ADVERTISEMENT

ಕೃಷಿ ಚಟುವಟಿಕೆ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:35 IST
Last Updated 14 ಸೆಪ್ಟೆಂಬರ್ 2013, 6:35 IST

ಚಿಂತಾಮಣಿ: ಒಂದು ವಾರದಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಕೃಷಿ ಚಟು­ವಟಿಕೆ ಚೇತರಿಸಿಕೊಂಡಿದ್ದು, ರೈತರಲ್ಲಿ ಸಮಾಧಾನ ಮೂಡಿದೆ.

ಮಳೆ ಇಲ್ಲದೆ ಪೂರ್ಣ ಪ್ರಮಾಣ­ದಲ್ಲಿ ಬಿತ್ತನೆಯೂ ಆಗದೆ, ಬಿತ್ತನೆ­ಯಾಗಿರುವ ಬೆಳೆಯೂ ಒಣಗುತ್ತಿದ್ದು­ದರಿಂದ ರೈತರು ಆತಂಕಕ್ಕೆ ಒಳಗಾಗಿ ಆಕಾಶದ ಕಡೆಗೆ ದಿಟ್ಟಿಸುತ್ತಿದ್ದರು. ಈಗ ಒಂದು ವಾರದಿಂದ ಹದವಾದ ಮಳೆ­ಯಾಗುತ್ತಿದೆ. ಆದರೂ ಕೆರೆ– ಕುಂಟೆ­ಗಳಿಗೆ ನೀರು ಬರುವಂತಹ ಮಳೆ­ಯಾಗದಿರುವುದು ಚಿಂತೆಗೆ ಈಡು ಮಾಡಿದೆ.

ಸೆ.12ರವರೆಗೆ ತಾಲ್ಲೂಕಿನಲ್ಲಿ ಸರಾರಿ 45.24 ಸೆ.ಮೀ ಮಳೆಯಾಗಿದೆ. ಸಾಮಾನ್ಯ ಮಳೆ ಪ್ರಮಾಣ 51.06 ಸೆ.ಮೀ ಮಳೆಯಾಗಬೇಕಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಇದುವರೆಗೆ 11.98 ಸೆ.ಮೀ ಮಳೆಯಾಗಿದೆ. ಬಹುತೇಕ ಬಿತ್ತನೆ ಕಾರ್ಯ ಮುಗಿದಿದೆ. ತಡವಾಗಿ ಬಿತ್ತನೆಯಾಗಿರುವ ಪ್ರದೇಶ­ದಲ್ಲಿ ಗುಂಟವೆ ಹಾಕುವುದು, ಮುಂದಿನ ಬಿತ್ತನೆಗಳಲ್ಲಿ ಕಳೆ ಕೀಳುವ ಕೆಲಸಗಳಲ್ಲಿ ರೈತರು ನಿರತರಾಗಿರುವುದನ್ನು ಕಾಣ­ಬಹುದು.

ತಾಲ್ಲೂಕಿನಲ್ಲಿ ಜೂನ್, ಜುಲೈ ಮಳೆಯ ಪ್ರಮಾಣ ಕಡಿಮೆಯಾಗಿದ್ದ­ರಿಂದ ಬಿತ್ತನೆಯೂ ಕಡಿಮೆಯಾಗಿತ್ತು. ಆಗಸ್ಟ್ ಅಂತ್ಯದಲ್ಲಿ ಹಾಗೂ ಸೆಪ್ಟೆಂಬರ್ ನಲ್ಲಿ ಉತ್ತಮ ಮಳೆಯಾಗಿರು­ವುದರಿಂದ ತಾಲ್ಲೂಕಿನಲ್ಲಿ ಶೇ 86.­65ರಷ್ಟು ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 33120 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಸೆ.12 ರವರೆಗೆ 28698 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ರಾಗಿ, ನೆಲಗಡಲೆ, ತೊಗರಿ, ಮುಸು­ಕಿನ ಜೋಳ ಇಲ್ಲಿನ ಪ್ರಮುಖ ಬೆಳೆಗಳಾ­ಗಿವೆ. ನೆಲಗಡಲೆ ಬಿತ್ತನೆ ಕಡಿಮೆ­ಯಾಗಿದ್ದು, ರಾಗಿ ಗುರಿ ಮೀರಿ ಬಿತ್ತನೆ­ಯಾಗಿದೆ.

12 ಸಾವಿರ ಹೆಕ್ಟೇರ್ ರಾಗಿಯ ಬಿತ್ತನೆ ಗುರಿಯನ್ನು ಹೊಂದಿದ್ದು, 14025 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಅಂದರೆ ಶೇ 116.88 ಸಾಧನೆಯಾಗಿದೆ. 2850 ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರಿಡ್ ಮುಸುಕಿನ ಜೋಳದ ಬಿತ್ತನೆ ಗುರಿ ಹೊಂದಿದ್ದು, 4545 ಹೆೆಕ್ಟೇರ್ ಬಿತ್ತನೆ­ಯಾಗುವ ಮೂಲಕ ಶೇ159.47 ರಷ್ಟು ಸಾಧನೆಯಾಗಿದೆ.

ನೆಲಗಡಲೆ 11500 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, 5250 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಮೂಲಕ ಶೇ 45.65ರಷ್ಟು ಸಾಧನೆ­ಯಾಗಿದೆ. ತೊಗರಿ 2750 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದರೂ 1495 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ 54.36ರಷ್ಟು,  ಭತ್ತ 1800 ಹೆಕ್ಟೇರ್‌­ನಲ್ಲಿ ಬಿತ್ತನೆ ಗುರಿ ಹೊಂದಿದ್ದು 1050 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿ ಶೇ. 58.33 ಸಾಧನೆಯಾಗಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಜೂನ್, ಜುಲೈ ತಿಂಗಳಲ್ಲಿ ಮಳೆ ಕಡಿಮೆಯಾಗಿದ್ದರಿಂದ ನೆಲಗಡಲೆ, ಭತ್ತ, ತೊಗರಿ ಬಿತ್ತನೆ ಕಡಿಮೆ­ಯಾಗಿದ್ದು, ಆ ಪ್ರದೇಶವನ್ನು ರಾಗಿ ಆವರಿಸಿಕೊಂಡು ಗುರಿಗಿಂತ ಹೆಚ್ಚಿನ ಬಿತ್ತನೆಯಾಗಿದೆ. ಉಳಿದಿರುವ ಪ್ರದೇಶ­ದಲ್ಲಿ ಹುರುಳಿ ಬಿತ್ತನೆ ನಡೆಯುತ್ತದೆ ಎಂದು ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕ ಡಾ.ಕೆ.ನಯೀಂಪಾಷಾ ತಿಳಿಸಿದ್ದಾರೆ.

ರೈತರ ಸಹಾಯಕ್ಕಾಗಿ ಕೃಷಿ ಇಲಾಖೆ ಸಜ್ಜುಗೊಂಡಿದ್ದು, ಔಷಧಿ, ರಸಗೊಬ್ಬರ ಸೇರಿ ಯಾವುದಕ್ಕೂ ಕೊರತೆ ಇಲ್ಲ. ಇಲಾಖೆಯಲ್ಲಿ ಸೆ.15 ರವರೆಗೂ ಬಿತ್ತನೆ ಬೀಜಗಳ ವಿತರಣೆ ಮಾಡಲಾಗುತ್ತದೆ. ರಸಗೊಬ್ಬರಗಳು ಸಹ ಸಾಕಷ್ಟು ದಾಸ್ತಾ­ನಿದೆ. ಬೆಳೆಗಳಿಗೆ ಇದುವರೆಗೆ ಯಾವುದೇ ರೋಗ–ರುಜಿನಗಳ ಬಗ್ಗೆ ದೂರು ಬಂದಿಲ್ಲ. ರೈತರು ಬೆಳೆಗಳಿಗೆ ಯೂರಿಯಾ ಮಾತ್ರ ಉಪಯೋಗಿಸದೆ ಕೃಷಿ ಅಧಿಕಾರಿಗಳ ಸಲಹೆಯಂತೆ ರಸಗೊಬ್ಬರಗಳನ್ನು ಉಪಯೋಗಿ­ಸ­ಬೇಕು ಎಂದು ಕೃಷಿ ಅಧಿಕಾರಿ ಮಂಜುನಾಥ್ ಸಲಹೆ ಮಾಡಿದ್ದಾರೆ.

ರೈತರಿಗೆ  ಕೃಷಿ ಯಾಂತ್ರೀಕರಣ ಯೋಜನೆ­ಯಡಿ ಶೇ 50ರ ರಿಯಾಯಿತಿ ದರದಲ್ಲಿ ಭೂಮಿ ಸಿದ್ಧತೆ ಉಪಕರಣ­ಗಳು,  ನಾಟಿ, ಬಿತ್ತನೆ ಮಾಡುವ ಉಪಕರಣಗಳು, ಅಂತರ ಬೇಸಾಯ ಮಾಡುವ ಉಪಕರಣಗಳು, ಸಸ್ಯ ಸಂರಕ್ಷಣಾ ಉಪಕರಣ, ಕೊಯಿಲು ಮತ್ತು ಒಕ್ಕಣೆ ಮಾಡುವ ಉಪಕರಣ, ತ್ಯಾಜ್ಯ ವಸ್ತುಗಳ ನಿರ್ವಹಣಾ ಉಪ­ಕರಣ, ಕೃಷಿ ಸಂಸ್ಕರಣಾ ಉಪಕರಣ ಹಾಗೂ ಡೀಸೆಲ್ ಪಂಪ್‌ಸೆಟ್‌ಗಳನ್ನು ನೀಡಲಾಗುತ್ತದೆ.

ಭೂ-ಚೇತನ ಮತ್ತು ಮಣ್ಣಿನ ಸತ್ವ ಹೆಚ್ಚಿಸುವ ಯೋಜನೆಗಳಡಿ ಶೇಕಡಾ 50ರ ರಿಯಾಯಿತಿ ದರದಲ್ಲಿ ವಿವಿಧ ಕೃಷಿ ಪರಿಕರಗಳಾದ ಹಸಿರೆಲೆ ಗೊಬ್ಬರ ಬೀಜಗಳು, ಸಾವಯವ ಗೊಬ್ಬರಗಳು, ಜಿಪ್ಸಂ, ಜಿಂಕ್ ಸಲ್ಫೇಟ್, ಬೋರಾನ್, ಪಿ.ಎಸ್.ಬಿ., ಟ್ರೈಕೋಡರ್ಮಾ ದೊರ­ಕು­ತ್ತವೆ ಎಂದು ಡಾ.ಕೆ.ನಯೀಂಷಾಷಾ ತಿಳಿಸಿದ್ದಾರೆ.

ತಾಲ್ಲೂಕಿನಾದ್ಯಂತ ಹದ­ವಾದ ಮಳೆಯಾಗುತ್ತಿದ್ದರೂ ಕೆರೆ ಕುಂಟೆಗಳಿಗೆ ನೀರು ಬರುವಂತಹ ಮಳೆಯಾಗುತ್ತಿಲ್ಲ.

ಜಾನುವಾರುಗಳಿಗೆ ಹಾಗೂ ಜನತೆಗೆ ಕುಡಿಯುವ ನೀರಿನ ಕೊರತೆ ಆತಂಕ ದೂರವಾಗಿಲ್ಲ. ಮುಂದಿನ ದಿನಗಳಲ್ಲಿ ಕೆರೆ– ಕುಂಟೆಗಳಿಗೆ ನೀರು ಬರುವಂತಹ ಮಳೆಯಾಗಲಿ ಎಂಬುದು ಜನತೆಯ ಪ್ರಾರ್ಥನೆ­ಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.