ADVERTISEMENT

ಜಾಗತೀಕರಣದಿಂದ ಕೃಷಿ ಸಂಸ್ಕೃತಿಗೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 8:30 IST
Last Updated 17 ಜನವರಿ 2011, 8:30 IST

ಬಾಗೇಪಲ್ಲಿ: ಜಾಗತೀಕರಣ ಮತ್ತು ಖಾಸಗೀಕರಣದ ದುಷ್ಪರಿಣಾಮದಿಂದ ದೇಶದ ಸಾಂಸ್ಕೃತಿಕ ಚೌಕಟ್ಟು ಮತ್ತು ಸಂಪ್ರದಾಯಕ್ಕೆ ಧಕ್ಕೆಯಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಎತ್ತುಗಳನ್ನು ಶೃಂಗರಿಸಿಬೇಕಿದ್ದ ರೈತರು ಅವೇ ಎತ್ತುಗಳನ್ನು ಮಾರುವ ಸ್ಥಿತಿಗೆ ತಲುಪಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕಾನಾಥ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಶಾಲೆ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ಸಂಕ್ರಾಂತಿ ಸಂಭ್ರಮ-2011’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ತಾವೇ ಬೆಳೆದ ಬೆಳೆಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ’ ಎಂದರು.

ಬೆಳೆ ಹಾನಿ, ಸಾಲ ಮುಂತಾದವುಗಳಿಂದ ತೊಂದರೆಗೆ ಸಿಲುಕಿರುವ ರೈತ ತನ್ನ ಕೃಷಿ ಜಮೀನು ಮಾರಬೇಕಾದ ಸ್ಥಿತಿ ಬಂದಿದೆ. ಹಬ್ಬವನ್ನು ಸಂತಸ-ಸಂಭ್ರಮದಲ್ಲಿ ಆಚರಿಸಲಾಗದೇ ನಿರಾಶಾಭಾವ ರೈತರಲ್ಲಿ ಮೂಡಿದೆ. ಸಂಕಷ್ಟ-ಸಮಸ್ಯೆಗಳು ಬೇಗನೇ ಕೊನೆಗೊಂಡು ರೈತರ ಮೊಗದಲ್ಲಿ ಸಂತೋಷ ಮೂಡಲಿ’ ಎಂದು ಹಾರೈಸಿದರು.

ಅತಿ ಹಿಂದುಳಿದ ಹಾಗೂ ಗಡಿ ಪ್ರದೇಶವಾದ ತಾಲ್ಲೂಕಿನಲ್ಲಿ ಸಾಮಾಜಿಕ ಕಳಕಳಿ ಇಟ್ಟುಕೊಂಡು ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮ ಪಾಲ್ಗೊಳ್ಳುವ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದು ಸಂತಸದ ವಿಷಯ. ಬೃಹತ್ ವೇದಿಕೆ, ಆಸನ ವ್ಯವಸ್ಥೆ, ಸನ್ಮಾನ ಮುಂತಾದವುಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಸಮಾಜ ಸೇವಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಮುಂದಿನ ಮೇ ತಿಂಗಳಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಂಪತಿಗಳಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಹಸುವನ್ನು ದಾನದ ರೂಪದಲ್ಲಿ ನೀಡಲಾಗುವುದು’ ಎಂದರು.

‘ಸಂಕ್ರಾತಿ ಹಬ್ಬವೆಂದರೆ ಎಳ್ಳು-ಬೆಲ್ಲದ ಹಬ್ಬ. ಎಳ್ಳು ಬೆಲ್ಲದ ಸವಿಯಲ್ಲಿ ನಿಜವಾದ ಸಂಭ್ರಮವಿದೆ. ಎಳ್ಳು ಸ್ನೇಹದ ಪ್ರತೀಕವಾದರೆ. ಬೆಲ್ಲ-ಸಿಹಿ ಪ್ರೀತಿ ವಿಶ್ವಾಸದ ಪ್ರತೀಕ. ಇಂತಹ ಪ್ರೀತಿ ವಿಶ್ವಾಸಗಳ ಸದಾ ಮುಂದುವರೆಯಬೇಕು. ಭಾರತ ದೇಶ ಹಬ್ಬಗಳ ತವರೂರು. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆಯಿದೆ. ದೀಪಾವಳಿ ಕತ್ತಲಿನಿಂದ ಬೆಳಕಿನ ಕಡೆಗೆ ಮಾರ್ಗ ತೋರಿಸಿದರೆ, ವಿಜಯದಶಮಿ ದುಷ್ಟರ ವಿರುದ್ಧ ಶಿಷ್ಟರಿಗೆ ಉತ್ತಮರಿಗೆ ದೊರೆತ ವಿಜಯದ ಸಂಕೇತವಾಗಿದೆ. ಹಾಗೆಯೇ ಸಂಕ್ರಾಂತಿ ಸುಗ್ಗಿ ಹಬ್ಬದ ಪ್ರತೀಕವಾಗಿದೆ’ ಎಂದು ಅವರು ತಿಳಿಸಿದರು.

ದೇಶದ ಬಹುತೇಕ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ‘ಪೊಂಗಲ್’, ಪಂಜಾಬ್-ಹರಿಯಾಣದಲ್ಲಿ ‘ಲೋಹರಿ’ ಎಂಬ ಹೆಸರಿನಲ್ಲಿ ಹಬ್ಬ ಆಚರಿಸುತ್ತಾರೆ.ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಮಳೆ ಬೆಳೆ ಪಡೆದ ರೈತರು ಖುಷಿಯಿಂದ ಎತ್ತು ಪೂಜೆ ಮಾಡಿ, ಕಣಜ ಮನೆ ತುಂಬಿಕೊಳ್ಳುವುದು ಸಂಕ್ರಾಂತಿ ಹಬ್ಬದ ವಿಶೇಷ’ ಎಂದು ಅವರು ಹೇಳಿದರು.

ತಹಶೀಲ್ದಾರ್ ಟಿ.ಎ.ಹನುಮಂತರಾಯ, ಬೆಂಗಳೂರಿನ ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿ ಎಂ.ವಿ.ಚನ್ನಕೇಶವರೆಡ್ಡಿ, ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಎಸ್.ಭಾರತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿ ಎಂ.ವಿ.ಚನ್ನಕೇಶವರೆಡ್ಡಿ, ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಎ.ಸೋಮಶೇಖರ್, ಎಂ.ಜಯರಾಂ, ಸಾಹಿತಿ ಚಾಕವೇಲು ಟಿ.ಎಸ್.ನಾಗರಾಜಶೆಟ್ಟಿ ಅವರಿಗೆ ಸಂಕ್ರಾಂತಿ ಸಂಭ್ರಮ-2011  ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸತ್ಕರಿಸಲಾಯಿತು. ಜಾನಪದ ಜೋಗಿ ಜೋಗಿಲ ಸಿದ್ದರಾಜು-ವಾಯ್ಸಾ ಆಫ್ ಕರ್ನಾಟಕ ಯಾಮಿನಿ ತಂಡದವರಿಂದ ಹಾಡು ಮತ್ತು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.ಬಾನಂಗಳದಲ್ಲಿ ಬೆಳಕಿನ ಚಿತ್ತಾರ-ಬಾಣ ಬಿರುಸುಗಳ ಪ್ರದರ್ಶನ ಹಾಗೂ ಮೈಸೂರು ನಗಾರಿ ಮೇಳ ಎಲ್ಲರ ಗಮನ ಸೆಳೆಯಿತು. ಸಂಚಾಲಕ ಎ.ಜಿ.ಸುಧಾಕರ್, ಬಿಳ್ಳೂರು ಆಂಜನೇಯ ಸ್ವಾಮಿ ಟ್ರಸ್ಟ್ ಕೆ.ಎಂ.ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.