ADVERTISEMENT

‘ನಗರಸಭೆಯ ಹೊರಗುತ್ತಿಗೆ ನೌಕರನ ಮಗಳು ರಾಜ್ಯಕ್ಕೆ 3 ನೇ ಸ್ಥಾನ’

​ಪ್ರಜಾವಾಣಿ ವಾರ್ತೆ
Published 8 ಮೇ 2018, 10:01 IST
Last Updated 8 ಮೇ 2018, 10:01 IST

ಚಿಂತಾಮಣಿ: ನಗರದ ಇಬ್ಬರು ವಿದ್ಯಾರ್ಥಿನಿಯರು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಗಳಿಸುವುದರ ಮೂಲಕ ರಾಜ್ಯದಲ್ಲಿ 3ನೇ ಸ್ಥಾನ ಗಳಿಸಿದ್ದಾರೆ.

ಆರ್‌.ಕೆ.ವಿಷನ್‌ ವಿದ್ಯಾಸಂಸ್ಥೆಯ ವಿ.ಧನಲಕ್ಷ್ಮಿಸಾಧಕಿ. ನಗರಸಭೆಯಲ್ಲಿ ಹೊರಗುತ್ತಿಗೆ ಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡುತ್ತಿರುವ ವೈ. ವೆಂಕಟೇಶ್‌ ಮತ್ತು ವಿಕ್ರಂ ಶಾಲೆ ಶಿಕ್ಷಕಿ ಮುನಿರತ್ನಮ್ಮ ದಂಪತಿ ಪುತ್ರಿ ವಿ.ಧನಲಕ್ಷ್ಮಿ.

‘ಧನಲಕ್ಷ್ಮಿ ಪ್ರತಿಭಾನ್ವಿತೆ. ಎಲ್ಲ ಪರೀಕ್ಷೆಗಳಲ್ಲೂ ಪ್ರಥಮ ಸ್ಥಾನ ಪಡೆಯುತ್ತಿದ್ದಳು. ರಾತ್ರಿ 11.30ರವರೆಗೆ ಓದುತ್ತಿದ್ದಳು. ರಾಜ್ಯಕ್ಕೆ 3ನೇ ಸ್ಥಾನ ಪಡೆದಿರುವುದು ತುಂಬಾ ಸಂತಸ ತಂದಿದೆ’ ಎಂದು ವೆಂಕಟೇಶ್‌ ಮತ್ತು ಮುನಿರತ್ನಮ್ಮ ಪ್ರಜಾವಾಣಿಗೆ ತಿಳಿಸಿದರು.

ADVERTISEMENT

‘ತರಗತಿಯಲ್ಲಿ ಶಿಕ್ಷಕರು ಮಾಡುವ ಪಾಠವನ್ನು ಶ್ರದ್ಧೆಯಿಂದ ಕೇಳುತ್ತಿದ್ದೆ. ಇದೇ ಬಹುತೇಕ ನನ್ನ ಯಶಸ್ಸಿಗೆ ಕಾರಣ. ಶಾಲೆಯಲ್ಲಿ 9 ಟೆಸ್ಟ್‌ಗಳು 6 ಪುನರಾವರ್ತನೆಯ ಪರೀಕ್ಷೆಗಳು ಸಹ ತುಂಬಾ ಅನುಕೂಲವಾದವು. ಪರೀಕ್ಷಾ ಭಯ, ಆತಂಕವನ್ನು ದೂರ ಮಾಡಿದವು. ಶಿಕ್ಷಕರು, ಶಾಲೆ ಮತ್ತು ಪೋಷಕರ ಸಹಕಾರ ಪ್ರೋತ್ಸಾಹವೇ ನನ್ನ ಯಶಸ್ಸಿನ ಗುಟ್ಟು. ಈ ಎಲ್ಲ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಧನಲಕ್ಷ್ಮಿ ತಿಳಿಸಿದರು.

‘ಮುಂದೆ ಐಐಟಿ ವ್ಯಾಸಂಗ ಮಾಡಬೇಕು, ಐ.ಎ.ಎಸ್‌ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಆಸೆ ಇದೆ. ಶಿಕ್ಷಕರ ಬೋಧನೆಯ ಕಡೆ ಹೆಚ್ಚಿನ ಗಮನಹರಿಸಿ. ಪುಸ್ತಕದ ಬದನೆಕಾಯಿಗಳಾಗಬೇಡಿ. ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸಿ’ ಎಂದು ಕಿರಿಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.