ADVERTISEMENT

ಖಾತ್ರಿಗಾಗಿ ಕಾಯುತ್ತಿರುವ ಗ್ರಾಮೀಣ ಜನತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 9:55 IST
Last Updated 1 ಜುಲೈ 2012, 9:55 IST
ಖಾತ್ರಿಗಾಗಿ ಕಾಯುತ್ತಿರುವ ಗ್ರಾಮೀಣ ಜನತೆ
ಖಾತ್ರಿಗಾಗಿ ಕಾಯುತ್ತಿರುವ ಗ್ರಾಮೀಣ ಜನತೆ   

ಬಾಗೇಪಲ್ಲಿ: ಬರಗಾಲ ಘೋಷಣೆಯಾಗಿರುವ ರಾಜ್ಯದ 123 ತಾಲ್ಲೂಕುಗಳಲ್ಲಿ ಬಾಗೇಪಲ್ಲಿಯೂ ಒಂದು. ಬರ ಪೀಡಿತ ತಾಲ್ಲೂಕುಗಳಲ್ಲಿ ಅಸಖ್ಯಾಂತ ಕೂಲಿ ಕಾರ್ಮಿಕರು ಪಟ್ಟಣದ ಪ್ರದೇಶಗಳಿಗೆ ಕೂಲಿ ಹುಡುಕಿ ವಲಸೆ ಬಂದಿದ್ದಾರೆ. ಗ್ರಾಮೀಣ ಜನರಿಗೆ ಆಸರೆಯಾಗಬೇಕಿದ್ದ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಕಾಣಿಸಿಕೊಂಡ ಲೋಪಗಳಿಂದ ಕೂಲಿ ಕಾರ್ಮಿಕರ ಸ್ಥಿತಿ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನ 35,163 ಕುಟುಂಬಗಳು ನೊಂದಾಯಿಸಿಕೊಂಡಿದ್ದು ಎಲ್ಲರಿಗೂ ಜಾಬ್ ಕಾರ್ಡ್ ಸಿಕ್ಕಿದೆ. ಪ್ರಸ್ತುತ 25 ಕುಟುಂಬಗಳು ಉದ್ಯೋಗಕ್ಕೆ ಬೇಡಿಕೆ ಇಟ್ಟಿವೆ. ಅವರಿಗೆ ಉದ್ಯೋಗ ಒದಗಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮೂಲಗಳು ಮಾಹಿತಿ ನೀಡುತ್ತವೆ.

ಉದ್ಯೋಗ ಕೋರಿರುವ ಕುಟುಂಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಮೇಲ್ನೋಟಕ್ಕೇ ಕಂಡು ಬರುತ್ತದೆ.   ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಉದ್ಯೋಗ ಖಾತ್ರಿ ಅನುಷ್ಠಾನ ಕುಂಟುತ್ತಾ ಸಾಗಿದೆ. ತಾಲ್ಲೂಕಿನ 12 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ಉದ್ಯೋಗ ಖಾತ್ರಿಯ ಇಂದಿನ ಸ್ಥಿತಿಗತಿ ವಿವರಿಸುತ್ತದೆ.
 
ಮಳೆ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ಕೃಷಿ ಭೂಮಿ ಪಾಳು ಬಿದ್ದಿದೆ. ಭೂ ಮಾಲೀಕರು ಮತ್ತು ಭೂ ರಹಿತ ಕೂಲಿ ಕಾರ್ಮಿಕರು ಪಟ್ಟಣದ ಪ್ರದೇಶಗಳಿಗೆ ಕೂಲಿ ಹುಡುಕಿಕೊಂಡು ತೆರಳುತ್ತಿದ್ದಾರೆ. ಪಟ್ಟಣದ ಎಚ್.ಎನ್.ವೃತ್ತದಲ್ಲಿ ನೂರಾರು ಕೂಲಿ ಕಾರ್ಮಿಕರು ಕೆಲಸ ಕೊಡುವವರ ನಿರೀಕ್ಷೆಯಲ್ಲಿರುತ್ತಾರೆ.

`ಮುಂಗಾರು ಬಂದಿಲ್ಲ. ನನ್ನ ಒಡೆತನದಲ್ಲಿರುವ 2 ಎಕರೆ ಬರಡಾಗಿದೆ. ಕೂಲಿ ಹುಡುಕಿಕೊಂಡು ಬಾಗೇಪಲ್ಲಿಗೆ ಬೆಳಿಗ್ಗೆ 6ಕ್ಕೆ ಬರುತ್ತೇನೆ. ಮೇಸ್ತ್ರಿಗಳು ಕೂಲಿಗೆ ಕರೆದರೆ ದಿನದ ಕೂಲಿ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿದ್ದರೆ ನಾನು ಬಾಗೇಪಲ್ಲಿಗೆ ಬರುವ ಸಂದರ್ಭ ಸೃಷ್ಟಿಯಾಗುತ್ತಿರಲಿಲ್ಲ~ ಎಂದು ಐವಾರಪಲ್ಲಿ ಗ್ರಾಮದ ರೈತ ರಾಮಚಂದ್ರ `ಪ್ರಜಾವಾಣಿ~ಗೆ ತಿಳಿಸಿದರು. 
            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.