ADVERTISEMENT

ಜೀತಮುಕ್ತರಿಗೆ ಪುನರ್ವಸತಿ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 9:45 IST
Last Updated 2 ಜುಲೈ 2012, 9:45 IST

ಗೌರಿಬಿದನೂರು: ಜೀತದಾಳುಗಳಾಗಿ ದುಡಿಯುತ್ತಿದ್ದು ನಂತರ ಸ್ವಾತಂತ್ರ್ಯ ಪಡೆದ ಜೀತ ವಿಮುಕ್ತರಿಗೆ ಶೀಘ್ರ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಜೀತ ವಿಮುಕ್ತಿ ಕರ್ನಾಟಕ ಸಂಘದ ಸದಸ್ಯರು ಶನಿವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಪಂಚಾಯಿತಿ ಎದುರು ಪ್ರತಿ ಭಟಿಸಿದರು.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 9 ಮಂದಿ ಜೀತ ವಿಮುಕ್ತರಿಗೆ ಮಾತ್ರ ಬಿಡುಗಡೆಯ ಪತ್ರ ನೀಡಿ ತಲಾ ರೂ.20 ಸಾವಿರ ಪರಿಹಾರ ನೀಡಲಾಗಿದೆ. ತಾಲ್ಲೂಕಿನಲ್ಲಿರುವ 100 ಮಂದಿ  ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಿಲ್ಲ. ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಜೀತದಾಳುಗಳು ಮತ್ತೆ ಜೀತಕ್ಕೆ ಹೋಗುವ ಪ್ರಸಂಗ ಎದುರಾಗಿದೆ ಎಂದು ಟೀಕಿಸಿದರು.

ರಾಜ್ಯದ ಎಲ್ಲ ಜೀತ ವಿಮುಕ್ತರೂ ದಲಿತರೇ ಆಗಿದ್ದಾರೆ. ಅವರಿಗೆ ಸೌಲಭ್ಯ ಒದಗಿಸಲು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಗುತ್ತಿಗೆದಾರರ ಪಾಲಾಗಿವೆ. ಕೂಲಿ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಜೀತದಾಳು ಕುಟುಂಬಕ್ಕೆ 2 ಎಕರೆ ಭೂಮಿ ಕೊಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಜೀತವಿಮುಕ್ತರಿಗೆ 100 ದಿನದ ಕೆಲಸ, ರೂ.50ಸಾವಿರ ಸಹಾಯಧನ, ಮಹಿಳಾ ಉಳಿತಾಯ ಗುಂಪುಗಳಿಗೆ ಸಾಲ ಸೌಲಭ್ಯ, ಜೀತ ವಿಮುಕ್ತರಿಗೆ ನಿವೇಶನ ನೀಡಿ ಮನೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜೀವಿಕ ರಾಜ್ಯ ಸಂಘಟನಾ ಸಂಚಾಲಕ ವಿ.ಗೋಪಾಲ್, ಜಿಲ್ಲಾ ಸಂಚಾಲಕ ಹನುಮಂತು, ಮುಖಂಡರಾದ ರತ್ನಮ್ಮ, ನಾರಾಯಣಸ್ವಾಮಿ, ರವಿಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.