ADVERTISEMENT

ಗ್ರಾಮಸ್ಥರಿಂದ ಪ್ರತಿಕ್ರಿಯೆ, ಸಕಾಲಿಕ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 30 ಮೇ 2012, 9:50 IST
Last Updated 30 ಮೇ 2012, 9:50 IST

ಚಿಕ್ಕಬಳ್ಳಾಪುರ: ನೀರಾವರಿ ತಜ್ಞ ಜಿ.ಎಸ್.ಪರಮ ಶಿವಯ್ಯ ಅವರ ವರದಿಯಾಧರಿಸಿ ಶಾಶ್ವತ ನೀರಾ ವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಗ್ರಾಮೀಣ ಪ್ರದೇಶವನ್ನು ಕೇಂದ್ರೀಕರಿಸಿ ಜಾಗೃತಿ ಜಾಥಾ ಆರಂಭಿಸಿದ್ದು, ಗ್ರಾಮಸ್ಥರಿಂದ ಉತ್ತಮ ರೀತಿಯ ಪ್ರತಿಕ್ರಿಯೆ ದೊರೆಯುತ್ತಿದೆ.

ಕ್ರಾಂತಿಗೀತೆ, ಜಾಗೃತಿ ಗೀತೆ ಹಾಡುವ ಮತ್ತು ಕರಪತ್ರಗಳನ್ನು ವಿತರಿಸುವ ಮೂಲಕ ಅರಿವು ಮೂಡಿಸಲಾಗುತ್ತಿದ್ದು, ಗ್ರಾಮಸ್ಥರು ಸಕರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.

ಜಿಲ್ಲೆಯ ಆರೂ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕೇಂದ್ರಗಳು ಅಲ್ಲದೇ ಸಾರಿಗೆ ಸಂಪರ್ಕ ಮತ್ತು ಮೂಲಸೌಕರ್ಯಗಳಿಲ್ಲದ ಗ್ರಾಮಗಳಿಗೂ ಭೇಟಿ ನೀಡುತ್ತಿರುವ ಜಾಗೃತಿ ಜಾಥಾದ ಸದಸ್ಯರು ನೀರು ಮತ್ತು ನೀರಾವರಿ ಮಹತ್ವವನ್ನು ಗ್ರಾಮಸ್ಥರಿಗೆ ತಿಳಿಪಡಿಸುತ್ತಿದ್ದಾರೆ.
 
ಶಾಶ್ವತ ನೀರಾವರಿ ಯೋಜನೆ ಸಕಾಲಕ್ಕೆ ಅನುಷ್ಠಾನವಾಗದಿದ್ದರೆ, ಮುಂದಿನ ದಿನಗಳಲ್ಲಿ ಇಲ್ಲಿನ ಪ್ರದೇಶವು ಮರಳುಗಾಡು ಆಗಲಿದೆ ಎಂಬ ಸಂಗತಿಯನ್ನು ಅಂಕಿ-ಅಂಶಗಳ ಮೂಲಕ ವಿವರಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಮತ್ತು ಗ್ರಾಮಗಳಲ್ಲಿ ಸುತ್ತು ಹಾಕಿರುವ ಜಾಥಾ ಈಗ ಶಿಡ್ಲಘಟ್ಟ ತಾಲ್ಲೂಕಿಗೆ ತಲುಪಿದೆ. ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮಪಂಚಾಯಿತಿ ಕೇಂದ್ರ ಮತ್ತು ಗ್ರಾಮಗಳಲ್ಲಿ ಸುತ್ತು ಹಾಕಿದ ಜಾಥಾ ಇನ್ನೆರಡು ದಿನಗಳಲ್ಲಿ ಚಿಂತಾಮಣಿ ತಾಲ್ಲೂಕು ಪ್ರವೇಶಿಸಲಿದೆ. ಒಂದೊಂದು ತಾಲ್ಲೂಕಿನಲ್ಲೂ 4 ರಿಂದ 5 ದಿನಗಳ ಕಾಲ ಸುತ್ತು ಹಾಕಲಿರುವ ಜಾಥಾ ಅಲ್ಲಲ್ಲಿ ಗ್ರಾಮಸಭೆಗಳನ್ನು ಮತ್ತು ಕ್ರಾಂತಿಗೀತೆಗಳ ಕಾರ್ಯಕ್ರಮ ನಡೆಸುತ್ತಿದೆ.

ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಕೈಗೊಂಡಿರುವ ಜಾಥಾಗೆ ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟ (ಡಿವೈಎಫ್‌ಐ), ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್), ಕರ್ನಾಟಕ ಪ್ರಾಂತ ರೈತರ ಸಂಘ (ಕೆಪಿಆರ್‌ಎಸ್) ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಕೈಜೋಡಿಸಿದ್ದು, ಎಲ್ಲ ಸಂಘದ ಸದಸ್ಯರು ಪಾಲ್ಗೊಳ್ಳುತ್ತಿದ್ದಾರೆ. ಗ್ರಾಮಸ್ಥರು ಕೂಡ ಅಗತ್ಯ ಸಹಕಾರ ನೀಡಿ, ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

`ನಾವು ಒಂದು ತಿಂಗಳ ಕಾಲ ಜಾಥಾ ಹಮ್ಮಿಕೊಂಡಿದ್ದೇವೆ. ಜೂನ್ 22ರವರೆಗೆ ಜಾಥಾ ನಡೆಯಲಿದ್ದು, ಕೊನೆಯ ದಿನದಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು 24 ಗಂಟೆಗಳ ಕಾಲ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಜಿ.ಎಸ್.ಪರಮಶಿವಯ್ಯ ಅವರ ವರದಿಯನ್ನು ಆಧರಿಸಿ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿ ತರುವಂತೆ ಒತ್ತಾಯಿಸುತ್ತೇವೆ.
 
ಜಿಲ್ಲೆಯ ದುಸ್ಥಿತಿಯನ್ನು ತಿಳಿಪಡಿಸುತ್ತೇವೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ~ ಎಂದು ಡಿವೈಎಫ್‌ಐ ಮುಖಂಡ ಶ್ರೀನಿವಾಸ್‌ರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.

`ಚಿಕ್ಕಬಳ್ಳಾಪುರ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಸಭೆಗಳನ್ನು ನಡೆಸಿರುವ ನಾವು ಈಗ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸುತ್ತಿದ್ದೇವೆ. ಕುಂದಲಗುರ್ಕಿ, ದೊಣಹಳ್ಳಿ, ರಪ್ಪಾರ‌್ಲಹಳ್ಳಿ, ಗಂಗಾಪುರ, ರಾಚನಹಳ್ಳಿ, ಕಾಚಹಳ್ಳಿ, ವೈ.ಹುಣಸೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದೇವೆ. ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳ ಗ್ರಾಮಗಳಿಗೂ ಭೇಟಿ ನೀಡಿ, ಗ್ರಾಮಸ್ಥರಲ್ಲಿ ನೀರಾವರಿ ಕುರಿತು ಅರಿವು ಮೂಡಿಸಲಿದ್ದೇವೆ~ ಎಂದು ಅವರು ತಿಳಿಸಿದರು.

ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸದಸ್ಯರಾದ ಮುನೀಂದ್ರ, ಡಿ.ಎಂ.ಮಹೇಶ್‌ಕುಮಾರ್, ಎ.ರವಿ, ಚಂದ್ರಶೇಖರ್, ಆನೆಮಡಗು ನರಸಿಂಹಮೂರ್ತಿ, ಅಂಬರೀಶ್, ನರಸಿಂಹ, ಮಣಿಕಂಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.