ADVERTISEMENT

ದೂಳುಮಯ ಚಿಕ್ಕಬಳ್ಳಾಪುರ...

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 9:45 IST
Last Updated 8 ಜನವರಿ 2011, 9:45 IST

ಚಿಕ್ಕಬಳ್ಳಾಪುರ: ನಗರದ ಪ್ರಮುಖ ರಸ್ತೆಗಳಾದ ಬಿ.ಬಿ.ರಸ್ತೆ, ಎಂ.ಜಿ.ರಸ್ತೆ, ರೈಲ್ವೆ ನಿಲ್ದಾಣ ರಸ್ತೆ ಮುಂತಾದ ಕಡೆ ಕೇವಲ ಹತ್ತು ನಿಮಿಷ ನಿಂತುಕೊಂಡರೆ ಸಾಕು, ದೂಳಿನ ಮಜ್ಜನವಾಗುತ್ತದೆ. ಬಿಳಿ ಉಡುಪುಗಳೆಲ್ಲವೂ ಕೆಂಪುಮಯವಾಗುತ್ತದೆ. ಕೂದಲೆಲ್ಲವೂ ದೂಳು-ಮಣ್ಣಿನಿಂದ ಅಂಟುಅಂಟಾಗುತ್ತದೆ. ಪಾದಚಾರಿಗಳು ದೂಳಿನಿಂದ ಪಾರಾಗಲು ಒಂದೆಡೆ ಹರಸಾಹಸಪಟ್ಟರೆ, ಮತ್ತೊಂದೆಡೆ ದ್ವಿಚಕ್ರ ವಾಹನ ಸವಾರರು ಭಾರಿ ದೂಳಿನ ನಡುವೆಯೇ ಕಣ್ಣು ಉಜ್ಜಿಕೊಳ್ಳುತ್ತ ಮುಂದೆ ಸಾಗಬೇಕು. ನಂದಿ ಬೆಟ್ಟದ ತಪ್ಪಲಲ್ಲಿ ಸುಂದರ-ಶುಚಿಯಾಗಿರಬೇಕಿದ್ದ ನಗರ ಈಗ ಸಂಪೂರ್ಣ ದೂಳುಮಯವಾಗಿದೆ.

ಬೀಸುವ ಗಾಳಿಯಿಂದ ದೂಳು ಬರುತ್ತದೆ ಎಂಬ ಕಾರಣಕ್ಕಾಗಿ ಸದಾ ಕಿಟಕಿ-ಬಾಗಿಲುಗಳನ್ನು ಮುಚ್ಚಿಕೊಂಡೇ ಇರಬೇಕಾದ ಸ್ಥಿತಿ ಒಂದೆಡೆ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ರಸ್ತೆ ಬದಿಯ ಅಂಗಡಿ ಮಾಲೀಕರು, ವ್ಯಾಪಸ್ಥರರು ಮೂಗು-ಬಾಯಿ ಮುಚ್ಚಿಕೊಂಡೆ ವಹಿವಾಟು ನಡೆಸಬೇಕಾದ ಪರಿಸ್ಥಿತಿ ಇದೆ. ಸಂತೆ ಮಾರುಕಟ್ಟೆ ಬೀದಿ ಪ್ರದೇಶದಲ್ಲಂತೂ ಹಣ್ಣು-ತರಕಾರಿ ಮಾರಾಟಗಾರರು ದೂಳಿನಿಂದ ವ್ಯಾಪಾರ ಮಾಡಲಾಗದೇ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗದೇ ಸಂಕಷ್ಟಪಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಬಿ.ಬಿ.ರಸ್ತೆ ಮತ್ತು ಎಂ.ಜಿ.ರಸ್ತೆಯ ಬದಿಗಳಲ್ಲಿ ಒಳಚರಂಡಿ ಕಾಮಗಾರಿ ಮುಂದುವರೆದಿದ್ದು, ಮಣ್ಣಿನ ಗುಡ್ಡೆಯಿಂದ ಇನ್ನಷ್ಟು ದೂಳು ವ್ಯಾಪಿಸುತ್ತಿದೆ.

ನಗರಪ್ರದೇಶವು ದೂಳುಮಯವಾಗಿದೆ, ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೆಲ ಸಂಘಟನೆಗಳ ಪ್ರತಿನಿಧಿಗಳು ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದ್ದರು. ಮನವಿಪತ್ರ ಸ್ವೀಕರಿಸಿದ್ದ ಉಪವಿಭಾಗಾಧಿಕಾರಿ ಪಿ.ವಸಂತ್‌ಕುಮಾರ್ ಅವರು ಸೂಕ್ತ ಕ್ರಮದ ಬಗ್ಗೆ ಭರವಸೆ ಕೂಡ ನೀಡಿದ್ದರು, ಅದರಂತೆ ಪ್ರತಿ ದಿನ ಎರಡು ಬಾರಿ ದೂಳು ಇರುವ ಕಡೆಯಲೆಲ್ಲ ನೀರು ಹಾಕುವ ವ್ಯವಸ್ಥೆ ಮಾಡಿದರು.

ಆಯಾಯ ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿ ನೀರು ಹಾಕಲಾಗುತ್ತಿದೆಯಾದರೂ ದೂಳಿನ ಆರ್ಭಟ ಮಾತ್ರ ಕೊನೆಗೊಂಡಿಲ್ಲ. ಲಾರಿ ಅಥವಾ ಬಸ್ ವೇಗವಾಗಿ ಹೋದರೆ ಸಾಕು, ಅದರ ಹಿಂಬದಿಯಲ್ಲಿರುವ ವಾಹನ ಸವಾರರಿಗೆ ದೂಳು ಆವರಸಿಕೊಳ್ಳುತ್ತದೆ. ಟಾರು ರಸ್ತೆಯ ಶೇ 50ರಷ್ಟು ಭಾಗದಲ್ಲಿ ಮಣ್ಣು ತುಂಬಿಕೊಂಡಿದ್ದು, ದಿನದಿಂದ ದಿನಕ್ಕೆ ದೂಳಿನ ಪ್ರಮಾಣ ಹೆಚ್ಚುತ್ತಿದೆ.

‘ಮೊದಲೆಲ್ಲ ಇಷ್ಟು ದೂಳು ಇರುತ್ತಿರಲಿಲ್ಲ. ಆದರೆ ಇತ್ತೀಚಿನ ಕೆಲ ದಿನಗಳಿಂದ ಮಾಲಿನ್ಯ ಹೆಚ್ಚಿದ ಮತ್ತು ಸ್ವಚ್ಛತೆ ಕಡೆಗಣಿಸಿದ ಪರಿಣಾಮ ಎಲ್ಲೆಡೆ ದೂಳು ಆವರಿಸಿಕೊಂಡಿದೆ. ಇದರಿಂದ ನಮ್ಮ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ. ಅಂಗಡಿಯಲ್ಲಿನ ಹೊಚ್ಚಹೊಸ ಮಾರಾಟದ ವಸ್ತುಗಳ ಮೇಲೆ ಕೂರುವ ದೂಳನ್ನು ತೆಗೆದು ಸ್ವಚ್ಛಗೊಳಿಸುವುದರಲ್ಲೇ ಸಮಯ ವ್ಯಯವಾಗುತ್ತದೆ. ದೂಳಿನ ನೆಪವೊಡ್ಡಿ ಅಂಗಡಿಯ ಬಾಗಿಲನ್ನು ಅರ್ಧ ಮುಚ್ಚಲೂ ಸಹ ಆಗುವುದಿಲ್ಲ. ವ್ಯಾಪರಕ್ಕೆ ಇನ್ನಷ್ಟು ಧಕ್ಕೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ದೂಳು ನಿಯಂತ್ರಿಸುವುದಾದರೂ ಹೇಗೆ? ವ್ಯಾಪಾರ ಮಾಡುವುದಾದರೂ ಹೇಗೆ’ ಎಂದು ವರ್ತಕರು ಪ್ರಶ್ನಿಸುತ್ತಾರೆ.

‘ಮನೆಯ ಕಿಟಕಿ ಬಾಗಿಲುಗಳನ್ನು ತೆರೆದರೆ ಸಾಕು, ದೂಳು ಮನೆಯೊಳಗೆ ಬರುತ್ತದೆ. ದೂಳಿನಿಂದ ಪುಟ್ಟ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂಬ ಆತಂಕ ಕೂಡ ಆಗುತ್ತದೆ.ದಿನಂಪ್ರತಿ ಬೆಳಿಗ್ಗೆ ಮತ್ತು ಸಂಜೆ ಹೊತ್ತು ರಸ್ತೆ ಬದಿಯ ಮಣ್ಣು ತೆಗೆದು, ದೂಳು ನಿವಾರಿಸಬೇಕಾದ ನಗರಸಭೆಯವರು ಏನೂ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ.ತಂಗಾಳಿಗಾಗಿ ಸಂಜೆ ಹೊತ್ತು ಮನೆ ಮುಂದೆ ಕೂರಲೂ ಕೂಡ ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಗೃಹಿಣಿಯರು ಹೇಳುತ್ತಾರೆ.

‘ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ ತಿಪ್ಪೆಗುಂಡಿಗಳನ್ನು ಶುಚಿಗೊಳಿಸುವ ನಗರಸಭೆಯವರು ದೂಳಿನ ನಿವಾರಣೆಗೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪ್ರಮುಖ ರಸ್ತೆಗಳೇ ದೂಳುಮಯಗೊಂಡರೆ, ನಾವು ಸಂಚರಿಸುವುದು ಮತ್ತು ಈ ನಗರದಲ್ಲಿ ಜೀವನ ಮಾಡುವುದಾದರೂ ಹೇಗೆ?’ ಎಂದು ಸಾರ್ವಜನಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.