ADVERTISEMENT

ಪೊಲೀಸರಿಂದ ಪಾರಾಗಲು ಯತ್ನ; ಚರಂಡಿಗೆ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 6:30 IST
Last Updated 13 ಏಪ್ರಿಲ್ 2013, 6:30 IST

ಚಿಕ್ಕಬಳ್ಳಾಪುರ: ಯುಗಾದಿ ಹಬ್ಬದ ವೇಳೆ ಚೌಕಾಭಾರ ಆಡುತ್ತಿದ್ದ ಗುಂಪನ್ನು ಪೊಲೀಸರು ಬೆನ್ನಟ್ಟಿ ಬಂದಾಗ ವ್ಯಕ್ತಿಯೊಬ್ಬ ಚರಂಡಿಯಲ್ಲಿ ಬಿದ್ದು, ಹೃದಯಾಘಾತದಿಂದ ಮೃತಪಟ್ಟ ಘಟನೆ ದಿಬ್ಬೂರು ಸಮೀಪದ ದೊಡ್ಡತಿಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

`ಪೊಲೀಸರ ಹಲ್ಲೆಯಿಂದಲೇ ಈ ದುರ್ಘಟನೆ ಸಂಭವಿಸಿದೆ' ಎಂದು ಆರೋಪಿಸಿ ಮೃತರ ಸಂಬಂಧಿಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದ ಕಾರಣ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

ದೊಡ್ಡತಮ್ಮನಹಳ್ಳಿ ನಿವಾಸಿ ಮುನಿರಾಜು (25) ಮೃತ ವ್ಯಕ್ತಿ. ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಆತ, ಪತ್ನಿ ಸ್ವಾತಿ ಮತ್ತು ತಾಯಿ ಗಂಗಲಕ್ಷ್ಮಮ್ಮ ಜೊತೆ ವಾಸವಿದ್ದ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೊಡ್ಡತಮ್ಮನಹಳ್ಳಿಯಲ್ಲಿ ಗುರುವಾರ ಪೊಲೀಸರ ಕಾರ್ಯಾಚರಣೆ ವೇಳೆ ಕೆಲವರು ಶಾಲೆಯೊಂದರ ಬಳಿ ಚೌಕಾಭಾರ ಆಡುತ್ತಿರುವುದು ಗಮನಿಸಿದರು. ಆಡುತ್ತಿದ್ದ ಗುಂಪನ್ನು ಹಿಡಿಯಲೆತ್ನಿಸಿದಾಗ, ಎಲ್ಲರೂ ಪರಾರಿಯಾದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮುನಿರಾಜು ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ. ಈ ದುರ್ಘಟನೆಗೆ ಪೊಲೀಸರೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು.

ವಿವರ: ದೊಡ್ಡತಮ್ಮನಹಳ್ಳಿ ಗ್ರಾಮದ ಶಾಲೆ ಆವರಣದಲ್ಲಿ ಮುನಿರಾಜು ಮತ್ತು ಆತನ ಗೆಳೆಯರು ಚೌಕಾಭಾರ ಆಟವಾಡುತ್ತಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ನಿಗಾ ವಹಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದರು. ಅವರನ್ನು ಕಂಡೊಡನೆ ಮುನಿರಾಜು ಮತ್ತು ಆತನ ಸ್ನೇಹಿತರು ಅಲ್ಲಿಂದ ಓಡಲು ಆರಂಭಿಸಿದರು. ಬೆನ್ನಟ್ಟಿದ ಪೊಲೀಸರು ಅವರನ್ನು ಹಿಡಿಯಲು ಮುಂದಾದರು. ನಿಯಂತ್ರಣ ಕಳೆದುಕೊಂಡ ಮುನಿರಾಜು ಚರಂಡಿಯಲ್ಲಿ ಬಿದ್ದು ಪ್ರಜ್ಞಾಹೀನನಾದ.

`ಮುನಿರಾಜು ಪ್ರಜ್ಞೆ ಕಳೆದುಕೊಂಡು ಬಿದ್ದ ವಿಷಯ ತಿಳಿದ ಕೂಡಲೇ ದಿಬ್ಬೂರು ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಆಸ್ಪತ್ರೆಯ ವೈದ್ಯರು ಮುನಿರಾಜುಗೆ ಎದೆ ಮತ್ತು ತಲೆ ಭಾಗಕ್ಕೆ ಏಟು ಬಿದ್ದಿದ್ದು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು. ಮುನಿರಾಜು ಸಾವನ್ನಪ್ಪಲು ಪೊಲೀಸರೇ ಕಾರಣ. ಪೊಲೀಸರು ಬೆನ್ನಟ್ಟದಿದ್ದರೆ, ಮುನಿರಾಜುಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಬರುತ್ತಿರಲಿಲ್ಲ. ಘಟನೆಗೆ ಕಾರಣರಾದ ಪೊಲೀಸರನ್ನು ಈ ಕೂಡಲೇ ಅಮಾನತುಗೊಳಿಸಬೇಕು' ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಮೃತದೇಹವನ್ನು ಆಟೊರಿಕ್ಷಾದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದ ಗ್ರಾಮಸ್ಥರು, `ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು' ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಗ್ರಾಮಸ್ಥರು, `ಮುನಿರಾಜು ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಮಗೆ ನ್ಯಾಯ ದೊರಕಿಸಬೇಕು' ಎಂದು ಪಟ್ಟು ಹಿಡಿದರು.

ಪ್ರತಿಭಟನಾನಿರತರನ್ನು ಸಮಾಧಾನಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಿವಪ್ರಸಾದ್ ಮಾತನಾಡಿ, `ಘಟನೆ ಕುರಿತು ಸಮಗ್ರ ಮಾಹಿತಿ ಪಡೆಯಲಾಗುವುದು. ಮುನಿರಾಜು ಸಾವಿಗೆ ಕಾರಣವೇನು ಎಂಬುದು ಪತ್ತೆ ಮಾಡಲಾಗುವುದು. ಪೊಲೀಸರಿಂದ ತಪ್ಪಾಗಿದ್ದಲ್ಲಿ ಅವರನ್ನು ಅಮಾನತುಪಡಿಸಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.