ADVERTISEMENT

ಚಿತ್ರಕಲಾ ಶಿಕ್ಷಕನ ಕೈಚಳಕ: ವರ್ಲಿ ಚಿತ್ರಕಲೆಯಲ್ಲಿ ಅರಳಿರುವ ಶಾಲೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2014, 10:08 IST
Last Updated 11 ಫೆಬ್ರುವರಿ 2014, 10:08 IST
ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಗೋಡೆಯ ಮೇಲೆ ವರ್ಲಿ ಚಿತ್ರಕಲೆಯಲ್ಲಿ ಗ್ರಾಮೀಣ ಸೊಗಡಿನ ನೋಟ ಮತ್ತು ಕಲಾವಿದ ನಾಗರಾಜ್‌.
ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಗೋಡೆಯ ಮೇಲೆ ವರ್ಲಿ ಚಿತ್ರಕಲೆಯಲ್ಲಿ ಗ್ರಾಮೀಣ ಸೊಗಡಿನ ನೋಟ ಮತ್ತು ಕಲಾವಿದ ನಾಗರಾಜ್‌.   

ಶಿಡ್ಲಘಟ್ಟ: ಒಂದಿಷ್ಟು ತ್ರಿಭುಜ, ಕೆಲವು ವೃತ್ತ. ಹಾಗೆಯೇ ಕೆಲವು ರೇಖೆ­ಗಳು.. ಇವಿಷ್ಟನ್ನು ಒಂದು ಹದದಲ್ಲಿ ಬೆರೆಸಿ­ದಾಗ ಕಣ್ಣ ಮುಂದೆ ಕೆಲವು ಜನರು ನಿಮ್ಮ ಮುಂದೆ ತಮ್ಮ ದಿನ ನಿತ್ಯದ ಚಟು­ವಟಿಕೆಗಳಲ್ಲಿ ತೊಡಗುವುದು ಕಂಡು­ಬರುತ್ತದೆ.

ರೈತ ನೆಲವನ್ನು ಉಳುತ್ತಾನೆ. ಮಕ್ಕಳು ಆಟವಾಡುತ್ತಿರುತ್ತಾರೆ. ಒಂದೆಡೆ ಗುಡಿ­ಸಲಿನ ಮುಂದೆ ರಾಗಿ ಬೀಸುತ್ತಿದ್ದರೆ, ಮತ್ತೊಂದೆಡೆ ಹೊಲ ಉಳುತ್ತಿರುತ್ತಾರೆ. ಇಷ್ಟೆಲ್ಲ ಬಿಡಿಬಿಡಿಯಾಗಿ ನೋಡುವ ಹೊತ್ತಿಗೆ  ನಮ್ಮ ಮುಂದೆ ಸುಂದರ ದೃಶ್ಯ ಕಾವ್ಯ ಪ್ರಕಟವಾಗುತ್ತದೆ. ಗ್ರಾಮೀಣ ಜೀವನ ಕಣ್ಣ ಮುಂದೆ ಮೂಡಿ ಬರುತ್ತದೆ. ಸರಳವೂ ಮನಮೋಹಕವೂ ಆದ ಈ ಚಿತ್ತಾರಗಳ ಹೆಸರು ವರ್ಲಿ ಚಿತ್ರಗಳು.

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮೇಲೆ ಈ ಚಿತ್ರಗಳು ರಾರಾಜಿಸುತ್ತಿವೆ. ಸರ್ಕಾರಿ ಶಾಲೆಗಳು ನಿಯಮಪಾಲನೆಗಾಗಿ ಕೆಟ್ಟದಾಗಿ ಬಿಡಿಸಿದ ಚಿತ್ರಗಳಿಂದ ವಿಕಾರವಾಗಿ ಕಾಣುತ್ತದೆಂಬ ಮಾತುಗಳು ಕೇಳಿ
ಬರು­ತ್ತಿರುತ್ತವೆ. ಅಂಥದ್ದರಲ್ಲಿ ಕಲಾಪ್ರಕಾರ­ವನ್ನು ಶಾಲಾ ಗೋಡೆಗಳ ಮೇಲೆ ಬಿಂಬಿಸುವುದರೊಂದಿಗೆ ಅತ್ತ ಶಾಲೆಗೂ ಅಂದ, ಇತ್ತ ವಿದ್ಯಾರ್ಥಿಗಳಿಗೂ ಕಲೆಯ ಬಗ್ಗೆ ಅವಗಾಹನೆ ಮೂಡಿಸುತ್ತಿದ್ದಾರೆ ಶಿಕ್ಷಕರು.

ಈ ಕಲೆಯನ್ನು ಚಿತ್ರಿಸಿದವರೂ ಶಿಕ್ಷಕರೇ ಆಗಿರುವುದು ವಿಶೇಷ. ಚಿಕ್ಕ­ಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್‌ ಅವರು ಈ ಚಿತ್ರಗಳನ್ನು ಬಿಡಿಸಿದ್ದಾರೆ. ಹಣವನ್ನು ಬಯಸದೆ ಕೇವಲ ತಮ್ಮ ಸ್ನೇಹಿತರಾದ ಚೀಮಂಗಲದ ಶಿಕ್ಷಕರ ಒತ್ತಾಸೆಯಿಂದ ಈ ಚಿತ್ರಗಳನ್ನು ಬಿಡಿಸಿದ ಅವರನ್ನು ಶಾಲೆಯವರು ಗೌರವಿಸಿದ್ದಾರೆ.

ವರ್ಲಿ ಚಿತ್ರಗಳು ಹೆಸರೇ ಸೂಚಿಸು­ವಂತೆ  ಮಹಾರಾಷ್ಟ್ರದ ವರ್ಲಿ ಬುಡ­ಕಟ್ಟು ಜನಾಂಗದವರು ತಮ್ಮ ಗುಡಿ­ಸಲುಗಳ ಮೇಲೆ ಬಿಡಿಸುವ ಚಿತ್ರಗಳು. ಸಾಂಪ್ರದಾಯಿಕ ರೀತಿಯಲ್ಲಿ ಅವರು ಸೆಗಣಿ, ಕೆಮ್ಮಣ್ಣಿನ ಹಿನ್ನೆಲೆಗೆ ಅಕ್ಕಿಯ ಹಿಟ್ಟಿನಲ್ಲಿ ಅದ್ದಿದ ಕುಂಚದಿಂದ ಇವುಗಳನ್ನು ಬಿಡಿಸುತ್ತಾರೆ.

ಈ ಜನರು ಬಹಳ ಸರಳವಾದ ಜೀವನವನ್ನು ನಡೆಸುತ್ತಾರೆ. ಅವರು ಪ್ರಕೃತಿ ಆರಾಧಕರು. ಅವರ ಚಿತ್ರ­ಗಳಲ್ಲಿನ ತ್ರಿಕೋನಗಳಿಗೆ ಬೆಟ್ಟ ಗುಡ್ಡಗಳೇ ಪ್ರೇರಣೆ. ವೃತ್ತಗಳು ಸೂರ್ಯ– ಚಂದ್ರ­ನಿಂದ ಪ್ರಭಾವಿತ­ವಾದ ಆಕೃತಿಗಳು. ಸಾಮಾನ್ಯವಾಗಿ ಕೃಷಿ ಇವರ ಪ್ರಮುಖ ಉದ್ಯೋಗ.

ಚಿತ್ರಗಳಲ್ಲಿ ಕೃಷಿಯ ಹಲವು ಹಂತ­ಗಳಾದ ಬಿತ್ತುವಿಕೆ, ಫಸಲಿನ ಕೊಯಿಲು ಇತ್ಯಾದಿಗಳನ್ನು ಹೇರಳವಾಗಿ ಕಾಣ­ಬಹುದು. ಬೇಟೆ, ಹಬ್ಬದ ಆಚರಣೆ­ಗಳು, ಪ್ರಕೃತಿ, ನೃತ್ಯ, ವಿನೋದ ಮುಂತಾದ ಚಿತ್ತಾರಗಳೂ ಕಾಣಬರು­ತ್ತವೆ.

ಸೆಗಣಿ ಅಥವಾ ಕೆಮ್ಮಣ್ಣಿನ ಹಿನ್ನೆಲೆಗೆ ಬದಲಾಗಿ ಆ ಬಣ್ಣದ ಪೇಂಟುಗಳು ಬಳಕೆಯಾಗುತ್ತಿವೆ. ಅಕ್ಕಿ ಹಿಟ್ಟಿಗೆ ಬದಲಾಗಿ ಬಿಳಿಯ ಅಕ್ರಲಿಕ್ ವರ್ಣಗಳ ಬಳಕೆಯಾಗುತ್ತಿದೆ.

‘ಮಕ್ಕಳಿಗೂ ಇಂಥ ಕಲೆಯ ಬಗ್ಗೆ ತಿಳುವಳಿಕೆ ನೀಡಬೇಕು. ಮಕ್ಕಳು ಕಲೆಯ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳಲಿ ಎಂಬ ಆಸೆಯಿಂದ ನಾವು ಚಿತ್ರಕಲಾ ಶಿಕ್ಷಕ ನಾಗರಾಜ್‌ ಅವರನ್ನು ಕೇಳಿದೆವು. ಯಾವ ಫಲಾಪೇಕ್ಷೆ­ಯಿಲ್ಲದೆ ಅವರು ಚಿತ್ರಗಳನ್ನು ಬಿಡಿಸಿ­ಕೊಟ್ಟಿದ್ದಾರೆ’ ಎಂದು ಚೀಮಂಗಲ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್‌.ಶಿವಶಂಕರ್‌
ತಿಳಿಸಿ­ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.