ADVERTISEMENT

ಖಾಸಗಿ ಕಂಪೆನಿಗಳಿಗೆ ಮಣೆ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:39 IST
Last Updated 17 ಡಿಸೆಂಬರ್ 2013, 8:39 IST
ಚಿಂತಾಮಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಜಿಲ್ಲೆಗೆ ಶಾಶ್ವತ ನೀರಾವರಿ ಒದಗಿಸಬೇಕು ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಚಿಂತಾಮಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಜಿಲ್ಲೆಗೆ ಶಾಶ್ವತ ನೀರಾವರಿ ಒದಗಿಸಬೇಕು ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟಿಸಿದರು.

ಬಹುರಾಷ್ಟ್ರೀಯ ಕಂಪೆನಿಗಳು ಬಂಡವಾಳ ಹೂಡಲು ರಾಜ್ಯ ಸರ್ಕಾರ ಅನುಮತಿ ನೀಡಿ, ಖಾಸಗಿ ಉದ್ಯಮಿಗಳ ಪರ ನೀತಿಗಳನ್ನು ಜಾರಿ ಮಾಡುತ್ತಿದೆ. ಬಡವರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಜಮೀನಿಗೆ ಹಕ್ಕುಪತ್ರ ನೀಡದೇ ಅವರನ್ನು ಒಕ್ಕಲೆಬ್ಬಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಟೀಕಿಸಿದರು.

ರೇಷ್ಮೆ, ಬತ್ತ, ಶೇಂಗಾ, ತೊಗರಿ, ಹಾಲು ಮುಂತಾದ ಉತ್ಪನ್ನಗಳ ಬೆಲೆಯಲ್ಲಿ ಸ್ಥಿರತೆ ಕಾಪಾಡಲು ಶೇ 40ರ ಆಮದು ಸುಂಕ ಹೇರಬೇಕು. ದೇಶಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು. ಎಪಿಎಂಸಿಗಳಲ್ಲಿ ಸರ್ಕಾರವೇ ಧಾನ್ಯ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಸಾಲ ಬಾಧಿತ ರೈತ ಕುಟುಂಬಗಳ ಆತ್ಮಹತ್ಯೆ ತಡೆಗೆ ಕೇರಳ ರಾಜ್ಯದ ಮಾದರಿಯಲ್ಲಿ ಋಣಮುಕ್ತ ಕಾಯ್ದೆ ಜಾರಿ ಮಾಡಬೇಕು. ಕಾಲುಬಾಯಿ ರೋಗದಿಂದ ಮೃತಪಟ್ಟ ಹಸುಗಳ ಮಾಲೀಕರಿಗೆ ₨ 50 ಸಾವಿರ ಪರಿಹಾರಧನ ನಿಗದಿಪಡಿಸಬೇಕು ಎಂದರು.
ಪ್ರವಾಸಿ ಮಂದಿರದಿಂದ ಆಗಮಿಸಿದ ಪ್ರತಿಭಟನಾ­ಕಾರರು ಶಿಡ್ಲಘಟ್ಟ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಸಂಚಾಲಕ ಬಿ.ಎನ್‌.ಮುನಿಕೃಷ್ಣಪ್ಪ, ಮಧುಲತಾ, ಜಿ.ಎನ್‌.ರವಿ, ಎಂ.ಪಿ.ಮುನಿವೆಂಕಟಪ್ಪ, ಚನ್ನರಾಯಪ್ಪ, ಮುನಿಯಪ್ಪ, ಶಿವಪ್ಪ, ಚನ್ನಪ್ಪ, ಬಾಬುರೆಡ್ಡಿ, ಎಂ.ಕೃಷ್ಣಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಸ್ತೆ ತಡೆ ನಡೆಸಿದ ರೈತರ ಬಂಧನ
ಗುಡಿಬಂಡೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ರೈತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ನಿವೇಶನ ರಹಿತರಿಗೆ ಉಚಿತ ನಿವೇಶನ, ಪಟ್ಟಣದಲ್ಲಿ ರಾಗಿ ಮತ್ತು ಜೋಳ ಖರೀದಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದರು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೋಮವಾರ ಪಟ್ಟಣದ ಮಿನಿ ವಿಧಾನಸೌಧದ ಎದುರು ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಎಚ್.ಪಿ.ಲಕ್ಷ್ಮೀನಾರಾಯಣ ಮಾತ­ನಾಡಿ, ತಾಲ್ಲೂಕಿನ ಕೃಷಿ ಕೂಲಿ ಕಾರ್ಮಿಕರಿಗೆ ಹಾಗೂ ಬಡ ಜನತೆಗೆ ನಿವೇಶನ ಒದಗಿಸಬೇಕೆಂದು ಸಂಘಟನೆ ವತಿಯಿಂದ ಅರ್ಜಿ ಹಾಕುವ ಚಳುವಳಿ ನಡೆಸಲಾಗಿತ್ತು. ಆದರೆ ಈವರೆಗೆ ತಾಲ್ಲೂಕು ಆಡಳಿತ ಯಾವುದೇ ನಿರ್ದಾರ ತೆಗೆದುಕೊಳ್ಳದೇ ಮೀನಾಮೇಷ ಎಣಿಸುತ್ತಿದೆ ಎಂದರು.

ರೈತರು ಬೆಳೆದ ರಾಗಿ, ಜೋಳ ಮತ್ತಿತರರ ಧಾನ್ಯಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಆದರೆ ಧಾನ್ಯ ಖರೀದಿ ಕೇಂದ್ರಗಳನ್ನು ತಾಲ್ಲೂಕು ಕೇಂದ್ರದಲ್ಲಿ ತೆರೆದಿಲ್ಲ. ಅಧಿಕಾರಿಗಳು ಸ್ಥಳಾವಕಾಶ ಕೊರತೆಯಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ದೂರಿದರು.
ರೈತ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ರವೀಂದ್ರರೆಡ್ಡಿ, ಸಹ ಕಾರ್ಯದರ್ಶಿ ವೆಂಕಟರಾಜು, ತಾಲ್ಲೂಕು ಸಮಿತಿ ಸದಸ್ಯರಾದ ಮದ್ದಿರೆಡ್ಡಿ, ಬೆಣ್ಣೇಪರ್ತಿ ಅಶ್ವತ್ಥಪ್ಪ, ವೆಂಕಟಶಿವಾರೆಡ್ಡಿ, ರಾಜಪ್ಪ, ದಲಿತ ಹಕ್ಕುಗಳ ಉಪಸಮಿತಿ ತಾಲ್ಲೂಕು ಅಧ್ಯಕ್ಷ ಅಶ್ವತ್ಥಪ್ಪ, ಎಲ್.ಎನ್.ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಬೆಂಬಲ ಬೆಲೆಗೆ ಬೇಡಿಕೆ
ಬಾಗೇಪಲ್ಲಿ: ಶಾಶ್ವತ ನೀರಾವರಿ, ಬಗರ್ ಹುಕುಂ ಮಂಜೂರು, ಕಂಪೆನಿ ಕೃಷಿಗೆ ನಿಷೇಧ, ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಶೀಘ್ರ ಈಡೇರಿಕೆಗೆ ಒತ್ತಾಯಿಸಿ ರೈತರು ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ರಸ್ತೆತಡೆ ನಡೆಸಿದರು. ರೈತರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು.

ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಮಂಜುನಾಥರೆಡ್ಡಿ ಮಾತನಾಡಿ, ವಿದೇಶಿ ಕಂಪೆನಿಗಳು, ಭೂ ಮಾಲೀಕರು ಮತ್ತು ಶ್ರೀಮಂತರ ಪರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾಗತೀಕರಣ ನೀತಿಗಳನ್ನು ರೂಪಿಸುತ್ತಿವೆ. ಕೃಷಿ ಉತ್ಪಾದನೆಯ ಹಿನ್ನಡೆಗೆ ಇದು ಮುಖ್ಯ ಕಾರಣ. ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಲ್ಲರೆ ವ್ಯಾಪಾರದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದ ರಾಜ್ಯ ಸರ್ಕಾರದ ಕ್ರಮ ತಪ್ಪು. ಕೃಷಿ ರಂಗಕ್ಕೆ ಬಂಡವಾಳ ಹೂಡಲು ವಿದೇಶಿ ಕಂಪೆನಿಗಳನ್ನು ಆಹ್ವಾನಿಸುತ್ತಿರುವು­ದರಿಂದ ಹಲವು ಕೆಟ್ಟ ಬೆಳವಣಿಗೆಗಳಿಗೆ ಕಾರಣವಾಗಲಿದೆ. ಇದು ಕಂಪೆನಿ– ಗುತ್ತಿಗೆ ಹಾಗೂ ಮುಂಗಡ ವ್ಯಾಪಾರದ ಕೃಷಿ ನೀತಿಯನ್ನು ಜಾರಿಗೆ ತರುವ ಹುನ್ನಾರವಾಗಿದೆ ಎಂದು ದೂರಿದರು.

ಬಸ್ ನಿಲ್ದಾಣದಲ್ಲಿ ರಸ್ತೆ ತಡೆ ಮಾಡುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎ.ರಾಮಲಿಂಗಪ್ಪ, ಮುಖಂಡರಾದ ಚಂದ್ರಶೇಖರರೆಡ್ಡಿ, ನಾಗಿರೆಡ್ಡಿ, ಗಂಗರಾಜಪ್ಪ, ವೆಂಕಟರೆಡ್ಡಿ, ಮುನಿಸ್ವಾಮಿ, ಅಶ್ವತ್ಥಪ್ಪ, ರಾಮಾಂಜಿ, ನಾರಾಯಣಸ್ವಾಮಿ, ಸುಬ್ಬರಾಯಪ್ಪ, ಬಿ.ಎಸ್.ಲೋಕೇಶ್ ಕುಮಾರ್, ಪುರಸಭೆ ಸದಸ್ಯ ಬಿ.ಎಚ್.ಮಹಮದ್ ಆರೀಫ್ ಇತರರು ಉಪಸ್ಥಿತರಿದ್ದರು.

ಸಾಗುವಳಿ ಚೀಟಿಗೆ ರೈತರ ಒತ್ತಾಯ
ಗೌರಿಬಿದನೂರು: ಗ್ರಾಮೀಣ ಪ್ರದೇಶದ ರೈತರು, ಕೂಲಿ ಕೃಷಿ ಕಾರ್ಮಿಕರು ಹಲವು ವರ್ಷಗಳಿಂದ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.

ತಾಲ್ಲೂಕು ಪಂಚಾಯಿತಿ ಆವರಣದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಎನ್.ಆರ್.ರವಿಚಂದ್ರರೆಡ್ಡಿ ಮಾತನಾಡಿ, ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರು ಹಲವು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಅಂಥವರಿಗೆ ಶೀಘ್ರ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬಡವರಿಗೆ ನಿವೇಶನ ಸಿಕ್ಕಿಲ್ಲ. ನಿವೇಶನಗಳಿಗೆ ಲಕ್ಷಾಂತರ ರೂಪಾಯಿ ತೆರಬೇಕಾಗಿರುವ ಕಾರಣ ಬಡವರು ಮನೆ ಕಟ್ಟಿಕೊಳ್ಳಲು ಆಗುತ್ತಿಲ್ಲ. ವಸತಿ ರಹಿತರನ್ನು ಗುರುತಿಸಿ ಶೀಘ್ರ ಮನೆ ವಿತರಿಸಬೇಕು ಎಂದು ಒತ್ತಾಯಿಸಿದರು.
ಕಾದಲವೇಣಿ, ನರಸಾಪುರ, ಹುಣಸೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಮನೆ ನೀಡಬೇಕು ಎಂದು ಆಗ್ರಹಿಸಿದರು.

ಮೆಕ್ಕೆ ಜೋಳಕ್ಕೆ ₨ 1900 ಬೆಂಬಲ ಬೆಲೆ ಘೋಷಿಸಬೇಕು. ಶಾಶ್ವತ ನೀರಾವರಿ ಯೋಜನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಕೂಲಿ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಸಿ.ಅಶ್ವತ್ಥಪ್ಪ, ಸಿಐಟಿಯು ಮುಖಂಡ ಸಿದ್ದಗಂಗಪ್ಪ, ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಆರ್.ಎನ್.ರಾಜು, ಮುಖಂಡರಾದ ಅನ್ವರ್ ಬಾಷಾ, ನಲ್ಲಪ್ಪ, ಹೊಸೂರು ತಿಪ್ಪಣ್ಣ, ಚಿಕ್ಕನಾಯ್ಡು, ಕೊಂಡಪ್ಪ, ಆನೂಡಿ ನಾಗರಾಜ್, ಲಕ್ಷ್ಮೀದೇವಮ್ಮ, ಯಶೋದಮ್ಮ ಇತರರು ಉಪಸ್ಥಿತರಿದ್ದರು.  

ಶಾಶ್ವತ ನೀರಾವರಿಗೆ ಒತ್ತಾಯ
ಚಿಂತಾಮಣಿ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸುವ ಡಾ.ಪರಮಶಿವಯ್ಯ ವರದಿಯನ್ನು ಸಮಗ್ರವಾಗಿ ಜಾರಿಗೊಳಿಸಬೇಕು ಹಾಗೂ ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಲಾಭದಾಯಕವಾಗುವಂತೆ ಬೆಂಬಲ  ಬೆಲೆಯನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘವು ಸೋಮವಾರ ರಸ್ತೆ ತಡೆ ನಡೆಸುವುದರ ಮೂಲಕ ಪ್ರತಿಭಟನೆ ನಡೆಸಿತು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಹೊರಟ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರಮುಖ ರಸ್ತೆಗಳ ಮೂಲಕ ಚೇಳೂರು ವೃತ್ತ ತಲುಪಿದರು. ಅಲ್ಲಿ ಸ್ವಲ್ಪಕಾಲ  ರಸ್ತೆ ತಡೆ ನಡೆಸಿದರು. ರಸ್ತೆ ತಡೆಯನ್ನು ವಾಪಸ್‌ ಪಡೆಯುವಂತೆ ಪೊಲೀಸರು ಮನವಿ ಮಾಡಿದರೂ ಹಿಂತೆಗೆದುಕೊಳ್ಳದಿದ್ದಾಗ, ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಗೋಪಿನಾಥ್‌ ಮಾತನಾಡಿ ಕಳೆದ ಅಕ್ಟೋಬರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗಿತ್ತು.  ಬೇಡಿಕೆಗಳ ಬಗ್ಗೆ ಸೂಕ್ತಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆಗಳನ್ನು ನೀಡಿದ್ದ ಸರ್ಕಾರ ಮತ್ತೆ  ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಕರೆಯಂತೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಈಗಲೂ ಸರ್ಕಾರ ಸ್ಪಂದಿಸದಿದ್ದರೆ ವಿವಿಧ ಹಂತಗಳಲ್ಲಿ ಹೋರಾಟವನ್ನು ಮುಂದುವರೆಸಲಾಗುವುದು ಎಂದು ರಾಜ್ಯ ಸರ್ಕಾರವನ್ನು  ಎಚ್ಚರಿಸಿದರು.

ಸರ್ಕಾರಗಳು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾ ಮೋಸ ಮಾಡುತ್ತಿವೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದೆವು. ಸರ್ಕಾರವು ರಾಗಿಗೆ ಕ್ವಿಂಟಲ್‌ಗೆ ₨ 1800 ಹಾಗೂ ಮುಸುಕಿನ ಜೋಳಕ್ಕೆ ₨ 1310 ಬೆಲೆ ನಿಗದಿಗೊಳಿಸಿದೆ ಎಂದು ಟೀಕಿಸಿದರು.

ಒಂದು ಕ್ವಿಂಟಲ್‌ ರಾಗಿ ಬೆಳೆಯಲು ₨ 2350, ಜೋಳಕ್ಕೆ ₨ 2100 ಖರ್ಚು ಬರುತ್ತದೆ. ಸರ್ಕಾರ ನಿಗದಿಗೊಳಿಸಿರುವ ಬೆಲೆ ತುಂಬಾ ಕಡಿಮೆಯಾಗಿದೆ. ರಾಗಿಗೆ ಕ್ವಿಂಟಲ್‌ಗೆ ₨ 2500, ಜೋಳಕ್ಕೆ ₨ 2000 ಬೆಂಬಲ ಬೆಲೆಯನ್ನು ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

ಬಗರ್‌ಹುಕುಂ ಮತ್ತು ಅರಣ್ಯ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವವರ ಜಮೀನುಗಳನ್ನು ಸಕ್ರಮಗೊಳಿಸಬೇಕು. ರಾಜ್ಯದ ಕೆಲವು ಕಡೆ ಅರಣ್ಯ ಭೂಮಿ ಉಳುಮೆ ಮಾಡುತ್ತಿರುವವರ ವಿರುದ್ದ ಹೂಡಿರುವ ಮೊಕದ್ದಮೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಪಡಿಸಿದರು.

ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಕುರಿತು ಡಾ.ಸ್ವಾಮಿನಾಥನ್‌ ವರದಿಯನ್ನು ಜಾರಿಗೊಳಿಸಬೇಕು, ಮನೆ ಹಾಗೂ ನಿವೇಶನರಹಿತರಿಗೆ ಮನೆ ಮತ್ತು ನಿವೇಶನಗಳನ್ನು ಮಂಜೂರು ಮಾಡಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಾಯ ತರಲು ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.

ಮುಖಂಡರಾದ ಶ್ರೀನಿವಾಸರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ಕೃಷ್ಣಾರೆಡ್ಡಿ, ರಾಜು, ರಾಮು, ರತ್ನಮ್ಮ, ಮುನಿವೆಂಕಟಮ್ಮ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.