ADVERTISEMENT

ನಿದ್ದೆಗೆಟ್ಟು ಕಳ್ಳರ ಹುಡುಕಾಟ!

ಮಕ್ಕಳ ಕಳ್ಳರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗುತ್ತಿರುವ ವದಂತಿ

​ಪ್ರಜಾವಾಣಿ ವಾರ್ತೆ
Published 22 ಮೇ 2018, 10:51 IST
Last Updated 22 ಮೇ 2018, 10:51 IST
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾವಚಿತ್ರಗಳು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾವಚಿತ್ರಗಳು.   

ಚಿಂತಾಮಣಿ: ತಾಲ್ಲೂಕು ಹಾಗೂ ಜಿಲ್ಲೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಗಳು ವಾಟ್ಸ್‌ಆ್ಯಪ್, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು ಜನರು ಭಯಭೀತರಾಗಿದ್ದಾರೆ.

ಮಕ್ಕಳನ್ನು ಕದ್ದು ಹೃದಯ, ಕಿಡ್ನಿ ಮತ್ತಿತರ ಅಂಗಾಂಗಗಳನ್ನು ಕಿತ್ತುಕೊಂಡು ಹೋಗುವರು ಎಂಬ ವದಂತಿಗೆ ಜನರು ಬೆಚ್ಚಿ ಬಿದ್ದಿದ್ದಾರೆ.  2011ರ ಆಗಸ್ಟ್‌ನಲ್ಲಿ ತಾಲ್ಲೂಕಿನಲ್ಲಿ ಇದೇ ರೀತಿಯ ವದಂತಿ ಹರಡಿ ಆತಂಕ ನಿರ್ಮಾಣವಾಗಿತ್ತು.

ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಜನರೇ ಕಾವಲು ಕಾಯುತ್ತಿದ್ದರು. ಬಾರ್ಲಹಳ್ಳಿ ಮತ್ತು ಯರ್ರಕೋಟೆ ಬಳಿ 10 ಜನ ಅಪರಿಚಿತರನ್ನು ಕಳ್ಳರು ಎಂದು ಭಾವಿಸಿ ಸಾರ್ವಜನಿಕರು ಹಿಡಿದರು. ಕೈ ಮತ್ತು ದೊಣ್ಣೆಯಿಂದ ಥಳಿಸಿ 10 ಜನರನ್ನು ಕೊಂದರು.

ADVERTISEMENT

ಅಂದಿನ ಪರಿಸ್ಥಿತಿ ಮತ್ತು ಘಟನೆಗಳು ಮತ್ತೆ ಮರುಕಳಿಸುತ್ತವೆಯೇ ಎನ್ನುವ ಆತಂಕವೂ ಕೆಲವರಲ್ಲಿ ಮನೆ ಮಾಡಿದೆ. ಆಗಲೂ ಇದೇ ರೀತಿಯ ಸುಳ್ಳು ಸುದ್ದಿಗಳು ಬಾಯಿಂದ ಬಾಯಿಗೆ ಹರಿದಾಡುತ್ತಿದ್ದವು. ಇಂತಹ ಘಟನೆಗಳು ನಡೆದರೂ ಪೊಲೀಸರು ಸೂಕ್ತಕ್ರಮಕೈಗೊಳ್ಳಲಿಲ್ಲ. ಆಕ್ರೋಶಗೊಂಡ ಜನರು ಪೊಲೀಸರಿಂದ ನಮಗೆ ರಕ್ಷಣೆ ದೊರೆಯುವುದಿಲ್ಲ ಎಂದು ನಂಬಿ ತಮ್ಮ ರಕ್ಷಣೆಗೆ ತಾವೇ ಮುಂದಾಗಿದ್ದರಿಂದ 10 ಜನರು ಸಾಯಬೇಕಾಯಿತು. ಕರ್ತವ್ಯಲೋಪದ ಮೇಲೆ ಪೊಲೀಸ್‌ ಅಧಿಕಾರಿಗಳು ಶಿಕ್ಷೆಗೂ ಗುರಿಯಾದರು.

ಇತ್ತೀಚೆಗೆ ಇದಕ್ಕಿಂತಲೂ ಹೆಚ್ಚು ಜನರನ್ನು ಕೆರಳಿಸುವ ಹಾಗೂ ಭಯ ಭೀತರನ್ನಾಗಿಸುವ ಮಕ್ಕಳ ಕಳ್ಳರ ಬಗ್ಗೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಭಾವಚಿತ್ರಗಳನ್ನು ಹರಿಬಿಟ್ಟಿದ್ದಾರೆ. ಇದರ ಸತ್ಯಾಸತ್ಯತೆ ತಿಳಿದುಕೊಳ್ಳದೆ ಸಂದೇಶಗಳು ಎಲ್ಲೆಡೆ ಹಬ್ಬುತ್ತಿವೆ. ಈ ಸುದ್ದಿಗಳಿಂದ ಜನರು ರಾತ್ರಿ ನಿದ್ರೆಗೆಟ್ಟು ಕಳ್ಳರನ್ನು ಹುಡುಕುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಕಳ್ಳರ ಸುದ್ದಿಯಿಂದ ಎಚ್ಚೆತ್ತ ಪೊಲೀಸರು ‘ಇವು ಸುಳ್ಳು ಸುದ್ದಿ. ಯಾರೂ ನಂಬಬಾರದು. ಆತಂಕ ಪಡಬಾರದು. ಕಿಡಿಗೇಡಿಗಳು 3–4 ವರ್ಷಗಳ ಹಿಂದಿನ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಆಂಧ್ರಪ್ರದೇಶದಿಂದಲೂ ಮಾಹಿತಿ ಪಡೆಯಲಾಗಿದೆ. ಇದು ಕೇವಲ ವದಂತಿ’ ಎಂದು ಹೇಳಿದ್ದಾರೆ.

ತಾಲ್ಲೂಕಿನ ದೇವಾಲಯಗಳಲ್ಲಿ ಹಾಗೂ ವಿವಿಧೆಡೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಬೇಕು. ಜನಸಂಪರ್ಕ ಮತ್ತು ಶಾಂತಿ ಸಭೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುವರು.

**
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು. ಜನರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಅಪರಿಚಿತ ವ್ಯಕ್ತಿಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು 
–ನಾಗೇಶ್‌ .ಡಿವೈಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.