ADVERTISEMENT

ಚಿಕ್ಕಬಳ್ಳಾಪುರ: ರೈಲ್ವೆ ಕಾಮಗಾರಿ ಚುರುಕು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 9:05 IST
Last Updated 4 ಮಾರ್ಚ್ 2012, 9:05 IST
ಚಿಕ್ಕಬಳ್ಳಾಪುರ: ರೈಲ್ವೆ ಕಾಮಗಾರಿ ಚುರುಕು
ಚಿಕ್ಕಬಳ್ಳಾಪುರ: ರೈಲ್ವೆ ಕಾಮಗಾರಿ ಚುರುಕು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಿಂದ ಕೋಲಾರದವರೆಗೆ ರೈಲು ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ನಗರದ ರೈಲು ನಿಲ್ದಾಣದ ಆವರಣದಲ್ಲಿ ಪ್ರದೇಶವನ್ನು ಸಮತಟ್ಟುಗೊಳಿಸುವುದು ಸೇರಿದಂತೆ ಇತರ ಕಾರ್ಯಗಳು ನಡೆಯುತ್ತಿವೆ. ತಾಲ್ಲೂಕಿನ ಪೂಜನಹಳ್ಳಿ ಗ್ರಾಮದಿಂದ ಅಜ್ಜವಾರ ಗ್ರಾಮದವರೆಗೆ ರೈಲ್ವೆ ಹಳಿಗಳನ್ನು ಅಳವಡಿಸುವ ಪ್ರಕ್ರಿಯೆಯಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.

ನಿಲ್ದಾಣದ ಆವರಣದಲ್ಲಿ ಆವರಿಸಿಕೊಂಡಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದ್ದು, ಪ್ರದೇಶವನ್ನು ಸಮತಟ್ಟುಗೊಳಿಸಲಾಗುತ್ತಿದೆ. ಬುಲ್ಡೋಜರ್, ಕ್ರೇನ್ ಮತ್ತು ಇತರ ಸಾಧನಗಳ ನೆರವಿನಿಂದ ಪ್ರದೇಶವನ್ನು ಸಮತಟ್ಟುಗೊಳಿಸಲಾಗುತ್ತಿದ್ದು, ಗುಲ್ಬರ್ಗಾ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಕಾರ್ಮಿಕರು ಕಾರ್ಯನಿರತರಾಗಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ನಿಲ್ದಾಣಕ್ಕೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಕ್ಟೋಬರ್ ವೇಳೆಗೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ನಡುವೆ ರೈಲು ಸಂಪರ್ಕ ಕಲ್ಪಿಸಲಾಗುವುದು. ಪುಟ್ಟಪರ್ತಿವರೆಗೆ ರೈಲು ಸಂಪರ್ಕವನ್ನು ವಿಸ್ತರಿಸುವುದಾಗಿ ಭರವಸೆಯನ್ನೂ ನೀಡಿದ್ದರು.

`ನಿರಂತರ ಹೋರಾಟ ಮಾಡಿದ್ದರ ಫಲವಾಗಿ ರೈಲ್ವೆ ಕಾಮಗಾರಿ ಆರಂಭವಾಗಿದೆ. ರೈಲು ನಿಲ್ದಾಣವನ್ನು ಅತ್ಯಾಧುನಿಕ ಮಾದರಿಯಲ್ಲಿ ನವೀಕರಣ ಮಾಡಲು ಸಹ ಕ್ರಮ ಕೈಗೊಳ್ಳಲಾಗಿದೆ. ರೈಲ್ವೆ ಕಾಮಗಾರಿ ಮುಂದುವರೆಸುವುದರ ಜೊತೆಗೆ ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದರೆ ಅನುಕೂಲವಾಗುತ್ತದೆ.
 
ಇದರ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಕೂಡ ಸಲ್ಲಿಸಲಾಗಿದೆ~ ಎಂದು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.

`ನಿಲ್ದಾಣದಲ್ಲಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನೂತನ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ ಟಿಕೆಟ್ ವಿತರಿಸಲು ಒಂದೇ ಕೌಂಟರ್‌ವಿದ್ದು, ಜನದಟ್ಟಣೆಯಿಂದ ಬಹುತೇಕ ಸಂದರ್ಭದಲ್ಲಿ ಟಿಕೆಟ್ ಕೊಳ್ಳಲು ಸಾಧ್ಯವಾಗುವುದಿಲ್ಲ.ಹೆಚ್ಚುವರಿ ಟಿಕೆಟ್ ಕೌಂಟರ್ ಸೌಲಭ್ಯ ಒದಗಿಸಬೇಕು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.