ADVERTISEMENT

ತಿಂಗಳಲ್ಲೇ ಕಾಲೇಜಿಗೆ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 8:50 IST
Last Updated 11 ಅಕ್ಟೋಬರ್ 2012, 8:50 IST

ಶಿಡ್ಲಘಟ್ಟ: ಒಂದೆಡೆ ಬೆಳೆದಿರುವ ಹುಲ್ಲಿನ ಪೈರುಗಳು ಗದ್ದೆಯನ್ನು ನೆನಪಿಸಿದರೆ, ಇನ್ನೊಂದೆಡೆ ಬೀಡಾಡಿ ನಾಯಿಗಳ ಹಿಂಡು ಮಲಗಿರುವುದನ್ನು ಕಂಡಾಗ ಇದು ನಿರ್ಜನ ಪ್ರದೇಶವೆಂಬಂತೆ ಭಾಸವಾಗುತ್ತದೆ. ಆದರೆ ಇದು ಕೇವಲ ಎರಡು ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂದಿನ ದುಃಸ್ಥಿತಿ.

`ನೂತನ ಕಟ್ಟಡವಿದು ಇದರ ಮುಂದೆ ಹೀಗೆ ನೀರು ನಿಂತರೆ ಕಟ್ಟಡಕ್ಕೆ ಹಾನಿಯಲ್ಲವೇ ? ವಿದ್ಯೆ ಕಲಿಯುವ ಸ್ಥಳದಲ್ಲಿ ನಾಯಿಗಳು ಬಂದು ಮಲಗುವ ಹಾಗಾದರೆ ಹೇಗೆ ? ನೀರಿನ ಸಂಪನ್ನು ಮಣ್ಣು ತುಂಬಿ ಮುಚ್ಚಿರುವುದರ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ~ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ.

`ಮೂಲಸೌಕರ್ಯಗಳನ್ನು ಒದಗಿಸದೇ ಮತ್ತು ಪರಿಶೀಲಿಸದೇ ತರಾತುರಿಯಲ್ಲಿ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ. ಮಳೆ ಬಂದರೆ ನಾವು ನೀರು ನಿಂತ ಸ್ಥಳವನ್ನು ದಾಟಿಕೊಂಡು ಹೋಗಬೇಕು ಎನ್ನುತ್ತಾರೆ ವಿದ್ಯಾರ್ಥಿಗಳು.

ನೆಹರೂ ಕ್ರೀಡಾಂಗಣಕ್ಕೆ ಹೋಗುವ ರಸ್ತೆಯ ಪಕ್ಕದಲ್ಲೇ ಕಟ್ಟಡ ಇರುವುದರಿಂದ ನಾಯಿಗಳು ಬಂದಿಲ್ಲಿ ಮಲಗುತ್ತವೆ. ಸೂಕ್ತವಾದ ಕಂಪೌಂಡ್ ಇಲ್ಲಿ ಅತ್ಯವಶ್ಯವಾಗಿದೆ. ಕಂಪೌಂಡ್ ನಿರ್ಮಿಸಿ ಮರಗಿಡಗಳನ್ನು ನೆಟ್ಟು ಬೆಳೆಸಿದಲ್ಲಿ ಸುಂದರ ಉದ್ಯಾನ ರೂಪುಗೊಳ್ಳುತ್ತದೆ. ಸಂಪನ್ನು ಮಾಡಿದ್ದರೂ ಸರಿಯಾಗಿ ರೂಪಿಸದೇ ಅದನ್ನು ಈಗ ಮುಚ್ಚಿರುವುದರಿಂದ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ~ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

`ಸಂಪನ್ನು ಕಟ್ಟಡ ಕಟ್ಟುವಾಗ ಮಾಡಿದ್ದರು. ಇದರಲ್ಲಿ ಯಾರಾದರೂ ಬಿದ್ದರೆ ಅಪಾಯವೆಂದು ಭಾವಿಸಿ ಗುತ್ತಿಗೆದಾರರು ಅದನ್ನು ಮುಚ್ಚಿದ್ದಾರೆ. ಕಾಂಪೌಂಡ್ ಇಲ್ಲದ ಕಾರಣ ಕಿಟಕಿ ಗಾಜನ್ನು ಒಡೆಯುವುದು ನಡೆಯುತ್ತಿದೆ. ಕಂಪೌಂಡ್ ನಿರ್ಮಿಸಿಕೊಡಲು ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ~ ಎಂದು ಪ್ರಾಂಶುಪಾಲ ನಾಗಭೂಷಣ್ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.