ADVERTISEMENT

ಕಾಲುವೆ ಆಪೋಶನ ತೆಗೆದುಕೊಂಡ ತ್ಯಾಜ್ಯ

ಅಸ್ತಿತ್ವ ಕಳೆದುಕೊಂಡ ಜಲಮೂಲದ ಜೀವಾಳ ಮಳೆ ನೀರು ಕಾಲುವೆ, ಭಾಷಣದಲ್ಲೇ ಪುನಶ್ಚೇತನ, ವಾಸ್ತವದಲ್ಲಿ ಅಧ್ವಾನ!

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 6:51 IST
Last Updated 16 ಏಪ್ರಿಲ್ 2018, 6:51 IST
ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿ ರಾಜಕಾಲುವೆ ಮಾರ್ಗದಲ್ಲಿ ತ್ಯಾಜ್ಯ ಸುರಿದಿರುವ ದೃಶ್ಯ
ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿ ರಾಜಕಾಲುವೆ ಮಾರ್ಗದಲ್ಲಿ ತ್ಯಾಜ್ಯ ಸುರಿದಿರುವ ದೃಶ್ಯ   

ಚಿಕ್ಕಬಳ್ಳಾಪುರ: ನಗರದ ಪ್ರಮುಖ ರಸ್ತೆಯಾದ ಬಿ.ಬಿ. ರಸ್ತೆಯ ಅಕ್ಕಪಕ್ಕದಲ್ಲಿ ದಿನೇ ದಿನೇ ಮಳೆ ನೀರು ಕಾಲುವೆಗಳ ಅಸ್ತಿತ್ವ ಕಳೆಯುವ ಕೆಲಸ ನಡೆಯುತ್ತಿದೆ. ಅನೇಕ ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆ ಸಿಬ್ಬಂದಿ ಇತ್ತ ಆಸಕ್ತಿ ತೋರುತ್ತಿಲ್ಲ.

ಕಂದವಾರ ಕೆರೆಯ ಎಡದಂಡೆ ತೂಬು ಸೇರಿದಂತೆ ಕೆರೆ ದಂಡೆಯ ಕೆಳಗಿನ ಪ್ರದೇಶದಲ್ಲಿ ಸಂಗ್ರಹವಾಗುವ ನೀರನ್ನು ಅಮಾನಿ ಗೋಪಾಲ ಕೃಷ್ಣ ಕೆರೆಗೆ ಹರಿಸುವ ಮುಖ್ಯ ಕಾಲುವೆಯ ಪಾಡು ಇದೀಗ ಬಣ್ಣಿಸಲಾರದಷ್ಟು ಅಧ್ವಾನಗೊಂಡಿದೆ.

ನ್ಯೂ ಹಾರಿಜನ್ ಶಾಲೆ ಸಮೀಪದ ಕಾಲುವೆಗೆ ನಿತ್ಯವೂ ರಾಶಿ ರಾಶಿ ತ್ಯಾಜ್ಯ, ಒಡೆದ ಮನೆಗಳ ಭಗ್ನಾವಶೇಷಗಳು ಬಂದು ಬೀಳುತ್ತಿವೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ನಗರಸಭೆ ಅಧಿಕಾರಿಗಳು ಇದೆಲ್ಲ ಕಂಡರೂ ಕಾಣದಂತೆ ವರ್ತಿಸುತ್ತಿರುವುದು ಪ್ರಜ್ಞಾವಂತ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಊರಲ್ಲಿ ಬಾ ಸುರಿದ ಮಳೆ ನೀರನ್ನು ವ್ಯವಸ್ಥಿತವಾಗಿ ಕೆರೆ, ಕುಂಟೆಗಳಿಗೆ ಸಾಗಿಸಬೇಕಾದ ಕಾಲುವೆಗಳಿಗೆ ಲೋಡುಗಟ್ಟಲೇ ತ್ಯಾಜ್ಯ ಸುರಿದು ಸಮಾಧಿ ಮಾಡಲಾಗುತ್ತಿದೆ. ಜಲಮೂಲಗಳ ಪುನಶ್ಚೇತನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಭಾಷಣ ಮಾಡಿಸುವ ನಗರಸಭೆ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತದ ಕಾರ್ಯವೈಖರಿ ಮಾತ್ರ, ‘ನಮ್ಮದು ಬರೀ ಭಾಷಣಕ್ಕೆ ಸೀಮಿತ ಕಾರ್ಯ’ ಎನ್ನುವಂತಿದೆ. ಅಧಿಕಾರಿಗಳ ಜಾಣ ಕುರುಡು ಪ್ರದರ್ಶಿನ ಎಂದಿನಂತೆ ಮುಂದುವರಿದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುವರು.

ಪ್ರತಿ ಮಳೆಗಾಲಕ್ಕೂ ಮುನ್ನ ನಗರ ಪ್ರದೇಶಗಳಲ್ಲಿ ಚರಂಡಿ, ಕಾಲುವೆಗಳ ಹೂಳು ತೆಗೆದು ಅವಘಡ ಎದುರಿಸಲು ಸನ್ನದ್ಧಗೊಳ್ಳಬೇಕಾದದ್ದು ನಗರ ಯೋಜನೆಯ ಜವಾಬ್ದಾರಿ. ಆದರೆ ಮುಂಗಾರು ಆರಂಭಗೊಂಡರೂ ನಗರದಲ್ಲಿ ಈ ಕೆಲಸ ನಡೆದಿಲ್ಲ. ಇದಕ್ಕೆ ಬದಲಾಗಿ ನಗರದ ಪ್ರಮುಖ ರಾಜಕಾಲುವೆಗಳನ್ನು ಮುಚ್ಚಿ ಹಾಕುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.

ಜಿಲ್ಲಾಡಳಿತ ಕೇಂದ್ರವಾದ ನಗರದಲ್ಲಿ ಪದೇ ಪದೇ ಸಭೆ, ಸಂವಾದ, ಚರ್ಚೆ, ಕಾರ್ಯಾಗಾರ, ಹೋರಾಟಗಳಲ್ಲಿ ಜಲಮೂಲಗಳ ಪುನಶ್ಚೇತನದ ಕಾರ್ಯಾಗಾರ ನಡೆಯುತ್ತಿವೆ. ಇಲ್ಲಿಯ ಭಾಷಣಗಳೆಲ್ಲ ಬರೀ ಕೇಳುವುದಕ್ಕೆ ಸೀಮಿತವಾಗಿವೆ. ಅವುಗಳ ಜೀವಾಳವಾದ ಕಾಲುವೆಗಳು ದಿನೇ ದಿನೇ ಅಸ್ತಿತ್ವ ಕಳೆದುಕೊಳ್ಳುತ್ತಿವೆ.

‘ಕೆರೆ, ಕುಂಟೆಗಳಿಗೆ ನೀರು ಹರಿಸುವ ಮೂಲಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವುದೇ ಒಂದು ದೊಡ್ಡ ಲಾಬಿ. ಈಗ ಕಾಲುವೆ ಮುಚ್ಚಿ ಹಾಕಿದರೆ ಮುಂದೊಂದು ದಿನ ಸುಲಭವಾಗಿ ಕೆರೆ ಜಾಗ ಒತ್ತುವರಿ ಮಾಡಿಕೊಳ್ಳಬಹುದು. ನಂತರ ಅದನ್ನು ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿ, ಕಬಳಿಸಲು ಅನುಕೂಲ. ಈ ಲೆಕ್ಕಾಚಾರ ಹಾಕಿಯೇ ಕೆಲವರು ವ್ಯವಸ್ಥಿತವಾಗಿ ಸಂಚು ನಡೆಸುತ್ತಿದ್ದಾರೆ. ಅಂತಹ ಪ್ರಭಾವಿಗಳು ನಗರದಲ್ಲಿ ಬೀಡು ಬಿಟ್ಟಿದ್ದಾರೆ’ ಎನ್ನುತ್ತಾರೆ ಕಂದವಾರ ಬಾಗಿಲು ನಿವಾಸಿ ಸತೀಶ್.

‘ಹಸಿರು ನ್ಯಾಯ ಪೀಠ, ಸುಪ್ರೀಂ ಕೋರ್ಟ್ ಕೆರೆಯ ಜಾಲ ರಕ್ಷಿಸುವಂತೆ ನಿರ್ದೇಶನ ನೀಡು ತ್ತಲೇ ಬಂದಿವೆ. ಕಾಲುವೆ ಅಲ್ಲದೆ ಅದರ ಸುತ್ತಲಿನ ಸಂರಕ್ಷಿತ ಪ್ರದೇಶವನ್ನೂ ಒತ್ತುವರಿಯಾಗದಂತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿವೆ. ಆದರೂ ಕಾಲವೆಗಳ ಒತ್ತುವರಿ ಕೆಲಸ ನಡೆಯುತ್ತಲೇ ಇದೆ. ಇದಕ್ಕೆ ಸ್ಥಳೀಯ ಸಂಸ್ಥೆಗಳೇ ನೇರ ಹೋಣೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್.

‘ಕೆರೆ, ಕುಂಟೆಗಳಿಗೆ ಮಳೆ ನೀರು ಸಾಗಿಸುವ ಕಾಲುವೆಗಳು ನಗರದ ರಕ್ತನಾಳಗಳಿದ್ದಂತೆ. ಅವು ಸ್ವಚ್ಛವಾಗಿದ್ದಷ್ಟು ಜಲಮೂಲಗಳ ಆರೋಗ್ಯ ಚೆನ್ನಾಗಿರುತ್ತದೆ. ಅವೇ ಅಮೂಲ್ಯ ಆಸ್ತಿಗಳು.ಅವುಗಳನ್ನು ರಕ್ಷಿಸಿಕೊಳ್ಳಬೇಕು ಎಂಬ ಪ್ರಜ್ಞೆ ಸಾರ್ವಜನಿಕರಲ್ಲಿ ಬರಬೇಕಾಗಿದೆ. ನಗರದಲ್ಲಿ ಕಾಲುವೆಗಳ ಜಾಲ ರಕ್ಷಿಸಿ, ಪುನರುಜ್ಜೀವನಗೊಳಿಸುವ ಕೆಲಸ ತುರ್ತಾಗಿ ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಕಾಲುವೆಗಳನ್ನು ಮುಚ್ಚಿ ಹಾಕಿದರೆ ಜೋರು ಮಳೆ ಸುರಿದಾಗಲೆಲ್ಲ ನಗರದ ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿರುತ್ತದೆ. ವರ್ಷದೊಳಗೆ ನಗರದ ಚಿತ್ರಣವೇ ಬದಲಾಗುತ್ತದೆ ಎಂಬ ಭರವಸೆಯ ಮಾತುಗಳನ್ನು ಕೇಳಿ ಸಾಕಾಯ್ತು. ಏನೂ ಬದಲಾಗಲಿಲ್ಲ’ ಎನ್ನುತ್ತಾರೆ ಚಾಮರಾಜಪೇಟೆ ನಿವಾಸಿ ಶ್ರೀನಿವಾಸ್.

‘ಜನರು ಮೋಸ ಹೋಗುತ್ತಿದ್ದಾರೆ. ಮತದಾರರು ಪ್ರಜ್ಞಾವಂತರಾಗಿ ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂದು ಪರಾಮರ್ಶಿಸುವ ಕೆಲಸ ಮಾಡಬೇಕು’ ಎಂದೂ ಹೇಳುವರು.

**

ತಲೆ ಎತ್ತಿ ನಿಲ್ಲುವ ಬಣ್ಣದ ಕಟ್ಟಡಗಳೇ ಅಭಿವೃದ್ಧಿಯ ಮಾನದಂಡ ಎಂದು ಬಿಂಬಿಸುವ ಜನನಾಯಕರಿಂದ ಅನೇಕ ಸಮಸ್ಯೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇದು ದುರಂತ –  ಅವಿನಾಶ್ ಎಚ್.ಎಸ್, ಗಾರ್ಡನ್ ನಿವಾಸಿ. 

**

ಕೆಂಪೇಗೌಡ ಎನ್.ವೆಂಕಟೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.