ADVERTISEMENT

ಉರಿಯದ ದೀಪಗಳು, ಬಗೆಹರಿಯದ ಸಮಸ್ಯೆ

ಹಳೇ ಎಸ್‌ಪಿ ಕಚೇರಿ ವೃತ್ತದಲ್ಲಿ ವರ್ಷಗಳಿಂದ ಕೆಟ್ಟು ನಿಂತ ಸಿಗ್ನಲ್‌ ವ್ಯವಸ್ಥೆ

ಈರಪ್ಪ ಹಳಕಟ್ಟಿ
Published 17 ಜುಲೈ 2017, 6:05 IST
Last Updated 17 ಜುಲೈ 2017, 6:05 IST
ಚಿಕ್ಕಬಳ್ಳಾಪುರದ ಹಳೇ ಎಸ್‌ಪಿ ಕಚೇರಿ ವೃತ್ತದಲ್ಲಿ ಅಳವಡಿಸಿರುವ ಸಂಚಾರ ಸಿಗ್ನಲ್‌ ಕೆಟ್ಟಿರುವ ಕಾರಣ ಸಂಚಾರ ವ್ಯವಸ್ಥೆ ಹದಗೆಟ್ಟು, ಪಾದಚಾರಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ
ಚಿಕ್ಕಬಳ್ಳಾಪುರದ ಹಳೇ ಎಸ್‌ಪಿ ಕಚೇರಿ ವೃತ್ತದಲ್ಲಿ ಅಳವಡಿಸಿರುವ ಸಂಚಾರ ಸಿಗ್ನಲ್‌ ಕೆಟ್ಟಿರುವ ಕಾರಣ ಸಂಚಾರ ವ್ಯವಸ್ಥೆ ಹದಗೆಟ್ಟು, ಪಾದಚಾರಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ   

ಚಿಕ್ಕಬಳ್ಳಾಪುರ: ನಗರದ ಹಳೇ ಎಸ್‌ಪಿ ಕಚೇರಿ ವೃತ್ತದಲ್ಲಿರುವ ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ವೃತ್ತದ ನಾಲ್ಕು ಬದಿ ಅಳವಡಿಸಿರುವ ಸಿಗ್ನಲ್‌ ಕಂಬಗಳಲ್ಲಿ ದೀಪಗಳು ಉರಿಯದೆ ಸಂಚಾರ ದಟ್ಟಣೆ ಸಮಸ್ಯೆ ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಲೇ ಇದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಎಂ.ಜಿ.ರಸ್ತೆಯ ಮುಖ್ಯ ವೃತ್ತದಲ್ಲಿ ಅಳವಡಿಸಿರುವ ಸಿಗ್ನಲ್‌ ಕಂಬಗಳು ‘ಲೆಕ್ಕಕ್ಕುಂಟು, ಕೆಲಸಕ್ಕಿಲ್ಲ’ ಎನ್ನುವಂತಾಗಿವೆ. ಇಲ್ಲಿನ ಕಂಬಗಳಲ್ಲಿ ದೀಪಗಳು ಹೊತ್ತಿ ಉರಿದು ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ವರ್ಷಗಳೇ ಕಳೆದಿವೆ.

ಗೌರಿಬಿದನೂರು ಕಡೆ ಸಾಗುವ ಈ ಮಾರ್ಗದಲ್ಲಿ ನಿತ್ಯ ತರಕಾರಿ, ಹೂವು ಮಾರುಕಟ್ಟೆಗಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ಸದಾ ವಾಹನ ಮತ್ತು ಜನದಟ್ಟಣೆಯಿಂದ ಕೂಡಿರುವ ರಸ್ತೆಯಲ್ಲಿಯೇ ನೆಪ ಮಾತ್ರಕ್ಕೆ ಸಿಗ್ನಲ್‌ ಕಂಬಗಳನ್ನು ನೆಟ್ಟು ಕೈತೊಳೆದುಕೊಂಡಿರುವ ಸಂಚಾರ ಪೊಲೀಸರು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಸಾರ್ವಜನಿಕರಿಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

‘ನಾನು ಆಗಾಗ ಮಾರುಕಟ್ಟೆಗೆ ತರಕಾರಿ, ಹೂವು ತೆಗೆದುಕೊಂಡು ಮಾರುಕಟ್ಟೆಗೆ ಬರುವಾಗಲೆಲ್ಲ ಇಲ್ಲಿನ ಸಂಚಾರ ಸಮಸ್ಯೆ ಗಮನಿಸುತ್ತಲೇ ಇದ್ದೇನೆ. ಒಂದೆಡೆ ಸಂಚಾರ ಪೊಲೀಸರು ಸರಿಯಾಗಿ ವೃತ್ತಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ, ಇನ್ನೊಂದೆಡೆ ಸಿಗ್ನಲ್ ದೀಪಗಳು ಉರಿಯುವುದಿಲ್ಲ. ಸವಾರರು ಮಾತ್ರ ಮನಸೋಇಚ್ಛೆ ಸಂಚರಿಸಿ ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ’ ಎನ್ನುತ್ತಾರೆ ಅಗಲಗುರ್ಕಿ ರೈತ ಮುನಿರಾಜು.

'ಶಿಡ್ಲಘಟ್ಟ ವೃತ್ತದಿಂದ ಎಸ್‌ಪಿ ಕಚೇರಿ ವೃತ್ತದವರೆಗೆ ಏಕಮುಖ ಸಂಚಾರ ವ್ಯವಸ್ಥೆ ಇದೆ. ಆದರೆ ಇದು ಗೌರಿಬಿದನೂರು ಕಡೆಯಿಂದ ನಗರಕ್ಕೆ ಆಗಮಿಸುವ ನಗರಕ್ಕೆ ಅಪರಿಚಿತರಾದ ಸವಾರರಿಗೆ ತಿಳಿಯುವುದಿಲ್ಲ. ಇನ್ನು ಸವಾರರಿಗೆ ಸಿಗ್ನಲ್‌ ದೀಪಗಳು ದಾರಿ ತೋರಿಸುವುದಿಲ್ಲ. ಹೀಗಾಗಿ ಅನೇಕ ಬಾರಿ ಸವಾರರು ಏಕಮುಖ ಸಂಚಾರ ರಸ್ತೆಯಲ್ಲಿಯೇ ವಿರುದ್ಧ ದಿಕ್ಕಿನಲ್ಲಿ ಸಾಗಿ ತೊಂದರೆ ಅನುಭವಿಸಿದ ಉದಾಹರಣೆಗಳಿವೆ’ ಎಂದು ಹೇಳಿದರು.

‘ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಇಲ್ಲಿ ಸಿಗ್ನಲ್‌ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಅದು ಸರಿಯಾಗಿ ಕಾರ್ಯನಿರ್ವಹಿಸದೆ ಕಂಬಗಳು ತುಕ್ಕು ಹಿಡಿಯುತ್ತಿವೆ. ಪಾದಚಾರಿಗಳು, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಮಾತ್ರ ಇಂದಿಗೂ ಬದಲಾಗಿಲ್ಲ. ಹೀಗಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಇಲ್ಲಿ ಸಿಗ್ನಲ್‌ ದೀಪಗಳನ್ನು ಅಳವಡಿಸಿದರೋ ತಿಳಿಯುತ್ತಿಲ್ಲ’ ಎಂದು ಗಂಗಮ್ಮನ ಗುಡಿ ರಸ್ತೆ ನಿವಾಸಿ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

‘ಸಿಗ್ನಲ್ ದೀಪಗಳು ಉರಿಯದ ಕಾರಣ ಈ ವೃತ್ತದಲ್ಲಿ ಬೈಕ್‌, ಆಟೊ ಸವಾರರು ಬೇಕಾಬಿಟ್ಟಿಯಾಗಿ ಸಂಚರಿಸುತ್ತಾರೆ. ಇದರಿಂದಾಗಿ ಹಿರಿಯ ನಾಗರಿಕರು, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು, ಶಾಲಾ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಚಿಕ್ಕ ಮಕ್ಕಳು ಆಗಾಗ ಇಲ್ಲಿ ಕಕ್ಕಾಬಿಕ್ಕಿಯಾಗುವ ದೃಶ್ಯಗಳು ಗೋಚರಿಸುತ್ತಲೇ ಇರುತ್ತವೆ. ಸುದ್ದಿಯಾಗದ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಲೇ ಇರುತ್ತವೆ’ ಎನ್ನುತ್ತಾರೆ ಎಂ.ಜಿ.ರಸ್ತೆ ನಿವಾಸಿ ರಘುರಾಮ್.

‘ಸದ್ಯ ಇಲ್ಲಿನ ಸಂಚಾರ ವ್ಯವಸ್ಥೆಯನ್ನು ಪೊಲೀಸರು, ಗೃಹ ರಕ್ಷಕ ಸಿಬ್ಬಂದಿ ನಿಭಾಯಿಸಿದಂತೆ ಮಾಡುತ್ತಿದ್ದಾರೆ. ಅದು ಅಷ್ಟಾಗಿ ಸಮರ್ಪಕವಾಗಿ ನಡೆಯುತ್ತಿಲ್ಲ. ಸದಾ ಸಿಗ್ನಲ್‌ ದೀಪಗಳು ಉರಿಯುತ್ತಿದ್ದರೆ ಸವಾರರಲ್ಲಿ ಕೂಡ ಸಂಚಾರ ನಿಯಮಗಳ ಬಗ್ಗೆ ಅರಿವು ಜಾಗೃತವಾಗಿರುತ್ತದೆ. ಇಲ್ಲಿ ಜೀವಹಾನಿಯಾಗುವ ಮುನ್ನ ಸಂಚಾರ ಪೊಲೀಸರು ದೀಪಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕಿದೆ’ ಎಂದು ಆಗ್ರಹಿಸಿದರು.

‘ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ 10 ವರ್ಷವಾಯ್ತು. ಇಂದಿಗೂ ಸರಿಯಾಗಿ ಪಾದಚಾರಿ ಮಾರ್ಗವಿಲ್ಲ. ಇನ್ನೊಂದೆಡೆ ಸಿಗ್ನಲ್‌ ದೀಪಗಳು ಹೊತ್ತುವುದಿಲ್ಲ. ನಗರದಲ್ಲಿ ಪಾದಚಾರಿಗಳು ಪಾಪದವರಾಗುತ್ತಿದ್ದಾರೆ. ಶಾಸಕರು ಮಾತ್ರ ನೂರಾರು ಕೋಟಿ ಅನುದಾನ ತಂದಿರುವೆ, ನಗರವನ್ನು ಬೆಂಗಳೂರಿನ ಉಪ ನಗರ ಮಾಡುವೆ ಎಂದು ವೇದಿಕೆ ಮೇಲೆ ರೈಲು ಬಿಡುತ್ತಲೇ ಇದ್ದಾರೆ. ಸದ್ಯ ಅವರು ಇತ್ತ ಗಮನ ಹರಿಸಿದರೆ ಬಡಪಾಯಿ ಜನರಿಗೆ ಉಪಕಾರವಾಗುತ್ತದೆ’ ಎಂದು ಎಲೆಪೇಟೆ ನಿವಾಸಿ ಶ್ರೀನಿವಾಸ್ ತಿಳಿಸಿದರು.

**

ಎಸ್‌ಪಿ ಕಚೇರಿ ವೃತ್ತದಲ್ಲಿ ಸಿಗ್ನಲ್‌ ದೀಪ ಉರಿಯದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುತ್ತೇವೆ.
-ಶ್ರೀನಿವಾಸ್‌, ಸಂಚಾರ ಸಬ್‌ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.