ADVERTISEMENT

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಆವಿಷ್ಕಾರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 10:04 IST
Last Updated 15 ಜೂನ್ 2013, 10:04 IST

ಚಿಕ್ಕಬಳ್ಳಾಪುರ: ನಗರದ ಎಸ್‌ಜೆಸಿಐಟಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ವಿಜ್ಞಾನಿಗಳು ಮತ್ತು ತಂತ್ರಜ್ಞರ ಸ್ಥಾನ ಪಡೆದವರಂತೆ ಕಂಡು ಬಂದರು. `ವಿದ್ಯಾರ್ಥಿದೆಸೆಯಲ್ಲಿ ಕಲಿಯುತ್ತಿರುವಾಗಲೇ ಹೆಚ್ಚಿನ ಸಾಧನೆ ಮಾಡುವಲ್ಲಿ ನಾವು ಸಮರ್ಥರಿದ್ದೇವೆ. ನಮಗೆ ಅವಕಾಶ ಮತ್ತು ಪ್ರೋತ್ಸಾಹ ಬೇಕು' ಎಂದು ಅವರು ತಾವು ಕೈಗೊಂಡ ಪುಟ್ಟ ಪ್ರಯೋಗ ಮತ್ತು ಸಂಶೋಧನೆಗಳ ಮೂಲಕ ಸಾರಿ ಸಾರಿ ಹೇಳುತ್ತಿದ್ದರು.

ಕಾಲೇಜಿನಲ್ಲಿ ಅಂತಿಮ ವರ್ಷ ಪೂರೈಸಿ ಭವಿಷ್ಯದ ಹೊಸ ನಿರೀಕ್ಷೆಗಳನ್ನು ಹೊತ್ತಿರುವ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ತಾವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡಿರುವುದನ್ನು ಸಾದರಪಡಿಸಿದರು. ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆ ಅನುಸಾರವಾಗಿ ಅವರು ತಾವು ಕೈಗೊಂಡ ಪ್ರಯೋಗ, ಸಂಶೋಧನೆಗಳ ಬಗ್ಗೆ ವಿವರಣೆ ನೀಡಿದರು.

ಗಡಿ ಮತ್ತು ದುರ್ಗಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರ ಆರೋಗ್ಯ ಸ್ಥಿತಿಯನ್ನು ಅರಿಯುವ ಸಾಧನವೊಂದನ್ನು ವಿದ್ಯಾರ್ಥಿಗಳಾದ ಶಿವರಾಜ್, ಭಾನುಪ್ರತಾಪ್, ಶೋಭಾ ಮತ್ತು ಶ್ವೇತಾ ಸಿದ್ಧಪಡಿಸಿದ್ದರು. ಮೊಬೈಲ್‌ಫೋನ್ ಮತ್ತು ಸ್ಮಾರ್ಟ್ ಕಾರ್ಡ್ ಮೂಲಕ ಪ್ರಯಾಣದರ ಪಾವತಿಸಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಸಾಧನವನ್ನು ವಿದ್ಯಾರ್ಥಿನಿಯರಾದ ವೀಣಾ, ಕೌಸರಿ ಮತ್ತು ಅಭಿಲಾಷಾ ಸಿದ್ಧಪಡಿಸಿದರು.

ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ಇಡುವ ಸಾಧನವನ್ನು ವಿದ್ಯಾರ್ಥಿಗಳಾದ ಪ್ರಕಾಶ್ ಗೌರವ್, ನಿಖಿತಾ ಅಗರವಾಲ್, ಲಕ್ಷ್ಮಿ  ಮತ್ತು ಗೌತಮಿ ತಯಾರಿಸಿದ್ದರು. ಹಸ್ತದ ನೆರವಿನಿಂದ ರೋಬೋಟ್ ಕಾರ್ಯನಿರ್ವಹಿಸುವ ಸಾಧನವನ್ನು ವಿದ್ಯಾರ್ಥಿನಿಯರಾದ ಎಚ್.ಆರ್.ಪುಷ್ಪಲತಾ, ಎಸ್.ಸುನೀತಾ, ಬಿ.ನೇತ್ರಾವತಿ ಮತ್ತು ಜಿ.ಸಿ.ಲೀಲಾಂಬಿಕಾ ಸಿದ್ಧಪಡಿಸಿದ್ದರು.

ಕೆರೆಗಳಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸುವ ನೂತನ ಮಾದರಿಯ ಸಾಧನವನ್ನು ದೇವವ್ರತ್‌ಲಾಲ್ ಮತ್ತು ಸ್ನೇಹಿತರು ಸಿದ್ಧಪಡಿಸಿದ್ದರು. ಬೆಂಗಳೂರಿನ ಮಹಾರಾಣಿ ಕಾಲೇಜು ವೃತ್ತದಿಂದ ಹಡ್ಸನ್ ವೃತ್ತದವರೆಗೆ ಮೇಲುಸೇತುವೆ ನಿರ್ಮಿಸಿದರೆ, ವಾಹನ ದಟ್ಟಣೆ ತಗ್ಗಿಸಬಹುದು ಎಂಬ ಯೋಜನಾ ನಕ್ಷೆಯನ್ನು ವಿದ್ಯಾರ್ಥಿಗಳಾದ ಶರತ್‌ಬಾಬು, ಶ್ರೀಕಾಂತ್, ಮಮತಾ, ವಹೀದ್ ಖಾನ್ ಮತ್ತು ರಾಜೀವ್ ತಯಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.