ADVERTISEMENT

ಟೊಮೆಟೊ ಬೆಲೆ ಏರುಮುಖ: ಬೆಳೆಗಾರರಿಗೆ ಸಂತಸ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 10:53 IST
Last Updated 4 ಜುಲೈ 2017, 10:53 IST
ಚಿಂತಾಮಣಿ ಮಾರುಕಟ್ಟೆಯಲ್ಲಿ ಟೊಮೆಟೊ
ಚಿಂತಾಮಣಿ ಮಾರುಕಟ್ಟೆಯಲ್ಲಿ ಟೊಮೆಟೊ   

ಚಿಂತಾಮಣಿ: ಮಾರುಕಟ್ಟೆಗೆ ಟೊಮೆಟೊ ಆವಕ ಕಡಿಮೆಯಾಗಿ ಬೆಲೆ ಏರು ಮುಖವಾಗಿದ್ದು,  ಬೆಳೆಗಾರರಿಗೆ ಲಾಟರಿ ಹೊಡೆಯುತ್ತಿದೆ. ನಗರದ ಎಪಿಎಂಸಿ ಯಲ್ಲಿ 15 ಕೆ.ಜಿ ಬಾಕ್ಸ್‌ಗೆ ₹ 800–900 ವರೆಗೂ ಮಾರಾಟವಾಗುತ್ತಿದೆ. ಬೆಳೆಗಾರರಿಗೆ ಸಂತಸವಾದರೆ, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಗ್ರಾಹಕರು 1 ಕೆ.ಜಿ ₹ 50–60 ತೆರಬೇಕಾಗಿದೆ. ಹುಳಿಯಾದ ಟೊಮೆಟೊ ಕಹಿಯಾಗುತ್ತಿದೆ. ಜನರು ಹುಣಸೆ ಹಣ್ಣಿನ ಕಡೆ ನೋಡತೊಡಗಿದ್ದಾರೆ.

ನಗರದ ಎಪಿಎಂಸಿ ಯಲ್ಲಿ ದಿನಕ್ಕೆ 40–50 ಲಾರಿ ಲೋಡ್‌ಗಳಷ್ಟು ಆವಕವಾಗುತ್ತಿದ್ದ ಟೊಮೆಟೊ 15–20 ಲಾರಿ ಲೋಡ್‌ಗಳಿಗೆ ಇಳಿದಿದೆ. ಸಾಮಾನ್ಯವಾಗಿ ಜುಲೈ, ಆಗಸ್ಟ್‌ನಲ್ಲಿ ಬೆಲೆ ಏರಿಕೆಯಾಗುತ್ತಿತ್ತು. ಬೆಳೆ ವೈರಸ್‌ ಆಗಿ ಇಳುವರಿ ಕಡಿಮೆಯಾಗಿರುವುದು ಬೆಲೆ ಏರಿಕೆ ಕಾರಣವಾಗಿದೆ ಎಂದು ಬೆಳೆಗಾರರು ಅಭಿಪ್ರಾಯಪಡುತ್ತಾರೆ.

‘ನಗರದ ಎಪಿಎಂಸಿ ಮಾರುಕಟ್ಟೆಯಿಂದ ಹೈದರಾಬಾದ್‌, ಕೋಲ್ಕತ್ತ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಉತ್ತರ ಭಾರತದ ಕಡೆಗೆ ರವಾನೆಯಾಗುತ್ತದೆ. ಮಾರುಕಟ್ಟೆಯಲ್ಲಿ ರೈತರ ಶೋಷಣೆಯಂತೂ ಮುಂದುವರಿದಿದೆ. ಸಾಕಷ್ಟು ಹೋರಾಟಗಳು, ಪ್ರತಿಭಟನೆಗಳು ನಡೆದಿದ್ದರೂ ಶೇ 10 ಕಮೀಷನ್‌ ಪಡೆಯುವುದು ಮುಂದುವರಿದಿದೆ. ನಿಗದಿಯಾದ ರಸೀದಿ ನೀಡದೆ ಬಿಳಿಯ ಕಾಗದದಲ್ಲಿ ಬರೆದುಕೊಟ್ಟು ಶೇ 10 ಕಮೀಷನ್‌ ಪಡೆಯುತ್ತಾರೆ’ ಎಂದು ಬೆಳೆಗಾರ ಮುನಿರಾಜು ಆರೋಪಿಸಿದರು.

ADVERTISEMENT

‘ಟೊಮೆಟೊ ಬೆಲೆ ಕುಸಿತದಿಂದಾಗಿ ರೈತರು ಈರುಳ್ಳಿಯ ಕಡೆಗೆ ಗಮನ ಹರಿಸಿದ್ದರಿಂದ ಟೊಮೆಟೊ ಬೆಳೆಯುವವರ ಸಂಖ್ಯೆ ಮತ್ತು ಭೂಮಿಯ ವಿಸ್ತಾರವೂ ಕಡಿಮೆಯಾಗಿದೆ. ಮೇ ಕೊನೆಯ ವಾರದಲ್ಲಿ  ಸುರಿದ ಮಳೆಯಿಂದಾಗಿ ಗಿಡಗಳು ನಾಶವಾಗಿ ಇಳುವರಿ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಇನ್ನೊಂದು ಕಾರಣವಾಗಿದೆ’ ಎಂದು ರೈತ ಬುಕ್ಕನಹಳ್ಳಿಯ ವೆಂಕಟರಮಣಾರೆಡ್ಡಿ  ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯವಾಗಿ ವರ್ಷದ ಮೂರು ಋತುಗಳಲ್ಲಿ ಟೊಮೆಟೊ  ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ 300 ಹೆಕ್ಟೇರ್‌, ಮಳೆಗಾಲದಲ್ಲಿ 220 ಹೆಕ್ಟೇರ್‌ ಹಾಗೂ ಚಳಿಗಾಲದ ಬೆಳೆಯಯಾಗಿ 200 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಾರೆ ಎಂದು ತೋಟಗಾರಿಕೆ ಇಲಾಖೆಯು ಮಾಹಿತಿ ನೀಡಿದೆ.

‘ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ತಾಲ್ಲೂಕಿನಲ್ಲಿ ಸುಮಾರು 300 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆ ಇದೆ. ಉಷ್ಣಾಂಶ 2–3 ಪಟ್ಟು ಅಧಿಕವಾಗಿದ್ದರಿಂದ ನಾಟಿ ಮಾಡಿದ ಸಸಿಗಳು ಸತ್ತುಹೋದವು. ಹೀಗಾಗಿ ಇಳುವರಿ ತೀವ್ರವಾಗಿ ಕುಸಿದಿದೆ. ಇದರಿಂದಾಗಿ ಬೆಲೆ ಏರಿಕೆಯಾಗಿದೆ’ ಎಂಬುದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಪ್ರಸಾದ್‌ ಅವರ ಅಭಿಪ್ರಾಯ.

ಎಪಿಎಂಸಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಯನ್ನು ನಿವಾರಿಸಬೇಕು. ರೈತರಿಂದ ಕಮೀಷನ್‌ ಪಡೆಯುವುದನ್ನು ನಿಲ್ಲಿಸಬೇಕು. ಪಾರದರ್ಶಕವಾದ ಹರಾಜು ಹಾಗೂ ತೂಕದ ವ್ಯವಸ್ಥೆ ಮಾಡಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.

₹1100 ತಲುಪುವ ಸಂಭವ
ಮಹಾರಾಷ್ಟ್ರದ ನಾಸಿಕ್‌ ಕಡೆ ಈ ಋತುವಿನಲ್ಲಿ ಫಸಲು ಇರುವುದಿಲ್ಲ. ಆ ಕಡೆಗೆ ಹೆಚ್ಚು ಬೇಡಿಕೆ ಇದೆ. ಸ್ಥಳೀಯವಾಗಿ ಟೊಮೆಟೊ ಬೆಳೆಗೆ ವೈರಸ್‌ ಆಗಿ  ನಾಶವಾಗಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ. ಇನ್ನೂ ಏರಿಕೆಯಾಗಿ ಬಾಕ್ಸ್‌ ₹ 1,000– 1100 ತಲುಪುವ ಸಂಭವವಿದೆ.
–ಕೃಷ್ಣಪ್ಪ, ಟಮೆಟೊ ವ್ಯಾಪಾರಿ

* * 

ಉತ್ತಮವಾಗಿ ಬೆಳೆಯಾಗಿಲ್ಲ. ಇಳುವರಿಯೂ ಕಡಿಮೆಯಾಗಿದೆ. ಫಸಲು ಇಲ್ಲದಿರುವುದರಿಂದ ಬೆಲೆ ಏರಿಕೆಯಾಗುತ್ತಿದ್ದರೂ ಹೆಚ್ಚಿನ ರೈತರಿಗೆ ಲಾಭವಾಗುವುದಿಲ್ಲ.
–ಮುನಿಯಪ್ಪ, ಟೊಮೆಟೊ ಬೆಳೆಗಾರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.