ADVERTISEMENT

ಕಾಂಗ್ರೆಸ್ ಯಶಸ್ಸು ಗ್ರಾಮೀಣರನ್ನು ತಲುಪಲಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 7:30 IST
Last Updated 4 ಆಗಸ್ಟ್ 2012, 7:30 IST

ಬಾಗೇಪಲ್ಲಿ: ಬೂತ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಗ್ರಾಮೀಣ ಪ್ರದೇಶದ ಯುವಕರನ್ನು ಯುವ ಕಾಂಗ್ರೆಸ್‌ಗೆ ಸೆಳೆಯಲು ಕಾರ್ಯತಂತ್ರ ರೂಪಿಸಬೇಕು ಎಂದು ಶಾಸಕ ಎನ್.ಸಂಪಂಗಿ ಸಲಹೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್‌ಮಟ್ಟದ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸರ್ಕಾರದ ಆಂತರಿಕ ಜಗಳಗಳಿಂದ ಇನ್ನು ಕೆಲವೇ ತಿಂಗಳಲ್ಲಿ ವಿಧಾನ ಸಭೆ ಚುನಾವಣೆ ಎದುರಾಗುತ್ತದೆ. ಡಿನೋಟಿಫಿಕೇಷನ್, ಗಣಿ, ಬೇಲ್ ಡೀಲ್‌ನಂತಹ ಪ್ರಕರಣಗಳೇ ಬಿಜೆಪಿ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.

ಸ್ವಾರ್ಥ ಹಾಗೂ ಅಧಿಕಾರಕ್ಕಾಗಿ ಹೋರಾಟ ನಡೆಸುವ ಬಿಜೆಪಿ ಮುಖಂಡರು, ಕೃಷಿ, ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಮರೆತಿದ್ದಾರೆ. ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಬೇಕು. ಬೂತ್ ಮಟ್ಟದ ಚುನಾಯಿತ ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎನ್.ವಿ.ಕೃಷ್ಣಮಾಚಾರ್ ಮಾತನಾಡಿ, ದೇಶದಲ್ಲಿ ಜಾತಿ, ಧರ್ಮ ಹಾಗೂ ಉಪಜಾತಿಗಳ ನಡುವೆ ಉತ್ತಮ ಬಾಂಧವ್ಯ ಮೂಡಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ. ರಾಜಕೀಯ ನಾಯಕರ ಕಚ್ಚಾಟದಿಂದ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ನೀಡಲು ವಿಫಲರಾಗಿದ್ದಾರೆ.

ಮಹಾತ್ಮಗಾಂಧಿ, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್ ಇಂದಿನ ಯುವಶಕ್ತಿಗೆ ಪ್ರೇರೇಪಣೆ ಆಗಬೇಕು. ಸರ್ಕಾರಗಳು ರೂಪಿಸುವ ಯೋಜನೆ ಅರ್ಹರಿಗೆ ಸಿಗಬೇಕು ಎಂದರು.

ಬಾಗೇಪಲ್ಲಿ ವಿಧಾನಸಭೆ ವ್ಯಾಪ್ತಿಯ ಬೂತ್‌ಮಟ್ಟದ ಪದಾಧಿಕಾರಿಗಳು
ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಯುವಕಾಂಗ್ರೆಸ್ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್‌ನಾಯಕ್, ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಸದಸ್ಯ ಪ್ರೊ.ನಾರೇಮದ್ದೇಪಲ್ಲಿ ಎನ್.ವಿ.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅಮರಾವತಿ, ತರಬೇತಿ ಶಿಬಿರ ಸಂಯೋಜಕ ಅಡ್ಡಗಲ್ ಶ್ರೀಧರ್, ಯುವಕಾಂಗ್ರೆಸ್ ತಾಲ್ಲೂಕು ಸಮಿತಿ ಅಧ್ಯಕ್ಷ ಎಚ್.ಎಸ್.ನರೇಂದ್ರ, ಪ್ರಧಾನ ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ನಾರಾಯಣ, ಆನಂದ್, ಚಂದ್ರ, ನರೇಶ, ನಂಜುಂಡ, ಸುಭಾನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.