ADVERTISEMENT

ಜಿಲ್ಲೆಗೆ ವೈದ್ಯಕೀಯ ಕಾಲೇಜಿನ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:50 IST
Last Updated 20 ಸೆಪ್ಟೆಂಬರ್ 2013, 8:50 IST

ಚಿಕ್ಕಬಳ್ಳಾಪುರ:  ನಗರದ ಹೊಸ ಬಸ್‌ ನಿಲ್ದಾಣದ ಸ್ಥಳದಲ್ಲಿ ನಿರ್ಮಾಣ ಹಂತ­ದಲ್ಲಿರುವ ಜಿಲ್ಲಾ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯವನ್ನು 250 ರಿಂದ 300ಕ್ಕೆ ಏರಿಸಿ, ಜಿಲ್ಲೆಗೊಂದು ಪ್ರತ್ಯೇಕ ವೈದ್ಯ­ಕೀಯ ಕಾಲೇಜು ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸ­ಲಾಗು­ವುದು. ಜಿಲ್ಲೆಯ ಜನರಿಗೆ ಅತ್ಯುತ್ತಮ ಚಿಕಿತ್ಸೆ ದೊರೆಯವಂತೆ ಮಾಡಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಜನಸಂಖ್ಯೆ ಹೊಂದಿ­ರುವ ಜಿಲ್ಲೆಯಲ್ಲಿ ಪ್ರತ್ಯೇಕ ವೈದ್ಯಕೀಯ ಕಾಲೇಜು ಬೇಕೆಂಬ ಬೇಡಿಕೆಗಳಿವೆ, ಇದರ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದರು.

ಚಿಕ್ಕಬಳ್ಳಾಪುರದ ಕಂದವಾರ­ದಲ್ಲಿ­ರುವ ಶುಶ್ರೂಷಕಿಯರ ತರಬೇತಿ ಕೇಂದ್ರ­ವನ್ನು ಮಕ್ಕಳ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲು ಆಲೋಚಿಸ­ಲಾಗು­ವುದು. ಪೆರೇಸಂದ್ರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಚಿಂತಾಮಣಿ­ಯಲ್ಲೂ ಸಹ ಮಕ್ಕಳ ಆರೋಗ್ಯ ಕೇಂದ್ರವನ್ನೂ ಸ್ಥಾಪಿಸುವ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ, ಶೀಘ್ರವೇ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಲ್ಲದೇ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಹ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳಲು ಮತ್ತು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಕಲ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದು ಅವರು ತಿಳಿಸಿದರು.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಮತ್ತು ಸೌಕರ್ಯಗಳ ಕೊರತೆಗೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಗೆ ಪದೇ ಪದೇ ಗೈರುಹಾಜರಾಗುವ, ಸರ್ಕಾರಿ ಬದಲು ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ, ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವ, ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರುವ ಸಿಬ್ಬಂದಿಗಳ ಮೇಲೆ ನಿಗಾ ವಹಿಸಲಾಗುವುದು. ಅವರ ತಪ್ಪು ಸಾಬೀತಾದಲ್ಲಿ, ಶಿಸ್ತು ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಅವರು ತಿಳಿಸಿದರು.

ಶಾಸಕ ಡಾ. ಕೆ.ಸುಧಾಕರ್‌ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಔಷಧಿಗಳ ಪಟ್ಟಿ ಪ್ರದರ್ಶಿಸಬೇಕು, ಡಯಾಲಿಸಿಸ್‌ ಘಟಕದಲ್ಲಿ ತಜ್ಞ ಸಿಬ್ಬಂದಿಯನ್ನು ನಿಯೋಜಿಸಬೇಕು, ತಜ್ಞ ವೈದರನ್ನು ಶೀಘ್ರವೇ ನೇಮಿಸಬೇಕು, ಪೆರೇಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಕಾಂಪೌಂಡ್‌ ನಿರ್ಮಿಸಬೇಕು, ಡೆಂಗೆಯಂತಹ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ತಡೆಗಟ್ಟಬೇಕು, ಆಂಬುಲೆನ್ಸ್‌ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬೇಕು ಎಂದು ಮನವಿ  ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ ಅವರು ಜಿಲ್ಲೆಯ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಗತಿ ಬಗ್ಗೆ ವಿವರಣೆ ನೀಡಿದರೆ, ಜಿಲ್ಲಾ ಸರ್ಜನ್‌ ಡಾ. ಮಂಜುಳಾ ಅವರು ಜಿಲ್ಲಾ ಆಸ್ಪತ್ರೆಯಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಾಲ್ಲೂಕುಗಳಲ್ಲಿನ ಸ್ಥಿತಿಗತಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.