ಚಿಂತಾಮಣಿ: ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಚರಿಸುತ್ತಿರುವ ಕನ್ನಡ ತೇರು ಮಾರ್ಚ್ 8 ರಂದು ನಗರಕ್ಕೆ ಆಗಮಿಸಲಿದೆ.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾ.ಪಂ. ಅಧ್ಯಕ್ಷ ಶೇಖರ್‌ಬಾಬು ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ತೇರನ್ನು ಸ್ವಾಗತಿಸುವ ತೀರ್ಮಾನ ಕೈಗೊಳ್ಳಲಾಯಿತು.
ಮಾರ್ಚ್ 7ರಂದು ಸಂಜೆ ಶಿಡ್ಲಘಟ್ಟದಿಂದ ಆಗಮಿಸಲಿರುವ ಕನ್ನಡ ತೇರನ್ನು ತಿನಕಲ್ ಬಳಿ ಕಳಸಗಳೊಂದಿಗೆ ಸ್ವಾಗತಿಸಿದ ನಂತರ ಕೈವಾರಕ್ಕೆ ಕರೆದೊಯ್ಯಲಾಗುವುದು. ರಾತ್ರಿ ಕೈವಾರದಲ್ಲಿ ತಂಗಿದ್ದು, ಮಂಗಳವಾರ ಬೆಳಿಗ್ಗೆ ಚಿಂತಾಮಣಿಗೆ ಬರಲಿರುವ ತೇರಿಗೆ ಕನಂಪಲ್ಲಿಯ ಕಮಾನು ಬಳಿಯಲ್ಲಿ ಸ್ವಾಗತಿಸಲಾಗುವುದು.
ಪ್ರವಾಸಿ ಮಂದಿರದಿಂದ ವಿವಿಧ ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು. ಶಾಸಕ ಡಾ.ಎಂ.ಸಿ.ಸುಧಾಕರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಾಹಿತಿಗಳಾದ ಬಿ.ಆರ್.ಲಕ್ಷ್ಮಣರಾವ್, ಉತ್ತನೂರು ರಾಜಮ್ಮ, ಶಿವಪ್ರಸಾದ್, ಸಿ.ಬಿ.ಹನುಮಂತಪ್ಪ ಮುಂತಾದವರಿಗೆ ವಿಶೇಷ ಆಹ್ವಾನ ನೀಡಿ ಬರಮಾಡಿಕೊಳ್ಳಲು ನಿರ್ಣಯಿಸಲಾಯಿತು.
ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಸರ್ಕಾರಿ ಕಚೇರಿಗಳಿಗೆ ದೀಪಾಲಂಕಾರ ಮಾಡಬೇಕು. ಮೆರವಣಿಗೆಯಲ್ಲಿ ನಾದಸ್ವರ, ಹುಲಿ ವೇಷ, ವೀರಗಾಸೆ ಕುಣಿತ, ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ.
ತಾ.ಪಂ. ಸಿಇಓ ರಂಗನಾಥಸ್ವಾಮಿ, ಸಿಡಿಪಿಒ ಕಿರಣ್‌ಕುಮಾರ್, ಬಿಇಓ ಕೃಷ್ಣಮೂರ್ತಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕಾಳಪ್ಪ, ಜಾನಪದ ಕಲಾವಿದ ಮುನಿರೆಡ್ಡಿ, ಸಾಹಿತ್ಯ ಪರಿಷತ್ ಅಧ್ಯಕ್ಷ ಮುನಿಕೃಷ್ಣ, ನಾಗೇಂದ್ರಬಾಬು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.