿನ ಸಂತಸದಲ್ಲಿದ್ದರೆ ರಾಜಣ್ಣ ಅವರ ಮನೆಯಲ್ಲಿ ಸದ್ಯ ಮೌನ ಮನೆ ಮಾಡಿದೆ.

ಈ ಬಾರಿ ಈ ಕ್ಷೇತ್ರದಲ್ಲಿ ಮುನಿಯಪ್ಪ ಅವರಿಗೆ ಸ್ವಪಕ್ಷದ ಮುಖಂಡ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಅವರು ಸೆಡ್ಡು ಹೊಡೆದದ್ದು ವಿಶೇಷವಾಗಿತ್ತು. ಆದರೆ ಅವರಿಗೆ ಮುನಿಯಪ್ಪ ಅವರನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂತು.

ಮುನಿಯಪ್ಪ ಅವರು ತಮ್ಮ ವೈಯಕ್ತಿಕ ಸಾಧನೆಗಳಿಗಿಂತಲೂ ಪಕ್ಷದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ‘ಅಹಿಂದ’ ಮತಗಳನ್ನು ತಮ್ಮತ್ತ ಸುಲಭವಾಗಿ ಆಕರ್ಷಿಸಿದರು. ಈ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವಂತಾಗಿದೆ.

ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ

ವಿ.ಮುನಿಯಪ್ಪ (ಕಾಂಗ್ರೆಸ್) 76,240
ಬಿ.ಎನ್.ರವಿಕುಮಾರ್ (ಜೆಡಿಎಸ್) 66,531
ಆಂಜನಪ್ಪ (ಪಕ್ಷೇತರ) 10,986
ಎಂ.ರಾಜಣ್ಣ (ಪಕ್ಷೇತರ) 8,593
ಎಚ್‌.ಸುರೇಶ್ (ಬಿಜೆಪಿ) 3,596

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.