ಚಿಕ್ಕಬಳ್ಳಾಪುರ: `ಅಂಬೇಡ್ಕರ್ ನಗರ (ವಾರ್ಡ್ ಸಂಖ್ಯೆ-30) ಬಡಾವಣೆಗೆ ಸಮರ್ಪಕವಾಗಿ ನೀರು ಪೂರೈಸುವುದು, ಶೌಚಾಲಯ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಬೇಡ್ಕರ್‌ನಗರದ ನಿವಾಸಿಗಳು ಬುಧವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿದರು.
ಬಿಂದಿಗೆ, ಬಕೆಟ್‌ಗಳನ್ನು ಹಿಡಿದುಕೊಂಡು ದಿಢೀರ್‌ನೇ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, `ನೀರು, ಶೌಚಾಲಯ ಮತ್ತು ಮೂಲಸೌಕರ್ಯ ಪೂರೈಕೆಯಿಲ್ಲದೇ ನಾವು ಬಡಾವಣೆಗಳಲ್ಲಿ ಬದುಕುವುದಾದರೂ ಹೇಗೆ? ನೆಮ್ಮದಿಯಿಂದ ಜೀವನ ನಡೆಸುವುದಾದರೂ ಹೇಗೆ' ಎಂದು ಪ್ರಶ್ನಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ ದಲಿತ ಸಂಘರ್ಷ ಸಮಿತಿಯ ಮುಖಂಡ ಕೆ.ಸಿ.ರಾಜಾಕಾಂತ್ ಮಾತನಾಡಿ, `ಅಂಬೇಡ್ಕರ್ ನಗರದತ್ತ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದ ಪರಿಣಾಮವಾಗಿಯೇ ಬಡಾವಣೆಯ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ. ಕನಿಷ್ಠ ನೀರು ಪೂರೈಸಲು ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸಲು ಸಹ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ' ಎಂದು ಆರೋಪಿಸಿದರು.
`ಹದಿನೈದು ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನೀರು ಪೂರೈಸಲಾಗುತ್ತಿದ್ದು, ಅದು ಸಾಕಾಗುವುದಿಲ್ಲ. ನೀರು ಸಿಗದ ಕಾರಣ ದೈನಂದಿನ ಜೀವನವೇ ಅಸ್ತವ್ಯಸ್ಥಗೊಂಡಿದ್ದು, ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ನೀರು ಪೂರೈಕೆಯಿಲ್ಲದ ಕಾರಣ ಇಡೀ ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯವನ್ನು ರಕ್ಷಿಸಿಕೊಳ್ಳಲು ಕೂಡ ಆಗುತ್ತಿಲ್ಲ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
`ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯನ್ನು ಬಹಿಷ್ಕರಿಸಿದ್ದನ್ನೇ ನೆಪವಾಗಿಸಿಕೊಂಡಿರುವ ನಗರಸಭೆ ಅಧಿಕಾರಿಗಳು ಬಡಾವಣೆಯ ಸ್ಥಿತಿಗತಿಯತ್ತ ಸ್ವಲ್ಪವೂ ಗಮನಹರಿಸಿಲ್ಲ. ಯಾವುದಾದರೂ ಸಮಸ್ಯೆ ಬಗ್ಗೆ ಕೇಳಿದರೆ, ಚುನಾವಣೆ ಬಹಿಷ್ಕರಿಸಿದ್ದೀರಿ. ಅದಕ್ಕಾಗಿ ಕಷ್ಟ ಅನುಭವಿಸುತ್ತಿದ್ದೀರಿ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಬಡಾವಣೆಯಲ್ಲಿ ವಾಸಿಸುವುದಾದರೂ ಹೇಗೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
`ಬಡಾವಣೆಯಲ್ಲಿರುವ ಬಹುತೇಕ ಮನೆಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲ. ಸಾರ್ವಜನಿಕ ಶೌಚಾಲಯಗಳಿದ್ದರೂ ನೀರಿಲ್ಲದ ಕಾರಣ ಅವು ಪ್ರಯೋಜನಕ್ಕೆ ಬರುತ್ತಿಲ್ಲ. ಇದರ ಪರಿಣಾಮವಾಗಿ ಬಡಾವಣೆಯ ಮಕ್ಕಳು ಮತ್ತು ಹಿರಿಯರು ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ. ಇದೇ ಕಾರಣದಿಂದ ರೋಗ-ರುಜಿನಗಳಿಗೂ ತುತ್ತಾಗುತ್ತಿದ್ದಾರೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಸಿ.ವಿ.ವೆಂಕಟೇಶ್, ಎಸ್‌ಟಿಡಿ ವೆಂಕಟೇಶ್, ಮುನಿರಾಜು, ಮಧು, ಬಡಾವಣೆಯ ನಿವಾಸಿಗಳಾದ ಶಿವಪ್ಪ, ಸುರೇಶ್, ವೆಂಕಟಸ್ವಾಮಿ, ರಂಗನಾಥ್, ನರಸಿಂಹಯ್ಯ, ಮುರಳಿ, ಗೋವಿಂದ್, ಶಿವಕುಮಾರ್, ಸತ್ಯನಾರಾಯಣ, ರಮೇಶ್, ಮುನಿರತ್ನಮ್ಮ, ಮುನಿಯಮ್ಮ, ತಿಪ್ಪಕ್ಕ, ರತ್ನಮ್ಮ, ಕದಿರಮ್ಮ, ಮುರಳಿ, ಆನಂದ್, ಚಿನ್ನಪ್ಪ, ನಾರಾಯಣಪ್ಪ, ಕುಮಾರ್, ರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.